ನವ ದೆಹಲಿ: ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಇಂದು ಪಕ್ಷದ ಶಾಸಕಾಂಗ ಸಭೆಯನ್ನು ತಮ್ಮ ನಿವಾಸದಲ್ಲಿ ನಡೆಸಲಿದ್ದಾರೆ. ಹೊಸ ಸಿಎಂ ಯಾರಾಗಲಿದ್ದಾರೆ ಎಂಬುದನ್ನು ಇಂದೇ ಪ್ರಕಟಿಸುವ ನಿರೀಕ್ಷೆ ಇದೆ.
ಒಂದೇ ವಾರದೊಳಗೆ ಎರಡನೇ ಬಾರಿಗೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಸೆಪ್ಟೆಂಬರ್ 20ರಂದು ಸಭೆ ನಡೆದಿತ್ತು. ಮುಂದಿನ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಅಶೋಕ್ ಗೆಹ್ಲೋಟ್ ಮುಂಚೂಣಿಯಲ್ಲಿ ಇದ್ದಾರೆ. ಆದರೆ ಪಕ್ಷದ ” ಒಬ್ಬ ವ್ಯಕ್ತಿ ಒಂದು ಹುದ್ದೆʼ ನೀತಿಯ ಅಡಿಯಲ್ಲಿ ಅವರಿಗೆ ಎರಡೂ ಹುದ್ದೆಗಳನ್ನು ಏಕಕಾಲಕ್ಕೆ ನಿರ್ವಹಿಸಲು ಅವಕಾಶ ಇಲ್ಲ. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷರಾದರೆ, ಸಿಎಂ ಹುದ್ದೆಯನ್ನು ಕೈಬಿಡಬೇಕಾಗುತ್ತದೆ.
ಒಂದು ವೇಳೆ ಅಶೋಕ್ ಗೆಹ್ಲೋಟ್ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದರೆ, ನೂತನ ಸಿಎಂ ಆಗಿ ಸಚಿನ್ ಪೈಲಟ್ ಆಯ್ಕೆಯಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ವೀಕ್ಷಕರಾಗಿ ನಿಯುಕ್ತಿಗೊಳಿಸಿದ್ದಾರೆ. ಎಐಸಿಸಿ ರಾಜಸ್ಥಾನ ಉಸ್ತುವಾರಿ ಅಜಯ್ ಮಕೇನ್ ಕೂಡ ಹಾಜರಿರಲಿದ್ದಾರೆ. ಭಾನುವಾರ ಸಂಜೆ 7 ಗಂಟೆಗೆ ಸಭೆ ನಡೆಯಲಿದೆ.
ಸಿಎಂ ಹುದ್ದೆ ಆಕಾಂಕ್ಷಿಗಳ ಲಾಬಿ ಶುರು: ರಾಜಸ್ಥಾನದಲ್ಲಿ ನೂತನ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಆಕಾಕ್ಷಿಗಳಿಂದ ಲಾಬಿ ಚುರುಕಾಗಿದೆ. ಮಾಜಿ ಡೆಪ್ಯುಟಿ ಸಿಎಂ ಸಚಿನ್ ಪೈಲಟ್ ಲಾಬಿಯನ್ನು ತೀವ್ರಗೊಳಿಸಿದ್ದಾರೆ. ಪಕ್ಷದ ಎಲ್ಲ ಶಾಸಕರುಗಳನ್ನು ಸಚಿನ್ ಪೈಲಟ್ ಸಂಪರ್ಕಿಸುತ್ತಿದ್ದಾರೆ. ಕಳೆದ ಶುಕರವಾರ ಸ್ಪೀಕರ್ ಸಿಪಿ ಜೋಷಿಯನ್ನು ಭೇಟಿ ಮಾಡಿದ್ದರು. ಹೀಗಿದ್ದರೂ ಸಿಎಂ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಚುನಾವಣೆಗೆ ಮುನ್ನವೇ ರಾಜೀನಾಮೆ ನೀಡಲಿದ್ದಾರೆಯೇ ಅಥವಾ ಆಯ್ಕೆಯಾದ ಬಳಿಕ ಸಿಎಂ ಹುದ್ದೆ ತ್ಯಜಿಸಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.