ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಈಶಾನ್ಯ ದೆಹಲಿ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯ ಕುಮಾರ್ (Kanhaiya Kumar) ಅವರು ಪ್ರಚಾರ ಮಾಡುವ ವೇಳೆ ಅವರ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಪೂರ್ವ ದೆಹಲಿಯ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ ಕನ್ಹಯ್ಯ ಕುಮಾರ್ ಅವರು ಚುನಾವಣೆ ಪ್ರಚಾರ ನಡೆಸುತ್ತಿದ್ದರು. ಇದೇ ವೇಳೆ, ಏಳೆಂಟು ಜನ ಅವರಿಗೆ ಹಾರ ಹಾಕಲು ಬಂದಿದ್ದು, ಹಾರ ಹಾಕಿದ ಕೂಡಲೇ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲವು ಜನ ಅವರ ಮೇಲೆ ಮಸಿ ಎರಚಿದ್ದಾರೆ.
ಕನ್ಹಯ್ಯ ಕುಮಾರ್ ಅವರ ಮೇಲೆ ಹಲ್ಲೆ ನಡೆದ ಬಳಿಕ ಬ್ರಹ್ಮಪುರಿಯ ಆಪ್ ಕೌನ್ಸಿಲರ್ ಛಾಯಾ ಗೌರವ್ ಶರ್ಮಾ ಅವರು ದೂರು ದಾಖಲಿಸಿದ್ದಾರೆ. “ಕರ್ತಾರ್ ನಗರದಲ್ಲಿರುವ ಪಕ್ಷದ ಕಚೇರಿಯಿಂದ ಕನ್ಹಯ್ಯ ಕುಮಾರ್ ಅವರು ಹೊರಗೆ ಹೋಗುತ್ತಿದ್ದರು. ಇದೇ ವೇಳೆ ಏಳೆಂಟು ಜನ ಹಾರ ಹಿಡಿದುಕೊಂಡು ಬಂದರು. ಹಾರ ಹಾಕುವ ನೆಪದಲ್ಲಿ ಅವರು ಕನ್ಹಯ್ಯ ಕುಮಾರ್ ಮೇಲೆ ಹಲ್ಲೆ ನಡೆಸಿದರು. ಅವರ ಮೇಲೆ ಮಸಿ ಎರಚುವ ಜತೆಗೆ ತಳ್ಳಿದರು. ಘಟನೆಯಲ್ಲಿ ನಾಲ್ವರು ಮಹಿಳೆಯರಿಗೆ ಗಾಯಗಳಾಗಿವೆ. ಪತ್ರಕರ್ತರೊಬ್ಬರು ಬಿದ್ದು ಗಾಯ ಮಾಡಿಕೊಂಡಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Jordaaar thappad ☠️😂🤣
— BALA (@erbmjha) May 17, 2024
Kanhaiya Kumar ko laga ye JNU hai. pic.twitter.com/38Ohlv3SEt
ಕನ್ಹಯ್ಯ ಕುಮಾರ್ ಮೇಲೆ ದಾಳಿ ನಡೆಸಿದ ಏಳೆಂಟು ಜನರಲ್ಲಿ ಇಬ್ಬರು ವಿಡಿಯೊ ಬಿಡುಗಡೆ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಕನ್ಹಯ್ಯ ಕುಮಾರ್ ದೇಶ ಒಡೆಯುವ (ಟುಕ್ಡೆ ಗ್ಯಾಂಗ್ ಎಂದೇ ಖ್ಯಾತಿ) ಹೇಳಿಕೆ ನೀಡಿದ್ದು, ಸೇನೆಯ ವಿರುದ್ಧ ಮಾತನಾಡಿದ ಹಿನ್ನೆಲೆಯಲ್ಲಿ ಅವರು ಕನ್ಹಯ್ಯ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ದಾಳಿಗೆ ನಿಖರ ಕಾರಣ ಗೊತ್ತಾಗಿಲ್ಲ.
ಕನ್ಹಯ್ಯ ಸ್ಪರ್ಧೆಗೆ ಪಕ್ಷದಲ್ಲೇ ವಿರೋಧ
ಕನ್ಹಯ್ಯ ಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದಕ್ಕೆ ಕೆಲ ದಿನಗಳ ಹಿಂದೆ ಕಾಂಗ್ರೆಸ್‌ನಲ್ಲಿಯೇ ವಿರೋಧ ವ್ಯಕ್ತವಾಗಿತ್ತು. ಪಕ್ಷದ ಪ್ರಧಾನ ಕಚೇರಿ ಎದುರು ಜಮಾನಿಸಿದ ನೂರಾರು ಕಾಂಗ್ರೆಸ್ ಕಾಂಗ್ರೆಸಿಗರು ಹೊರಗಿನವರು ಬೇಡ, ಸ್ಥಳೀಯರನ್ನೇ ಕಣಕ್ಕಿಳಿಸಿ ಎಂದು ಒತ್ತಾಯಿಸಿದ್ದರು. ಮೌಜ್‌ಪುರ ಮೆಟ್ರೋ ಸ್ಟೇಷನ್ ಬಳಿ ಪ್ರತಿಭಟನೆ ನಡೆದಿದ್ದು, ನಮಗೆ ಸ್ಥಳೀಯ ನಾಯಕರೇ ಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು.
ಈಶಾನ್ಯ ದೆಹಲಿಯಿಂದ ಕನ್ಹಯ್ಯ ಕುಮಾರ್ ಸ್ಪರ್ಧಿಸುತ್ತಿದ್ದು, ಬಿಜೆಪಿಯ ಮನೋಜ್ ತಿವಾರಿ ವಿರುದ್ಧ ಕಣಕ್ಕೆ ಇಳಿದಿದ್ದಾರೆ. 37 ವರ್ಷದ ಕುಮಾರ್ ಎರಡನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 2019ರಲ್ಲಿ, ಅವರು ಬಿಹಾರದ ಬೆಗುಸರಾಯ್ನಿಂದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಲ್ಲಿ ಅವರು ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ಗಿರಿರಾಜ್ ಸಿಂಗ್ ವಿರುದ್ಧ ಸೋತಿದ್ದರು. ಅವರು 2021ರಲ್ಲಿ ಕಾಂಗ್ರೆಸ್ ಸೇರಿದ್ದರು.
ಇದನ್ನೂ ಓದಿ: Amit Shah: ಪ್ರಚಾರದ ವೇಳೆ ಕೇಜ್ರಿವಾಲ್ ನೀಡಿದ ಹೇಳಿಕೆಯಿಂದ ನ್ಯಾಯಾಂಗ ನಿಂದನೆ; ಅಮಿತ್ ಶಾ ವಾಗ್ದಾಳಿ