Site icon Vistara News

Odisha Train Accident : ರಾತ್ರಿಯಿಡೀ ಕ್ಯೂ ನಿಂತು ರಕ್ತ ದಾನ ಮಾಡಿ ಮಾನವೀಯತೆ ಮೆರೆದ ಜನ

People gathered at hospital for blood donation

ಬಾಲಾಸೋರ್, ಒಡಿಶಾ: ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭಯಾನಕ ರೈಲು ಅಪಘಾತದಲ್ಲಿ (Odisha Train Accident) ಸತ್ತವರ ಸಂಖ್ಯೆ 233ಕ್ಕೇರಿಕೆಯಾಗಿದ್ದು, 900ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಮಧ್ಯೆ, ಗಾಯಾಳುಗಳಿಗೆ ರಕ್ತದಾನ (blood donation) ಮಾಡಲು ಜನರು ರಾತ್ರಿಯಿಡಿ ಸರದಿ ಸಾಲಿನಲ್ಲಿ ನಿಂತಿದ್ದರು. ಈ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಬೃಹತ್ ಅಪಘಾತವಾದ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳಿಂದ ರಕ್ತ ಸಂಗ್ರಹಿಸುವ ಪ್ರಯತ್ನವನ್ನು ಆಸ್ಪತ್ರೆಗಳು ಮಾಡುತ್ತವೆ.

ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ. ಶುಕ್ರವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು, ಸ್ಥಳೀಯರೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸ್ಥಳೀಯರೊಬ್ಬರು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಅಪಘಾತ ಸಂಭವಿಸಿದಾಗ ನಾನು ಹತ್ತಿರದಲ್ಲೇ ಇದ್ದೆ. ನಾವು ಸುಮಾರು 200ರಿಂದ 300 ಪ್ರಯಾಣಿಕರನ್ನು ರಕ್ಷಿಸಿದ್ದೇವೆ ಎಂದು ಹೇಳಿದ್ದಾನೆ. ಕಳೆದ ರಾತ್ರಿಯಿಂದಲೇ ಪರಿಹಾರ ಕಾರ್ಯಾಚರಣೆ ಜಾರಿಯಲ್ಲಿದೆ. ಕೋಲ್ಕೊತಾದಿಂದ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಯೋಧರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆಂದು ಭಾರತೀಯ ಸೇನೆಯ ಕರ್ನಲ್ ಎಸ್ ಕೆ ದತ್ತಾ ಅವರು ಹೇಳಿದ್ದಾರೆ.

ಪರಿಹಾರ ಕಾರ್ಯಾಚರಣೆಗೆ ಸುಮಾರು 200 ಆಂಬ್ಯುಲೆನ್ಸ್ ಬಳಸಲಾಗುತ್ತಿದೆ. ಈ ಪೈಕಿ 20ಕ್ಕೂ ಹೆಚ್ಚು ಸರ್ಕಾರಿ ಆಂಬ್ಯುಲೆನ್ಸ್‌ಗಳಿವೆ. ಜತೆಗೆ 45 ಸಂಚಾರಿ ವೈದ್ಯಕೀಯ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಸಿಬಿ 25 ವೈದ್ಯರ ತಂಡಗಳ ಜತೆಗೆ ಹೆಚ್ಚುವರಿಯಾಗಿ 50 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಾಲಾಸೋರ್‌ ಜಿಲ್ಲೆಯ ಬಹನಾಗಾ ಸ್ಟೇಷನ್ ಬಳಿ, ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಹಳಿ ಬಿಟ್ಟು ಚಲಿಸಿದ್ದರಿಂದ ಗೂಡ್ಸ್ ಟ್ರೈನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತವು ಶುಕ್ರವಾರ ಸಂಜೆ 7 ಗಂಟೆಗೆ ಸಂಭವಿಸಿದೆ.

ಈ ಸುದ್ದಿಯನ್ನೂ ಓದಿ: Odisha Train Accident: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 233ಕ್ಕೆ ಏರಿಕೆ

ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್‌ ರೈಲಿನ 10ರಂದ 12 ಬೋಗಿಗಳು ಹಳಿ ತಪ್ಪಿವೆ. ಬಳಿಕ ಆ ಬೋಗಿಗಳು ಎದುರಿನ ಟ್ರ್ಯಾಕ್ ಮೇಲೆ ಬಿದ್ದಿವೆ. ಕೆಲವು ಸಮದಯದ ಬಳಿಕ ಯಶವಂತಪುರ-ಹೌರಾ ರೈಲು ಈ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಮೂರ್ನಾಲ್ಕು ರೈಲು ಬೋಗಿಗಳು ಜಖಂಗೊಂಡಿವೆ. ಈ ಮೂರು ರೈಲು ಅಪಘಾತದಿಂದ ಸಾವು ನೋವಿನ ಸಂಖ್ಯೆ ಇಮ್ಮಡಿಯಾಗಿದೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version