Site icon Vistara News

ಪಾಲಕರ ವಿರೋಧದ ವಿರುದ್ಧ ಹೈಕೋರ್ಟ್​​ಗೆ ಹೋಗಿದ್ದ ಸಲಿಂಗಿ ಯುವತಿಯರಿಗೆ ಗೆಲುವು: ಉಂಗುರ ಬದಲಿಸಿಕೊಂಡು ಸಂಭ್ರಮ

lesbian couple reunited after high court verdict in Kerala

ತಿರುವನಂತಪುರಂ: ಭಾರತದಲ್ಲಿ ಸಲಿಂಗಕಾಮ ಶಿಕ್ಷಾರ್ಹ ಅಪರಾಧ ಅಲ್ಲ ಎಂದು 2018ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ, ಸಲಿಂಗಿಗಳ ಮದುವೆಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಆದರೂ ಸಲಿಂಗಿಗಳು ಈಗೀಗ ನಿರ್ಭಿಡೆಯಿಂದ ತಾವು ಸಲಿಂಗಿಗಳು ಎಂದು ಒಪ್ಪಿಕೊಳ್ಳುತ್ತಿದ್ದಾರೆ. ಹಲವರು ಮದುವೆಯನ್ನೂ ಆಗಿದ್ದಾರೆ. ಇನ್ನು ಕೆಲವರು ಮದುವೆ ಆಗದೆಯೇ ಒಟ್ಟಿಗೇ ಇರುತ್ತಿದ್ದಾರೆ.

ಕೇರಳದಲ್ಲಿ ಈಗ ಇಬ್ಬರು ಯುವತಿಯರು ಪಾಲಕರ ವಿರೋಧವನ್ನೆಲ್ಲ ಧಿಕ್ಕರಿಸಿ ಒಂದಾಗಿದ್ದಾರೆ. ನಮಗೆ ಒಟ್ಟಿಗೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದ ಅವರಿಗೆ ಜಯ ಸಿಕ್ಕಿದ್ದು, ಸಲಿಂಗಿ ಯುವತಿಯರಿಬ್ಬರೂ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ಹೊಚ್ಚಹೊಸ ಲೆಹೆಂಗಾ ತೊಟ್ಟು, ಆಭರಣಗಳನ್ನು ಧರಿಸಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿಕೊಂಡಿದ್ದಾರೆ. ಈ ಪೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಧಿಲಾ ನಸ್ರೀನ್ ಮತ್ತು ಫಾತಿಮಾ ನೂರ್ ಶಾಲಾ ದಿನಗಳಿಂದಲೂ ಸ್ನೇಹಿತೆಯರು. ಬರುಬರುತ್ತ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಅದು ಇವರ ಮನೆಯವರ ಕಣ್ಣು ಕೆಂಪಾಗಿಸಿತ್ತು. ಕುಟುಂಬದ ವಿರೋಧ ಹೆಚ್ಚಾದ ಬೆನ್ನಲ್ಲೇ ಇದೇ ವರ್ಷ ಮೇ ತಿಂಗಳಲ್ಲಿ, ಫಾತಿಮಾ ಮತ್ತು ಅಧಿಲಾ ಇಬ್ಬರೂ ಕೇರಳದ ಕೊಯಿಕ್ಕೊಡ್ ಗೆ ಹೋಗಿ, ಅಲ್ಲಿ ಎಲ್ ಜಿಬಿಟಿಕ್ಯೂ ಸಮುದಾಯದ ಆಶ್ರಯ ಕೇಂದ್ರದಲ್ಲಿ ವಾಸವಾಗಿದ್ದರು. ಆಗಲೂ ಮನೆಯವರು ಬಿಡಲಿಲ್ಲ. ಫಾತಿಮಾಳ ತಂದೆ- ತಾಯಿ ಅಲ್ಲೇ ಬಂದು, ಆಕೆಯನ್ನು ಕರೆದುಕೊಂಡು ಹೋಗಿ ಎರ್ನಾಕುಲಂ ನಲ್ಲಿರುವ ಸಂಬಂಧಿಕರ ಮನೆಯಲ್ಲಿ ಇಟ್ಟರು. ‘ನೀವಿಬ್ಬರೂ ಒಟ್ಟಿಗೆ ಇರಲು ನಾವೆಂದೂ ಬಿಡುವುದಿಲ್ಲ’ ಎಂದು ಮಗಳಿಗೆ ಬೈದಿದ್ದರು‌. ಇತ್ತ ಅಧಿಲಾ ಕೇರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ, ಫಾತಿಮಾ ಬೇಕು, ನಾವು ಇಬ್ಬರೂ ಜತೆಯಾಗಿರಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಳು. ಅಂತಿಮವಾಗಿ ಕೋರ್ಟ್ ನಲ್ಲಿ ಇವರಿಗೆ ಗೆಲುವಾಗಿದೆ. ಮುಂದಿನ ದಿನಗಳಲ್ಲಿ ಮದುವೆ ಆಗುವ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.

ಕೋರ್ಟ್ ನಲ್ಲಿ ತಮ್ಮ ಪರ ತೀರ್ಪು ಬಂದು, ಉಂಗುರ ಬದಲಿಸಿಕೊಂಡ ಬೆನ್ನಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಸ್ರೀನ್ ‘ಹೀಗೆ ರಿಂಗ್ ಬದಲಿಸಿಕೊಂಡು, ಫೋಟೋ ಶೂಟ್ ಮಾಡಿಸಿದ್ದು ತುಂಬ ಖುಷಿಕೊಡುತ್ತಿದೆ’ ಎಂದಿದ್ದಾರೆ.

ಪಾಲಕರ ವಿರೋಧದ ಬಗ್ಗೆ ಮಾತನಾಡಿ, ‘ನಮ್ಮ ಪಾಲಕರು ನಮ್ಮನ್ನು ಹೀಗೆ ಅಂಗೀಕರಿಸುತ್ತಿಲ್ಲ. ಆದರೆ ನಾವು ಇನ್ನೂ ನಮ್ಮ ಹೆಸರಿನ ಜತೆ ನಮ್ಮ ಅಪ್ಪನ ಹೆಸರನ್ನೇ ಬಳಸುತ್ತಿದ್ದೇವೆ. ಇತ್ತೀಚಿಗೆ ಆಸ್ಪತ್ರೆಗೆ ಹೋಗಬೇಕಾಯಿತು. ಅಲ್ಲಿಯು ನಾವು ನಮ್ಮ ಪಾಲಕರ ಹೆಸರನ್ನೇ ಬಳಸಿಕೊಂಡಿದ್ದೇವೆ. ಅವರ ವಿರೋಧ ನಮಗೆ ನೋವು ಕೊಡುತ್ತದೆ’ ಎಂದಿದ್ದಾರೆ. ಸದ್ಯದ ಮಟ್ಟಿಗೆ ಎಲ್ಲ ಮರೆತು, ಪರಸ್ಪರ ಖುಷಿ ಹಂಚಿಕೊಳ್ಳುತ್ತಿದ್ದಾರೆ.

Exit mobile version