ಡೆಹ್ರಾಡೂನ್: ಕರ್ನಾಟಕದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆ ನಡೆದ ಹಗರಣವು ಸುದ್ದಿಯಾದ ಬೆನ್ನಲ್ಲೇ ಉತ್ತರಾಖಂಡ ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಕಲು ತಡೆಯಲು ಮಹತ್ವದ ಸುಗ್ರೀವಾಜ್ಞೆ ಜಾರಿಗೆ ತಂದಿದೆ. “ಉತ್ತರಾಖಂಡದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಪಿ ಮಾಡಿದರೆ ಅಂತಹವರಿಗೆ ಜೀವಾವಧಿ ಅಥವಾ ೧೦ ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ” ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಯುಕೆಪಿಎಸ್‌ಸಿ ಪರೀಕ್ಷೆಯ ದಿನಾಂಕ ನಿಗದಿಯಾಗಿತ್ತು. ಪರೀಕ್ಷೆ ನಡೆಯುವ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾದ ಪ್ರಕರಣ ಸುದ್ದಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಉತ್ತರಾಖಂಡ ಸ್ಪರ್ಧಾತ್ಮಕ ಪರೀಕ್ಷೆ (ನೇಮಕಾತಿಯಲ್ಲಿ ಅಕ್ರಮ, ನಕಲು ತಡೆಯಲು ಕ್ರಮ) ಸುಗ್ರೀವಾಜ್ಞೆ ಹೊರಡಿಸಿದೆ. ಇದಕ್ಕೆ ಗವರ್ನರ್ ಗುರ್ಮಿತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ.
“ನಮ್ಮ ಸರ್ಕಾರವು ಯುವಕರ ಕನಸುಗಳ ವಿಚಾರದಲ್ಲಿ ರಾಜಿ ಆಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇನ್ನು ಯಾರಾದರೂ ಕಾಪಿ ಮಾಡಿದ್ದು ಸಾಬೀತಾದರೆ, ಅವರಿಗೆ ಜೀವಾವಧಿ ಅಥವಾ ೧೦ ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದರ ಜತೆಗೆ ಅವರ ಆಸ್ತಿಯನ್ನೂ ಜಪ್ತಿಯನ್ನೂ ಮಾಡಲಾಗುತ್ತದೆ” ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ | ಉತ್ತರಾಖಂಡದ ಜೋಶಿಮಠ ಪಟ್ಟಣ ಕುಸಿತ ನಮಗೆ ಎಚ್ಚರಿಕೆಯ ಗಂಟೆಯಾಗಲಿ