ನವದೆಹಲಿ: ಸತತ ಸೋಲುಗಳಿಂದ ಜರ್ಜಿತರಾಗಿರುವ ಕಾಂಗ್ರೆಸ್ ಪಕ್ಷಕ್ಕೆ (Congress Party) ಭಾನುವಾರ ಮತ್ತೊಂದು ಹೊಡೆತ ಬಿದ್ದಿದೆ. ಮುಂಬೈನಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಮಿಲಿಂದ್ ದಿಯೋರಾ (Milind Deora) ಅವರು ಪಕ್ಷಕ್ಕೆ ಗುಡ್ ಬೈ ಹೇಳಿದ್ದು, ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಪಕ್ಷವನ್ನು (Shiv Sena) ಸೇರ್ಪಡೆಯಾಗುತ್ತಿದ್ದಾರೆ. ಮಿಲಿಂದ್ ದಿಯೋರಾ ನಿರ್ಗಮನೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi Team) ಅವರ ಆಪ್ತ ಬಳಗದ ಬಹುತೇಕರು ಪಕ್ಷ ತೊರೆದಂತಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಮಣಿಪುರದಿಂದ ಮಹಾರಾಷ್ಟ್ರದವರೆಗೂ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಭಾನುವಾರ ಆರಂಭಿಸಿದೆ. ಆದರೆ, ತಮ್ಮದೇ ಪಕ್ಷದ ನಾಯಕರನ್ನು ಹಿಡಿದಿಟ್ಟುಕೊಳ್ಳಲಾಗುತ್ತಿಲ್ಲ ಎಂದು ಬಿಜೆಪಿ ಟೀಕಿಸಿದೆ. ಕಾಂಗ್ರೆಸ್ ಪಕ್ಷವನ್ನು ತೊರೆದ ಪ್ರಮುಖ ನಾಯಕರಾರು ಎಂದು ತಿಳಿದುಕೊಳ್ಳೋಣ ಬನ್ನಿ…
ಉತ್ತರ ಪ್ರದೇಶ- ಕಪಿಲ್ ಸಿಬಲ್
ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಕಪಿಲ್ ಸಿಬಲ್ ಅವರು 2022ರ ಮೇ 16ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ರಾಜೀನಾಮೆ ನೀಡಿದ ಒಂದು ವಾರದ ಬಳಿಕ ಅವರು ಈ ಬಗ್ಗೆ ಘೋಷಣೆ ಮಾಡಿದ್ದರು. ರಾಜ್ಯಸಭೆಯಿಂದ ನಿವೃತ್ತರಾಗಿದ್ದ ಅವರನ್ನು ಪಕ್ಷವು ಮತ್ತೊಂದು ಅವಧಿಗೆ ಆಯ್ಕೆ ಮಾಡಲು ಮುಂದಾಗಲಿಲ್ಲ. ಹಾಗಾಗಿ, ಅವರು ರಾಜೀನಾಮೆ ನೀಡಿದರು ಮತ್ತು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದರು. ಆದರೆ, ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂದು ಅವರು ಘೋಷಣೆ ಮಾಡಿದ್ದಾರೆ.
ಕಾಶ್ಮೀರ- ಗುಲಾಮ್ ನಬಿ ಆಜಾದ್
ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಗುಲಾಮ್ ನಬಿ ಆಜಾದ್ ಅವರು 2022ರಲ್ಲಿ ಪಕ್ಷವನ್ನು ತೊರೆದರು. ಆಜಾದ್ ಕೂಡ ರಾಜ್ಯಸಭೆಯಿಂದ ನಿವೃತ್ತರಾದರು ಮತ್ತು ಅವರನ್ನು ಕಾಂಗ್ರೆಸ್ ಪಕ್ಷವು ಮತ್ತೊಂದು ಅವಧಿಗೆ ನೇಮಕ ಮಾಡಲು ಮುಂದಾಗಲಿಲ್ಲ. ಜತೆಗೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ಅವರನ್ನು ಪರಿಗಣಿಸಲಿಲ್ಲ. ಇದರಿಂದ ಕುಪಿತಗೊಂಡ ಅವರು ಪಕ್ಷವನ್ನು ತೊರೆದು ಕಾಶ್ಮೀರದಲ್ಲಿ ತಮ್ಮದೇ ಆದ ಸ್ವಂತ ಪಕ್ಷವನ್ನು ಸ್ಥಾಪಿಸಿದರು. ಕಾಂಗ್ರೆಸ್ ಪಕ್ಷದ ನಾಯಕತ್ವದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ಜಿ23 ಗ್ರೂಪಿನ ನಾಯಕರಾಗಿದ್ದರು. ರಾಹುಲ್ ಗಾಂಧಿ ಅವರನ್ನು ಅಪ್ರಬುದ್ಧ ನಾಯಕ ಎಂದು ಕರೆದಿದ್ದರು.
ಗುಜರಾತ್- ಹಾರ್ದಿಕ್ ಪಟೇಲ್
2022ರ ಮೇ ತಿಂಗಳಲ್ಲಿ ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದರು. ಗುಜರಾತ್ ಪಾಟಿದಾರ್ ನಾಯಕನನ್ನು 2019 ರಲ್ಲಿ ರಾಹುಲ್ ಗಾಂಧಿ ಅವರು ಪಕ್ಷಕ್ಕೆ ಕರೆತಂದಿದ್ದರು. ಗುಜರಾತ್ ಕಾಂಗ್ರೆಸ್ ಬಗ್ಗೆ ಹೆಚ್ಚು ಅಸಮಾಧಾನ ಹೊಂದಿದ್ದ ಹಾರ್ದಿಕ್ ಪಟೇಲ್ ಅವರು ಆ ಕುರಿತು ರಾಹುಲ್ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದರು. ಇಲ್ಲಿನ ನಾಯಕರು ತಮಗೆ ನೀಡುವ ಚಿಕನ್ ಸ್ಯಾಂಡ್‌ವಿಚ್‌ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆಂದು ದೂರಿದ್ದರು. ಅಂದರೆ, ಅವರಿಗೆ ಪಕ್ಷವನ್ನು ಕಟ್ಟುವ ಮನಸ್ಸಿಲ್ಲ ಎಂದು ಹೇಳಿದ್ದರು.
ಉತ್ತರ ಪ್ರದೇಶ- ಅಶ್ವನಿ ಕುಮಾರ್
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಪಕ್ಷದವನ್ನು ತೊರೆದ ಸಚಿವ ಸಂಪುಟದ ಮೊದಲ ವ್ಯಕ್ತಿಯಾಗಿದ್ದಾರೆ. ಪಂಜಾಬ್ ಎಲೆಕ್ಷನ್ ನಡೆಯುವ ಎರಡು ದಿನಗಳ ಮುಂಚೆ ಅಶ್ವನಿ ಕುಮಾರ್ ಅವರು 2019ರ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ನಂತರ ಪಕ್ಷವನ್ನು ತೊರೆದ ಮೊದಲ ನಾಯಕರಾಗಿದ್ದಾರೆ.
ಪಂಜಾಬ್- ಸುನಿಲ್ ಜಾಖಡ್
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸುನಿಲ್ ಜಾಖಡ್ ಅವರು 2022ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದರು. ಅಂದಿನ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಅವರನ್ನು ಟೀಕಿಸಿದ ಬಳಿಕ ಪಕ್ಷದಿಂದ ಹೊರ ಬಂದರು. ಬಳಿಕ ಅವರು ಭಾರತೀಯ ಜನತಾ ಪಾರ್ಟಿಯನ್ನು ಸೇರ್ಪಡೆಯಾದರು. ಪಕ್ಷವು ಅವರನ್ನು ಕಳೆದ ಜುಲೈ ತಿಂಗಳಲ್ಲಿ ಪಂಜಾಬ್ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ಉತ್ತರ ಪ್ರದೇಶ- ಆರ್‌ಪಿಎನ್ ಸಿಂಗ್
ಉತ್ತರ ಪ್ರದೇಶದ ರಾಜಕಾರಣದಲ್ಲಿ ಪ್ರಿಯಾಂಕಾ ಗಾಂಧಿ ತಮ್ಮನ್ನು ನಿರ್ಲಕ್ಷಿಸಿದರು ಎಂಬ ಕಾರಣಕ್ಕೆ ಆರ್‌ಪಿಎನ್ ಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ 2022ರ ಜನವರಿ ತಿಂಗಳಲ್ಲಿ ರಾಜೀನಾಮೆ ನೀಡಿದರು. ಉತ್ತರ ಪ್ರದೇಶ ಚುನಾವಣೆಗಿಂತ ಮುಂಚೆ ಪಕ್ಷವನ್ನು ತೊರೆದ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದರು. ಹಿಂದುಳಿದ ವರ್ಗದ ಪ್ರಮುಖ ನಾಯಕರಾಗಿರುವ ಆರ್‌ಪಿಎನ್ ಸಿಂಗ್ ಅವರನ್ನು ಪ್ರಿಯಾಂಕಾ ಗಾಂಧಿ ಪ್ರಚಾರದ ವೇಳೆ ನೆಗ್ಲೆಕ್ಟ್ ಮಾಡಿದರು ಎನ್ನಲಾಗಿದೆ.
ಮಧ್ಯ ಪ್ರದೇಶ- ಜ್ಯೋತಿರಾಧಿತ್ಯ ಸಿಂಧಿಯಾ
ರಾಹುಲ್ ಗಾಂಧಿ ಅವರ ಆಪ್ತ ಬಳಗದ ಪ್ರಮುಖ ಸದಸ್ಯರಾಗಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಅವರು 2020ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಅಷ್ಟೇ ಅಲ್ಲ ತಮ್ಮೊಂದಿಗೆ 20ಕ್ಕೂ ಅಧಿಕ ಶಾಸಕರನ್ನು ಕರೆದುಕೊಂಡ ಬಂದರು. ಪರಿಣಾಮ ಕಮಲ್ ನಾಥ್ ಸರ್ಕಾರವು ಪತನವಾಯಿತು ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರು ಮತ್ತೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾದರು. ಜ್ಯೋತಿರಾಧಿತ್ಯ ಅವರು ಮಾಧವರಾವ್ ಸಿಂಧಿಯಾ ಅವರ ಪುತ್ರರಾಗಿದ್ದಾರೆ.
ಉತ್ತರ ಪ್ರದೇಶ- ಜಿತಿನ್ ಪ್ರಸಾದ್
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬ್ರಾಹ್ಮಣ ಸಮುದಾಯದ ಪ್ರಮುಖ ನಾಯಕರಾಗಿದ್ದರು. 2021ರಲ್ಲಿ ಕಾಂಗ್ರೆಸ್ ತೊರೆದ ಜಿತಿನ್ ಪ್ರಸಾದ್ ಅವರು ಭಾರತೀಯ ಜನತಾ ಪಾರ್ಟಿಯನ್ನು ಸೇರ್ಪಡೆಯಾದರು. ಬಿಜೆಪಿ ಮಾತ್ರ ನಿಜವಾದ ರಾಜಕೀಯ ಪಕ್ಷವಾಗಿದೆ. ಅದು ಮಾತ್ರವೇ ರಾಷ್ಟ್ರೀಯ ಪಕ್ಷವಾಗಿದ್ದು, ಉಳಿದೆಲ್ಲ ಪಾರ್ಟಿಗಳು ಪ್ರಾದೇಶಿಕ ಪಕ್ಷಗಳು ಎಂದು ಹೇಳಿದ್ದರು. ಅಲ್ಲದೇ, ತಮ್ಮ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದರು.
ಗುಜರಾತ್- ಅಲ್ಫೇಶ್ ಠಾಕೂರ್
ಕಾಂಗ್ರೆಸ್‌ನ ಮಾಜಿ ಶಾಸಕ ಅಲ್ಪೇಶ್ ಠಾಕೂರ್ ಅವರು 2019ರಲ್ಲಿ ಪಕ್ಷವನ್ನು ತೊರೆದರು. ರಾಜ್ಯಸಭೆಗಾಗಿ ನಡೆದ ಬೈ ಎಲೆಕ್ಷನ್‌ನಲ್ಲಿ ಅವರು ಪಕ್ಷದ ಅಭ್ಯರ್ಥಿಯ ವಿರುದ್ಧವಾಗಿ ಮತ ಚಲಾಯಿಸಿದ್ದರು. ರಾಜೀನಾಮೆ ನೀಡಿದ ಮಾರನೇ ದಿನವೇ ಅವರು ಭಾರತೀಯ ಜನತಾ ಪಾರ್ಟಿಯನ್ನು ಸೇರ್ಪಡೆಯಾದರು. ರಾಧಾಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅವರು ಗಾಂಧಿನಗರ ದಕ್ಷಿಣ ಕ್ಷೇತ್ರದಿಂದ ಗೆಲುವು ಸಾಧಿಸಿದರು.
ಕೇರಳ- ಅನಿಲ್ ಆ್ಯಂಟನಿ
ಕಾಂಗ್ರೆಸ್‌ನ ಹಿರಿಯ ನಾಯಕ ಎಕೆ ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಅವರು ಕಳೆದ ವರ್ಷ ಜನವರಿಯಲ್ಲಿ ಕಾಂಗ್ರೆಸ್ ತೊರೆದ ತಿಂಗಳ ಬಳಿಕ ಭಾರತೀಯ ಜನತಾ ಪಾರ್ಟಿಯನ್ನು ಸೇರ್ಪಡೆಯಾದರು. ಪ್ರಧಾನಿ ಮೋದಿ ಅವರು ಭಾರತವನ್ನು ಮುಂಚೂಣಿಗೆ ತರುತ್ತಿದ್ದಾರೆಂದು ಶ್ಲಾಘಿಸಿದ್ದರು. ಇದು ಅವರಿಗೆ ಭಾರೀ ಮುಳುವಾಯಿತು. ಈ ಹಿಂದೆ ರಕ್ಷಣಾ ಸಚಿವರಾಗಿದ್ದ ಎ ಕೆ ಆ್ಯಂಟನಿ ಅವರು ತಮ್ಮ ಮಗನ ನಿರ್ಧಾರ ಅತೀವ ನೋವು ತಂದಿದೆ ಬೇಸರ ವ್ಯಕ್ತಪಡಿಸಿದ್ದರು.
ಈ ಸುದ್ದಿಯನ್ನು ಓದಿ: Milind Deora: ಕಾಂಗ್ರೆಸ್‌ಗೆ ಮಿಲಿಂದ್ ದಿಯೋರಾ ಗುಡ್‌ಬೈ, ಶಿವಸೇನೆಯಿಂದ ಸ್ಪರ್ಧೆ?