ಡೆಹ್ರಾಡೂನ್: ಇತ್ತೀಚೆಗೆ ಹುಡುಗಿಯೊಬ್ಬಳ ಕಿವಿಯಲ್ಲಿ ಹಾವು ಸಿಲುಕಿ, ನಂತರ ವೈದ್ಯರು ಅದನ್ನು ಹೊರತೆಗೆದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೊಂದು ಅತ್ಯಂತ ವಿಚಿತ್ರ ಪ್ರಕರಣ ಎನ್ನಿಸಿಕೊಂಡಿತ್ತು. ಆದರೆ ಅದು ನಡೆದಿದ್ದು ಎಲ್ಲಿ ಎಂಬುದು ಗೊತ್ತಾಗಿರಲಿಲ್ಲ. ಆದರೀಗ ಅಂಥದ್ದೇ ತುಸು ವಿಚಿತ್ರ ಎನ್ನಿಸುವ ಘಟನೆ ಉತ್ತರಾಖಂಡ್ನಿಂದ ವರದಿಯಾಗಿದೆ.
ಕಳೆದ ಕೆಲವು ವಾರಗಳಿಂದಲೂ ಮೂಗೊಳಗೆ ಸಹಿಸಲಾಗದಷ್ಟು ನೋವು, ಏನೋ ಕಚ್ಚಿ ಎಳೆದಂತೆ ಆಗುತ್ತದೆ, ಮೂಗಿನಿಂದ ಪದೇಪದೆ ರಕ್ತಸ್ರಾವ ಆಗುತ್ತದೆ ಎಂದು ವೈದ್ಯರ ಬಳಿ ಹೋಗಿದ್ದ 55 ವರ್ಷ ವ್ಯಕ್ತಿಯನ್ನು ಪರಿಶೀಲನೆ ಮಾಡಿದ ವೈದ್ಯರೇ ಕ್ಷಣಕಾಲ ಕಂಗಾಲಾಗಿದ್ದಾರೆ. ಅವರ ಮೂಗೊಳಗೆ 6 ಇಂಚು ಉದ್ದುದ ಜಿಗಣೆಯೊಂದು ಕಚ್ಚಿ ಕುಳಿತಿತ್ತು. ಅದು ಆ ವ್ಯಕ್ತಿಯ ಮೂಗಿನಿಂದ ಸತತವಾಗಿ ರಕ್ತ ಹೀರುತ್ತಿತ್ತು. ಇದರಿಂದಾಗಿ ಅವರ ಮೂಗಿನ ಕುಳಿಯೊಳಗೆ ಗಾಯವಾಗಿ, ಅಲ್ಲಿಯೇ ಕೀವು ಕೂಡ ಉಂಟಾಗಿತ್ತು. ಅದನ್ನೀಗ ವೈದ್ಯರು ಹೊರತೆಗೆದಿದ್ದಾರೆ.
ಅಂದಹಾಗೇ, ಇವರ ಹೆಸರು ರಾಮಲಾಲ್ ಎಂದಾಗಿದ್ದು, ತೆಹ್ರಿ ಹಿಂದೋಲಾಖಾಲ್ ಬ್ಲಾಕ್ ನಿವಾಸಿ. ಐದಾರು ವಾರ ಅಂದರೆ, ತಿಂಗಳಿಂದಲೂ ಇವರಿಗೆ ಮೂಗಿನಲ್ಲಿ ಕಿರಿಕಿರಿ ಆಗುತ್ತಲೇ ಇತ್ತು. ಅದು ಬರುಬರುತ್ತ ನೋವಿಗೆ ತಿರುಗಿ, ಕೀವಾಗಿ ಸಹಿಸಲಾಗದಷ್ಟು ಹಿಂಸೆಯಾಗುತ್ತಿತ್ತು. ಹಲವು ವೈದ್ಯರ ಬಳಿ ರಾಮಲಾಲ್ ತೋರಿಸಿದ್ದಾರೆ. ಆದರೆ ಅಲ್ಲಿ ಜಿಗಣೆ ಇರುವುದು ಯಾರಿಗೂ ಗೊತ್ತಾಗಿರಲಿಲ್ಲ. ಸಾಮಾನ್ಯ ನೋವು ಇರಬಹುದು ಎಂದೇ ಅವರೆಲ್ಲ ಔಷಧ ಕೊಟ್ಟಿದ್ದರು. ಆದರೆ ರಾಮ ಲಾಲ್ ಆರೋಗ್ಯ ಸುಧಾರಣೆ ಆಗಿರಲಿಲ್ಲ. ನೋವು ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಆಗ ಅವರು ಹೋಗಿದ್ದು ಉತ್ತರಾಖಂಡ್ನಲ್ಲಿರುವ ಶ್ರೀನಗರದಲ್ಲಿರುವ ಒಂದು ಆಸ್ಪತ್ರೆಗೆ. ಅಲ್ಲಿನ ಕಿವಿ, ಮೂಗು ಮತ್ತು ಗಂಟಲು ತಜ್ಞ ವೈದ್ಯರು ರಾಮ ಲಾಲ್ರನ್ನು ಕೂಲಂಕಷವಾಗಿ ತಪಾಸಣೆ ಮಾಡಿದ ಮೇಲೆ, ಮೂಗೊಳಗೆ ಒಂದು ಜಿಗಣೆ ಇರುವುದನ್ನು ಪತ್ತೆ ಮಾಡಿ, ನಂತರ ತೆಗೆದು ಹಾಕಿದ್ದಾರೆ. ರಾಮಲಾಲ್ ಆರೋಗ್ಯವೂ ಈಗ ಸುಧಾರಣೆಗೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಮಲಾಲ್ರಿಗೆ ಚಿಕಿತ್ಸೆ ನೀಡಿದ ಕಿವಿ, ಮೂಗು ಮತ್ತು ಗಂಟಲು ತಜ್ಞ ವೈದ್ಯ ಡಾ. ದಿಗ್ಪಾಲ್ ದತ್ತ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ‘ರಾಮಲಾಲ್ರಿಗೆ ಕಳೆದ ಒಂದು ತಿಂಗಳಿಂದಲೂ ಸಮಸ್ಯೆ ಕಾಡುತ್ತಿತ್ತು. ಮೂಗಿನಲ್ಲಿ ರಕ್ತಸ್ರಾವ ಆಗುತ್ತಿತ್ತು. ಅವರು ತಮ್ಮ ಮನೆ ಸಮೀಪ ಹಲವು ವೈದ್ಯರನ್ನು ಭೇಟಿಯಾಗಿದ್ದರು. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ನಾನು ಮೂಗೊಳಗೆ ನೋಡಿದಾಗ ಅಲ್ಲೇನೋ ಇರುವುದು ಕಂಡುಬಂತು. ಆಮೇಲೆ ಸರಿಯಾಗಿ ನೋಡಿದರೆ ಅದು ಜಿಗಣೆಯಾಗಿತ್ತು’ ಎಂದು ತಿಳಿಸಿದ್ದಾರೆ.
ಆ ವ್ಯಕ್ತಿಯ ಮೂಗೊಳಗೆ ಜಿಗಣೆ ಹೇಗೆ ಸೇರಿಕೊಂಡಿತು ಎಂಬುದು ಸ್ಪಷ್ಟವಾಗಿಲ್ಲ. ಆದರೂ ಅವರೇನಾದರೂ ಮನೆಯಿಂದ ಹೊರಗೆ ಹೋಗಿದ್ದಾಗ ಗುಡ್ಡಗಾಡು ಪ್ರದೇಶದಲ್ಲಿ ಹರಿಯುವ ನೀರನ್ನು ನೇರವಾಗಿ ಕುಡಿಯು ವೇಳೆ, ಅಥವಾ ನೀರು ಇರುವ ಹಸಿ ಪ್ರದೇಶದಲ್ಲಿ ಕುಳಿತಿದ್ದಾಗ ಚಿಕ್ಕ ಜಿಗಣೆ ಒಳಸೇರಿಕೊಂಡಿರಬಹುದು. ಅದು ಮೂಗೊಳಗೆ ಸೇರಿ ರಕ್ತ ಹೀರಿ 5-6 ಇಂಚು ಉದ್ದ ಬೆಳೆದು, ದಪ್ಪವಾಗಿದೆ ಎಂದು ವೈದ್ಯರು ಅಂದಾಜಿಸಿದ್ದಾರೆ. ಇದು ಇನ್ನೂ ಸ್ವಲ್ಪ ದಿನ ಕಳೆದಿದ್ದರೆ ಜೀವಕ್ಕೇ ಅಪಾಯ ತಂದೊಡ್ಡಬಹುದಿತ್ತು ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: 60 ಮಕ್ಕಳಾದರೂ ತೀರುತ್ತಿಲ್ಲ ಬಯಕೆ, ಬೇಕಂತೆ ಇನ್ನೊಂದು ಮದುವೆ!; ಪಾಕಿಸ್ತಾನಿ ವೈದ್ಯನ ‘ಮಕ್ಕಳ ಉತ್ಪಾದನೆ’