ಭುವನೇಶ್ವರ: ಒಡಿಶಾದ ವಿವಿಧ ಭಾಗಗಳಲ್ಲಿ ಶನಿವಾರ ಮಿಂಚು ಹೊಡೆದು (Lightning Strike) ಸುಮಾರು 9 ಮಂದಿ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಮಯೂರ್‌ಭಂಜ್, ಬಾಲಸೊರೆ ಮತ್ತು ಭದ್ರಕ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಮತ್ತು ಕೈಂಜ್ಹರ್, ಧೆನ್ಕನಲ್ ಮತ್ತು ಗಂಜಮ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಅಸುನೀಗಿದ್ದಾರೆ.
ಘಟನೆಗೆ ದುಃಖ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ. ಜತೆಗೆ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಬಾರ್ಪಾಲಿ ಬ್ಲಾಕ್‌ನ ಮುನುಪಾಲಿ ಗ್ರಾಮದ ಬಳಿಯ ಹೊಲದಲ್ಲಿ ಸಿಡಿಲು ಬಡಿದು 12 ಜನರು ಗಾಯಗೊಂಡಿದ್ದಾರೆ ಎಂದು ಬಾರ್ಗರ್ ಜಿಲ್ಲೆಯ ವರದಿ ತಿಳಿಸಿದೆ. ಗಾಯಗೊಂಡ 12 ಜನರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಕಿ-ಅಂಶಗಳ ಪ್ರಕಾರ ಒಡಿಶಾದಲ್ಲಿ ಕಳೆದ ಐದು ವರ್ಷಗಳಲ್ಲಿ ಸಿಡಿಲು ಬಡಿದು 10,741 ಮಂದಿ ಮೃತಪಟ್ಟಿದ್ದಾರೆ. ಮಿಂಚಿನ ಹೊಡೆತದಿಂದ ಅತೀ ಹೆಚ್ಚಿನ ಸಾವು ಒಡಿಶಾದಲ್ಲಿ ಸಂಭವಿಸುತ್ತದೆ. ಎರಡನೇ ಸ್ಥಾನದಲ್ಲಿ ಮಧ್ಯಪ್ರದೇಶ ಇದೆ.
ಹಿಮಾಚಲ ಪ್ರದೇಶದಲ್ಲಿ ಮುಂದುವರಿದ ಮಳೆ
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆ ಮುಂದಿವರಿದಿದೆ. ಆಗಸ್ಟ್ 23ರವರೆಗೆ ಧಾರಾಕಾರವಾಗಿ ಮಳೆಯಾಗಲಿದ್ದು, 5 ಜಿಲ್ಲೆಗಳಲ್ಲಿ ಪ್ರವಾಹ ಎದುರಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಚಂಬ, ಕಂಗ್ರ, ಮಂಡಿ, ಶಿಮ್ಲಾ ಮತ್ತು ಸಿರ್ಮುವಾರ್ ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳಲ್ಲಿ ಭೀಕರ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಆಗಸ್ಟ್ 23ರವರೆಗೆ ರಾಜ್ಯದ ಬಯಲು, ಬೆಟ್ಟ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಉನಾ, ಬಿಲಾಸ್ಪುರ, ಹಮೀರ್ಪುರ್, ಕಾಂಗ್ರಾ, ಸೋಲನ್, ಶಿಮ್ಲಾ ಮತ್ತು ಸಿರ್ಮುವಾರ್‌ನ ಪ್ರತ್ಯೇಕ ಸ್ಥಳಗಳಲ್ಲಿ ನಾಳೆ ಭಾರಿ ಮಳೆಯಾಗಲಿದೆ. ಈ ಮಾನ್ಸೂನ್ ಋತುವಿನಲ್ಲಿ ಇದುವರೆಗೆ 215 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 33ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಶಿಮ್ಲಾ ವಲಯದಲ್ಲಿ ಅತಿ ಹೆಚ್ಚು 83 ರಸ್ತೆಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 194 ರಸ್ತೆಗಳು ಇನ್ನೂ ದುರಸ್ತಿಯಾಗಿಲ್ಲ. ಇದಲ್ಲದೆ ನಿರಂತರ ಮಳೆಯಿಂದಾಗಿ 4,764 ನೀರು ಸರಬರಾಜು ಯೋಜನೆಗಳ ಮೇಲೆ ಪರಿಣಾಮ ಬೀರಿದೆ.
ಮಧ್ಯಪ್ರದೇಶದಲ್ಲಿಯೂ ಉತ್ತಮ ಮಳೆ
ಮಧ್ಯಪ್ರದೇಶದಲ್ಲಿಯೂ ಇದುವರೆಗೆ ಉತ್ತಮ ಮಳೆ ಸುರಿದಿದೆ. ಆಗಸ್ಟ್ 19ರಿಂದ ರಾಜ್ಯದಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಸೂಚಿಸಿದ್ದಾರೆ. ಸದ್ಯ ರಾಜ್ಯದ ಅಣೆಕಟ್ಟುಗಳು ಮತ್ತು ಕೊಳಗಳಲ್ಲಿನ ನೀರಿನ ಮಟ್ಟವು ಗರಿಷ್ಠ ಪ್ರಮಾಣದಲ್ಲಿದೆ. ಕೋಲಾರ, ಬನ್ಸಾಗರ್, ಕುಂಡಲಿಯಾ, ಬರ್ಗಿ, ಇಂದಿರಾ ಸಾಗರ್, ಓಂಕಾರೇಶ್ವರ, ಕಲಿಯಸೊಟ್, ಭದ್ರಭಡ, ಕೆರವ ಮತ್ತು ಇತರ ಅಣೆಕಟ್ಟುಗಳು ಬಹುತೇಕ ಭರ್ತಿಯಾಗಿವೆ.
ಇದನ್ನೂ ಓದಿ: Cloudburst: ಮೇಘಸ್ಫೋಟದಿಂದ ಹಿಮಾಚಲ ಪ್ರದೇಶದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆ; 40ಕ್ಕೂ ಹೆಚ್ಚು ಮಂದಿ ನಾಪತ್ತೆ