Site icon Vistara News

Lok Sabha Election: 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಮತದಾನ ಆರಂಭ; ʻಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿʼ ಎಂದ ಮೋದಿ

Lok Sabha Election

Lok Sabha election 2024: 4th Phase Voting On May 13 In 96 Constituencies

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election) ನಾಲ್ಕನೇ ಹಂತದ ಮತದಾನವು (Voting) ಸೋಮವಾರ (ಮೇ 12) ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮತದಾನ ಪ್ರೋತ್ಸಾಹಿಸಿ ಎಕ್ಸ್ ಪೋಸ್ಟ್‌ ಹಾಕಿದ್ದು, “ಮತ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿ” ಎಂದಿದ್ದಾರೆ. “ಲೋಕಸಭಾ ಚುನಾವಣೆಯ ಇಂದಿನ 4ನೇ ಹಂತದಲ್ಲಿ, 10 ರಾಜ್ಯಗಳು ಮತ್ತು ಯುಟಿಗಳಲ್ಲಿ 96 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ; ಯುವ ಮತದಾರರು ಹಾಗೂ ಮಹಿಳಾ ಮತದಾರರು ಮತದಾನಕ್ಕೆ ಶಕ್ತಿ ತುಂಬಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಬನ್ನಿ, ನಾವೆಲ್ಲರೂ ನಮ್ಮ ಕರ್ತವ್ಯವನ್ನು ಮಾಡೋಣ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸೋಣ! ” ಎಂದು ಬರೆದಿದ್ದಾರೆ.

10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಲ್ಲಿ ಮತದಾನ ಮುಂಜಾನೆ 7 ಗಂಟೆಗೆ ಶಾಂತಿಯುತವಾಗಿ ಆರಂಭವಾಯಿತು. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಜನ ಹಕ್ಕು ಚಲಾವಣೆ ಮಾಡಲಿದ್ದು, 1,717 ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಯಾವ ರಾಜ್ಯಗಳ ಎಷ್ಟು ಕ್ಷೇತ್ರಗಳಲ್ಲಿ ಮತದಾನ?

ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 13 ರಂದು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ

ಆಂಧ್ರಪ್ರದೇಶದಲ್ಲಿ ಸೋಮವಾರ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಆಂಧ್ರಪ್ರದೇಶದ 175 ವಿಧಾನಸಭೆ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಸತತ ಎರಡನೇ ಬಾರಿಗೆ ಸಿಎಂ ಗಾದಿಗೇರಲು ವೈ.ಎಸ್.‌ ಜಗನ್‌ಮೋಹನ್‌ ರೆಡ್ಡಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಮತ್ತೆ ಅಧಿಕಾರಕ್ಕೇರಲು ಟಿಡಿಪಿಯೂ ಸಜ್ಜಾಗಿದ್ದು, ಚುನಾವಣೆ ರಣಕಣವು ತೀವ್ರ ಜಿದ್ದಾಜಿದ್ದಿನಿಂದ ಕೂಡಿದೆ.

Madhavi Lata Kompella And Asaduddin Owaisi

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಮೊಹುವಾ ಮೊಯಿತ್ರಾ: ಕೃಷ್ಣನಗರ ಕ್ಷೇತ್ರ
ಪಶ್ಚಿಮ ಬಂಗಾಳದ ಕೃಷ್ಣನಗರದಿಂದ ಸ್ಪರ್ಧೆ. ಟಿಎಂಸಿ ಅಭ್ಯರ್ಥಿ. ಸಂಸತ್ ನಲ್ಲಿ ಪ್ರಶ್ನೆಗಾಗಿ ಹಣ ಆರೋಪ ಹೊತ್ತಿರುವ ಸಂಸದೆ.

ಅಮೃತ ರಾಯ್: ಕೃಷ್ಣನಗರ ಕ್ಷೇತ್ರ
ಪಶ್ಚಿಮಬಂಗಾಳದ ಕೃಷ್ಣನಗರದ ಬಿಜೆಪಿ ಅಭ್ಯರ್ಥಿ. ರಾಜ ವಂಶಸ್ಥೆ, ಮೊಹುವಾ ಮೊಯಿತ್ರಾ ವಿರುದ್ಧ ಸ್ಪರ್ಧೆ.

ಅಧಿರ್ ರಂಜನ್ ಚೌಧರಿ : ಬೆಹರಾಮಪುರ್ ಕ್ಷೇತ್ರ
ಪಶ್ಚಿಮ ಬಂಗಾಳದ ಬೆಹರಾಂಪುರ ಕ್ಷೇತ್ರದಿಂದ ಸ್ಪರ್ಧೆ. ಕಾಂಗ್ರೆಸ್ ಅಭ್ಯರ್ಥಿ

ಯೂಸುಫ್ ಪಠಾಣ್ : ಬೆಹರಾಮಪುರ್ ಕ್ಷೇತ್ರ
ಮಾಜಿ ಕ್ರಿಕೆಟಿಗ ಯೂಸುಫ್ ಬೆಹರಾಂಪುರ ಕ್ಷೇತ್ರದಿಂದ ಟಿ ಎಂ ಸಿ ಅಭ್ಯರ್ಥಿ. ಅಧಿರ್ ರಂಜನ್ ಚೌಧರಿ ವಿರುದ್ಧ ಸ್ಪರ್ಧೆ

ಅಖಿಲೇಶ್ ಯಾದವ್: ಕನೌಜ್ ಕ್ಷೇತ್ರ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಕನೌಜ್ ಕ್ಷೇತ್ರದಿಂದ ಸ್ಪರ್ಧೆ. ಈ ಕ್ಷೇತ್ರದಲ್ಲಿ ಸದ್ಯ ಬಿಜೆಪಿಯಿಂದ ಸುಬ್ರತಾ ಪಾಠಕ್ ಸಂಸದರಾಗಿದ್ದಾರೆ. 2019 ರ ಚುನಾವಣೆಯಲ್ಲಿ ಯಾದವ್, ಪತ್ನಿ ಡಿಂಪಲ್ ಅವರನ್ನು ಸೋಲಿಸುವ ಮೂಲಕ ಪಾಠಕ್ ಗೆಲುವು ಸಾಧಿಸಿದ್ದರು

ಗಿರಿರಾಜ್ ಸಿಂಗ್: ಬೇಗುಸರಾಯ್‌ ಕ್ಷೇತ್ರ
ಬಿಹಾರದ ಬೇಗುಸರಾಯ್‌ ಕ್ಷೇತ್ರದಿಂದ ಸ್ಪರ್ಧೆ. ಬಿಜೆಪಿಯ ಉಸ್ತುವಾರಿ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್. 2019ರ ಚುನಾವಣೆಯಲ್ಲಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿರುದ್ಧ ಸಿಂಗ್ ವಿಜಯಶಾಲಿಯಾಗಿದ್ದರು

ವೈ.ಎಸ್. ಶರ್ಮಿಳಾ: ಕಡಪ ಕ್ಷೇತ್ರ
ಆಂಧ್ರದ ಮಾಜಿ ಸಿಎಂ ವೈಎಸ್ಆರ್ ಅವರ ಪುತ್ರಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ವೈಎಸ್ ಶರ್ಮಿಳಾ, ತಮ್ಮ ಸೋದರ ಸಂಬಂಧಿ, ಎರಡು ಬಾರಿ ಹಾಲಿ ಸಂಸದ ವೈಎಸ್ ಅವಿನಾಶ್ ರೆಡ್ಡಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಶರ್ಮಿಳಾ ಸಹೋದರ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ

ಅಸಾದುದ್ದೀನ್ ಓವೈಸಿ: ಹೈದರಾಬಾದ್
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಈ ಕ್ಷೇತ್ರದಿಂದ ಸ್ಪರ್ಧೆ

ಮಾಧವಿ ಲತಾ: ಹೈದರಾಬಾದ್
ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ. ಹಿಂದುತ್ವದ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದಿರುವ ಮಾಧವಿ ಲತಾ‌

Madhavi Lata Kompella And Asaduddin Owaisi

ಅರ್ಜುನ್ ಮುಂಡ : ಖುಂತಿ ಕ್ಷೇತ್ರ
ಮೂರು ಬಾರಿ ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಹಾಗೂ ಕೇಂದ್ರದಲ್ಲಿ ಪ್ರಸ್ತುತ ಸಚಿವರಾಗಿ ಕಾರ್ಯ ನಿರ್ವಹಿಸಿತ್ತಿರುವ ಅರ್ಜುನ್ ಮುಂಡ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಬಂಡಿ ಸಂಜಯ್ ಕುಮಾರ್: ಕರೀಂನಗರ ಕ್ಷೇತ್ರ
ಮಾಜಿ ಬಿಜೆಪಿ ರಾಜ್ಯಧ್ಯಕ್ಷ ಹಾಗೂ ಹಾಲಿ ಸಂಸದ ಬಂಡಿ ಸಂಜಯ್ ಕುಮಾರ್ ಕರೀಂನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಶತ್ರುಘ್ನ ಸಿನ್ಹಾ: ಅಸನ್ಸೋಲ್ ಕ್ಷೇತ್ರ
ಪಶ್ಚಿಮ ಬಂಗಾಳ ಅಸನ್ನೋಲ್ ಕ್ಷೇತ್ರದಿಂದ ಬಾಲಿವುಡ್ ನಟ ಹಾಗೂ ರಾಜಕಾರಣಿ, ಬಿಹಾರ್ ಬಾಬು ಎಂದೇ ಪ್ರಸಿದ್ದಿಯಾಗಿರುವ ಶತ್ರುಘ್ನ ಸಿನ್ಹಾ ಸ್ಪರ್ಧೆ. ಟಿ ಎಂ ಸಿ ಪಕ್ಷದ ಅಭ್ಯರ್ಥಿ

ಕಿಶನ್ ರೆಡ್ಡಿ : ಸಿಕಂದರಾಬಾದ್ ಕ್ಷೇತ್ರ
ಪ್ರಸ್ತುತ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಸ್ಪರ್ಧೆಸುತ್ತಿರುವ ಕ್ಷೇತ್ರ.

ಇದನ್ನೂ ಓದಿ: Lok Sabha Election: 3ನೇ ಹಂತದಲ್ಲಿ 65% ಮತದಾನ; ಕರ್ನಾಟಕದಲ್ಲಿ ಶೇ.71.84ರಷ್ಟು ಹಕ್ಕು ಚಲಾವಣೆ

Exit mobile version