ನವದೆಹಲಿ: ಭಾರತದ ಚಂದ್ರಯಾನ -3 (Chandrayaan- 3) ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಬಳಿ (Soft Landing) ಇಳಿದ ತಕ್ಷಣ ದೇಶವೇ ಸಂಭ್ರಮದಲ್ಲಿ ತೇಲಾಡುತ್ತಿದೆ. ಚಂದ್ರನ ಮೇಲೆ ಮೊದಲ ಬಾರಿಗೆ ಲ್ಯಾಂಡರ್ ಇಳಿಸಿದ ಇಸ್ರೊ (ISRO) ಸಾಧನೆಯನ್ನು ಪಕ್ಷಾತೀತವಾಗಿ ನಾಯಕರು ಶ್ಲಾಘಿಸಿದ್ದಾರೆ. ವಿಜ್ಞಾನಿಗಳ ಜಾಣ್ಮೆ ಮತ್ತು ಕಠಿಣ ಪರಿಶ್ರಮವನ್ನು ಕೊಂಡಾಡಿದ್ದಾರೆ.
ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಸ್ರೋ ತಂಡವನ್ನು ಅಭಿನಂದಿಸಿದ್ದಾರೆ. “ಚಂದ್ರಯಾನ -3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಲೀಸಾಗಿ ಇಳಿಯುವುದು ನಮ್ಮ ವೈಜ್ಞಾನಿಕ ಸಮುದಾಯದ ದಶಕಗಳ ಅದ್ಭುತ ಜಾಣ್ಮೆ ಮತ್ತು ಕಠಿಣ ಪರಿಶ್ರಮದ ಫಲವಾಗಿದೆ. 1962 ರಿಂದ ಭಾರತದ ಬಾಹ್ಯಾಕಾಶ ಯೋಜನೆಗಳು ಹೊಸ ಎತ್ತರಕ್ಕೆ ಏರುತ್ತಲೇ ಇದೆ. ಇದು ತಲೆಮಾರುಗಳ ಯುವ ಕನಸುಗಾರರಿಗೆ ಸ್ಫೂರ್ತಿ ” ಎಂದು ಅವರು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
140 ಕೋಟಿ ಆಕಾಂಕ್ಷೆಗಳನ್ನು ಹೊಂದಿರುವ ದೇಶವು ತನ್ನ ಆರು ದಶಕಗಳ ಸುದೀರ್ಘ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮತ್ತೊಂದು ಸಾಧನೆಗೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೊಂಡಾಡಿದ್ದಾರೆ.
“ನಮ್ಮ ವಿಜ್ಞಾನಿಗಳು, ಬಾಹ್ಯಾಕಾಶ ಎಂಜಿನಿಯರ್ಗಳು, ಸಂಶೋಧಕರು, ಈ ಯೋಜನೆಯನ್ನು ಭಾಗಿಯಾಗಿರುವ ಪ್ರತಿಯೊಬ್ಬರ ಕಠಿಣ ಪರಿಶ್ರಮ, ಸಾಟಿಯಿಲ್ಲದ ಜಾಣ್ಮೆ ಮತ್ತು ಅಚಲ ಸಮರ್ಪಣೆಗೆ ನಾವು ಋಣಿಯಾಗಿದ್ದೇವೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್
ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. “ಇದು ಐತಿಹಾಸಿಕ ದಿನ. ಇದು ದೇಶಕ್ಕೆ ದೊಡ್ಡ ಸಾಧನೆಯಾಗಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಚಂದ್ರಯಾನ -3 ರ ಯಶಸ್ಸಿಗಾಗಿ ದೇಶವಾಸಿಗಳು, ವಿಜ್ಞಾನಿಗಳು, ಎಂಜಿನಿಯರ್ಗಳು ಮತ್ತು ಇಸ್ರೋದ ಉದ್ಯೋಗಿಗಳಿಗೆ ಅನೇಕ ಅಭಿನಂದನೆಗಳು. ಭಾರತ್ ಮಾತಾ ಕಿ ಜೈ” ಎಂದು ಅವರು ಹಿಂದಿಯಲ್ಲಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಿ.ಚಿದಂಬರಂ
ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಚಂದ್ರಯಾನ -3 ರ ಯಶಸ್ಸಿಗೆ ಶುಭ ಹಾರೈಸಿದ್ದಾರೆ. ಮನುಷ್ಯ ಹೋಗದ ಸ್ಥಳಕ್ಕೆ ನೌಕೆಯನ್ನು ಕಳುಹಿಸುವ ಮೂಲಕ ಭಾರತ ಇನ್ನಷ್ಟು ಎತ್ತರಕ್ಕೆ ಹೋಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಭಾರತದ ಎಲ್ಲಾ ಜನರು ಚಂದ್ರಯಾನ -3 ಮಿಷನ್ನ ಯಶಸ್ಸಿನ ಬಗ್ಗೆ ಹೆಮ್ಮೆಪಡುತ್ತಾರೆ ಮತ್ತು ಮಿಷನ್ನಲ್ಲಿ ಕೆಲಸ ಮಾಡಿದ ನಮ್ಮ ವಿಜ್ಞಾನಿಗಳು, ಎಂಜಿನಿಯರ್ಗಳು ಮತ್ತು ತಂತ್ರಜ್ಞರನ್ನು ಹೃತ್ಪೂರ್ವಕವಾಗಿ ಅಭಿನಂದಿಸುವೆ. ನಮ್ಮ ಬಾಹ್ಯಾಕಾಶ ಅನ್ವೇಷಣೆಯ ಕಥೆ ಆರ್ಯಭಟದಿಂದ ಪ್ರಾರಂಭವಾಯಿತು. ಇಸ್ರೋ ಈಗ ಚಂದ್ರಯಾನ -3 ರೊಂದಿಗೆ ಸುವರ್ಣ ಅಧ್ಯಾಯವನ್ನು ಬರೆದಿದೆ ಎಂದು ಬರೆದುಕೊಂಡಿದ್ದಾರೆ. ಎಂದು ಅವರು ಹೇಳಿದರು.
ಮಮತಾ ಬ್ಯಾನರ್ಜಿ
ನಮ್ಮ ವಿಜ್ಞಾನಿಗಳು ದೇಶದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗೆ ಸಾಕ್ಷಿಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಚಂದ್ರನತ್ತ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಕಳುಹಿಸುವ ನಮ್ಮ ರಾಷ್ಟ್ರದ ಅದ್ಭುತ ಸಾಧನೆಗೆ ಅಭಿನಂದನೆಗಳು. ನಮ್ಮ ವಿಜ್ಞಾನಿಗಳು ದೇಶದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗೆ ಸಾಕ್ಷಿಯಾಗಿದ್ದಾರೆ. ಭಾರತ ಈಗ ಬಾಹ್ಯಾಕಾಶದ ಸೂಪರ್ ಲೀಗ್ನಲ್ಲಿದೆ. ಈ ಭವ್ಯ ಕ್ಷಣವನ್ನು ಆಚರಿಸೋಣ ಮತ್ತು ಜ್ಞಾನ ಮತ್ತು ಅನ್ವಯಗಳ ಗಡಿ ಪ್ರದೇಶಗಳಲ್ಲಿ ಭಾರತದ ಮತ್ತಷ್ಟು ಪ್ರಗತಿಗಾಗಿ ಪ್ರಾರ್ಥಿಸೋಣ. ಜೈ ಇಂಡಿಯಾ, ಜೈ ಹಿಂದ್!” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತದ ಮೂರನೇ ಚಂದ್ರಯಾನ -3 ಒಟ್ಟು 41 ದಿನಗಳ ದೋಷರಹಿತ ಯಾನದ ನಂತರ ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದೆ. ನಾಲ್ಕು ವರ್ಷಗಳಲ್ಲಿ ಎರಡನೇ ಪ್ರಯತ್ನದಲ್ಲಿ ಚಂದ್ರನ ಮೇಲೆ ಇಳಿಯುವ ಮೂಲಕ, ಯುಎಸ್, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಂತರ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯುವ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ.