Site icon Vistara News

3ನೇ ಹಂತದಲ್ಲಿ ಕಣಕ್ಕಿಳಿದ 1,352 ಅಭ್ಯರ್ಥಿಗಳ ಪೈಕಿ 244 ಜನರ ವಿರುದ್ಧ ಕ್ರಿಮಿನಲ್‌ ಕೇಸ್!

Lok Sabha Election

Lok Sabha Election 2024: 18% candidates contesting in Phase 3 elections accused in criminal cases

ನವದೆಹಲಿ: ದೇಶಾದ್ಯಂತ ಬೇಸಿಗೆಯ ಬಿಸಿಲಿನಷ್ಟೇ ಲೋಕಸಭೆ ಚುನಾವಣೆ (Lok Sabha Election 2024) ಕಾವು ಕೂಡ ಜೋರಾಗಿದೆ. ರಾಜಕೀಯ ನಾಯಕರ ಅಬ್ಬರದ ಸಮಾವೇಶಗಳು, ಪ್ರಚಾರದ ಭರಾಟೆ, ತೀಕ್ಷ್ಣ ಹೇಳಿಕೆಗಳು, ಪ್ರತಿಸ್ಪರ್ಧಿಗಳ ವಿರುದ್ಧ ಮಾಡುವ ಆರೋಪಗಳು ಸುದ್ದಿಯಾಗುತ್ತಿವೆ. ಇನ್ನು ಮೇ 7ರಂದು ಮೂರನೇ ಹಂತದ ಮತದಾನ ನಡೆಯಲಿದ್ದು, ಇದಕ್ಕಾಗಿ ಅಭ್ಯರ್ಥಿಗಳು, ನಾಯಕರು ಇನ್ನಿಲ್ಲದ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ಬೆನ್ನಲ್ಲೇ, ಮೂರನೇ ಹಂತದಲ್ಲಿ 1,352 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಇವರಲ್ಲಿ ಶೇ.18ರಷ್ಟು ಅಂದರೆ 244 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ (Criminal Case) ದಾಖಲಾಗಿವೆ ಎಂದು ತಿಳಿದುಬಂದಿದೆ.

ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಹಾಗೂ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ADR) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮೂರನೇ ಹಂತದ 244 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ ಎಂದು ತಿಳಿದುಬಂದಿದೆ. 172 ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ. ಅತ್ಯಾಚಾರ ಸೇರಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಕುರಿತಂತೆ 38 ಜನರ ವಿರುದ್ಧ ಕೇಸ್‌ ದಾಖಲಾಗಿದೆ. ದ್ವೇಷ ಭಾಷಣಕ್ಕೆ ಕುರಿತಂತೆ 17 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿವೆ. ಅಭ್ಯರ್ಥಿಗಳು ಚುನಾವಣೆ ಆಯೋಗಕ್ಕೆ ನೀಡಿರುವ ಮಾಹಿತಿ ಆಧರಿಸಿ ವರದಿ ತಯಾರಿಸಲಾಗಿದೆ.

Lok Sabha Election-2024

ಬಿಜೆಪಿಯಿಂದ ಸ್ಪರ್ಧಿಸಿದ 82 ಅಭ್ಯರ್ಥಿಗಳಲ್ಲಿ 22 ಮಂದಿ ವಿರುದ್ಧ ಕ್ರಿಮಿನಲ್‌ ಕೇಸ್‌ ಇವೆ. ಇನ್ನು ಕಾಂಗ್ರೆಸ್‌ನ 68 ಅಭ್ಯರ್ಥಿಗಳ ಪೈಕಿ 26, ಆರ್‌ಜೆಡಿಯ ಮೂರಕ್ಕೆ ಮೂವರ ವಿರುದ್ಧವೂ ಕ್ರಿಮಿನಲ್‌ ಕೇಸ್‌ ದಾಖಲಾಗಿವೆ. ಶಿವಸೇನೆ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಶೇ.80, ಎನ್‌ಸಿಪಿ (ಶರದ್‌ ಪವಾರ್)‌ ಶೇ.67, ಸಮಾಜವಾದಿ ಪಾರ್ಟಿ ಶೇ.50, ಜೆಡಿಯು ಶೇ.33 ಹಾಗೂ ತೃಣಮೂಲ ಕಾಂಗ್ರೆಸ್‌ನ ಶೇ.17ರಷ್ಟು ಅಭ್ಯರ್ಥಿಗಳು ಕ್ರಿಮಿನಲ್‌ ಕೇಸ್‌ ಹೊಂದಿದ್ದಾರೆ ಎಂಬುದು ವರದಿ ಮೂಲಕ ಬಹಿರಂಗವಾಗಿದೆ.

ಇವರ ಆಸ್ತಿ-ಪಾಸ್ತಿ ಎಷ್ಟು?

ಮೂರನೇ ಹಂತದಲ್ಲಿ 1,352 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಇವರಲ್ಲಿ 292 ಅಭ್ಯರ್ಥಿಗಳು ಕೋಟ್ಯಧೀಶರಾಗಿದ್ದಾರೆ. ಇವರಲ್ಲಿ ಬಿಜೆಪಿಯ 77, ಕಾಂಗ್ರೆಸ್‌ನ 60 ಅಭ್ಯರ್ಥಿಗಳು ಕೋಟ್ಯಧೀಶರಾಗಿದ್ದಾರೆ. ಗೋವಾದ ಪಲ್ಲವಿ ಶ್ರೀನಿವಾಸ್‌ ಡೆಂಪೊ ಅವರ ಆಸ್ತಿಯ ಮೌಲ್ಯವು 1,361 ಕೋಟಿ ರೂ. ಆಗಿದ್ದು, ಇವರೇ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ. ಇನ್ನು ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಸ್ತಿಯ ಮೌಲ್ಯವು 424 ಕೋಟಿ ರೂ. ಆಗಿದ್ದು, ಎರಡನೇ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಶಾಹು ಶಹಾಜಿ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದು, ಇವರ ಆಸ್ತಿ ಮೌಲ್ಯ 342 ಕೋಟಿ ರೂ. ಆಗಿದೆ. ಇವರು ಮೂರನೇ ಶ್ರೀಮಂತ ಅಭ್ಯರ್ಥಿ ಆಗಿದ್ದಾರೆ.

ಇದನ್ನೂ ಓದಿ: Narendra Modi: ತಾಕತ್ತಿದ್ದವರು 370ನೇ ವಿಧಿ ಜಾರಿಗೆ ತರಲಿ; ಪ್ರತಿಪಕ್ಷಗಳಿಗೆ ಮೋದಿ ಸವಾಲು!

Exit mobile version