ಬೆಂಗಳೂರು: ಲೋಕಸಭೆ ಚುನಾವಣೆ- 2024ರ (Lok sabha election-2024) ಹೊಸ್ತಿಲಲ್ಲಿ ಇರುವಾಗ ಕಳೆದ ಲೋಕಸಭಾ ಚುನಾವಣೆ ಫಲಿತಾಂಶದ (election result) ಕುರಿತು ಕುತೂಹಲ ಹೆಚ್ಚಾಗಿದೆ. 2019ರ ಚುನಾವಣೆಯಲ್ಲಿ ಪ್ರಧಾನಿ (PM) ನರೇಂದ್ರ ಮೋದಿ (narendra modi) ನೇತೃತ್ವದ ಬಿಜೆಪಿ (BJP) 303 ಸ್ಥಾನಗಳನ್ನು ಗೆದ್ದಿತ್ತು. 2014ರ ಚುನಾವಣೆಯಲ್ಲಿ 282 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ 2019ರಲ್ಲಿ 21 ಹೆಚ್ಚು ಸೀಟುಗಳು ಗೆದ್ದು ದಾಖಲೆ ಬರೆದಿತ್ತು.
ಕಳೆದ ಬಾರಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು. ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ದೇಶದಲ್ಲೇ ಯಾರು ಅತೀ ಹೆಚ್ಚು ಹಾಗೂ ಯಾರು ಅತೀ ಕಡಿಮೆ ಮತಗಳ ಅಂತರದಿಂದ ಗೆದ್ದರು ಎನ್ನುವ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಹೆಚ್ಚು ಅಂತರದಿಂದ ಗೆದ್ದವರು
ಸಿ.ಆರ್. ಪಾಟೀಲ್
ಗುಜರಾತ್‌ನ ನವಸಾರಿ ಕ್ಷೇತ್ರದಿಂದ ಬಿಜೆಪಿ ನಾಯಕ ಸಿ.ಆರ್. ಪಾಟೀಲ್ 6.89 ಲಕ್ಷ ಮತಗಳಿಂದ ಗೆಲುವು ದಾಖಲಿಸಿದ್ದರು. ಪಾಟೀಲ್ ಅವರು 9,72,739 ಮತಗಳನ್ನು ಗಳಿಸಿ 6.89 ಲಕ್ಷ ಮತಗಳ ಅಂತರದಿಂದ ಪಟೇಲ್ ಧರ್ಮೇಶಭಾಯ್ ಭೀಮಭಾಯ್ ಅವರನ್ನು ಸೋಲಿಸಿದ್ದರು. ಧರ್ಮೇಶಭಾಯ್ ಅವರು 2,83,071 ಮತಗಳನ್ನು ಗಳಿಸಿದ್ದರು.
ಇದನ್ನೂ ಓದಿ: Lok Sabha Election 2024: ಬೇರೆಯವರು ನಮ್ಮ ಮತ ಚಲಾಯಿಸಿದರೆ ಏನು ಮಾಡಬಹುದು?
ಅಮಿತ್ ಶಾ
ಪ್ರಸ್ತುತ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ಕಳೆದ ಬಾರಿ ಗಾಂಧಿನಗರದಲ್ಲಿ 5.55 ಲಕ್ಷ ಮತಗಳಿಂದ ಗೆಲುವು ದಾಖಲಿಸಿದ್ದರು.
ದರ್ಶನಾ ಜರ್ದೋಶ್
ಸೂರತ್ ಬಿಜೆಪಿ ಅಭ್ಯರ್ಥಿ ದರ್ಶನಾ ಜರ್ದೋಶ್ 5.47 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದು, ಅವರು ಒಟ್ಟು 7.95 ಲಕ್ಷ ಮತಗಳನ್ನು ಗಳಿಸಿದ್ದರು. ಇವರ ವಿರುದ್ಧ ಕಣಕ್ಕೆ ಇಳಿದಿದ್ದ ಕಾಂಗ್ರೆಸ್ ಪಕ್ಷದ ಅಶೋಕ್ ಪಟೇಲ್ ಅವರು ಕೇವಲ 2.47 ಲಕ್ಷ ಮತಗಳನ್ನು ಗಳಿಸಿದ್ದರು.
ರಂಜನ್ ಭಟ್
2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಕ್ಷೇತ್ರವಾಗಿದ್ದ ವಡೋದರದಿಂದ ಬಿಜೆಪಿಯ ರಂಜನ್ ಭಟ್ 5.90 ಲಕ್ಷ ಮತಗಳಿಂದ ಗೆಲುವು ದಾಖಲಿಸಿದ್ದರು.
ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ 4.8 ಲಕ್ಷ ಮತಗಳ ಅಂತರದಿಂದ ಗೆದಿದ್ದರು. ಇವರ ವಿರುದ್ಧ ಕಣದಲ್ಲಿದ್ದ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ 1.95 ಲಕ್ಷ ಮತಗಳನ್ನು ಗಳಿಸಿದ್ದರು.
ಕಡಿಮೆ ಅಂತರದಿಂದ ಗೆದ್ದವರು
ಭೋಲಾನಾಥ್
ಉತ್ತರ ಪ್ರದೇಶದ ಮಚ್ಲಿಶಹರ್ ಲೋಕಸಭಾ ಅಭ್ಯರ್ಥಿ ಭೋಲಾನಾಥ್ ಕೇವಲ 181 ಮತಗಳಿಂದ ಎದುರಾಳಿಯನ್ನು ಸೋಲಿಸಿದರು. ಭೋಲಾನಾಥ್ 4,88,397 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಬಹುಜನ ಸಮಾಜ ಪಕ್ಷದ ತ್ರಿಭುವನ್ ರಾಮ್ 4,88,216 ಮತಗಳನ್ನು ಗಳಿಸಿದ್ದರು.
ಪಿ.ಪಿ. ಮೊಹಮ್ಮದ್ ಫೈಜಲ್
ರಾಷ್ಟ್ರದ ಅತ್ಯಂತ ಚಿಕ್ಕ ಕ್ಷೇತ್ರ ಲಕ್ಷದ್ವೀಪದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪಿ.ಪಿ. ಮೊಹಮ್ಮದ್ ಫೈಜಲ್ ಕೇವಲ 823 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.
ಕುಲದೀಪ್ ರಾಯ್ ಶರ್ಮಾ
ಅಂಡಮಾನ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕುಲದೀಪ್ ರಾಯ್ ಶರ್ಮಾ ಕೇವಲ 1,407 ಮತಗಳಿಂದ ಗೆಲುವು ದಾಖಲಿಸಿದ್ದರು.
ಅಪರೂಪಾ ಪೊದ್ದಾರ್
ಪಶ್ಚಿಮ ಬಂಗಾಳದ ಅರಾಂಬಾಗ್ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್‌ನ ಅಪರೂಪಾ ಪೊದ್ದಾರ್ ಅವರು ಬಿಜೆಪಿಯ ತಪನ್ ಕುಮಾರ್ ರೇ ವಿರುದ್ಧ 1,142 ಮತಗಳಿಂದ ಜಯಗಳಿಸಿದ್ದರು.
ಇಮ್ತಿಯಾಜ್ ಜಲೀಲ್
ಮಹಾರಾಷ್ಟ್ರದ ಔರಂಗಾಬಾದ್ ಕ್ಷೇತ್ರದಲ್ಲಿ ಕಣಕ್ಕೇ ಇಳಿದಿದ್ದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್‌ನ ಇಮ್ತಿಯಾಜ್ ಜಲೀಲ್ ಅವರು ಚಂದ್ರಕಾಂತ್ ಖೈರೆ ವಿರುದ್ಧ 1,142 ಮತಗಳ ಅಂತರದಿಂದ ಗೆದ್ದಿದ್ದರು.