ಹೊಸದಿಲ್ಲಿ: ತೆಲುಗು ದೇಶಂ ಪಕ್ಷದ (Telugu Desam Party) ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು (N Chandrababu Naidu) ಅವರು ಬುಧವಾರ ತಡರಾತ್ರಿ ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನು ಭೇಟಿ ಮಾಡಿದ್ದು, ಲೋಕಸಭೆ ಚುನಾವಣೆಗೆ (Lok Sabha Election 2024) ಮುನ್ನ ರಾಜ್ಯದಲ್ಲಿ ಎರಡೂ ಪಕ್ಷಗಳು ಒಗ್ಗೂಡುವ ಸೂಚನೆಗಳನ್ನು ನೀಡಿವೆ.
ಮುಂಬರುವ ಲೋಕಸಭೆ ಚುನಾವಣೆ ಮತ್ತು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ನಾಯ್ಡು ಅವರು ಎನ್‌ಡಿಎ ಜೊತೆಗೆ ಹೋಗುವ ಸೂಚನೆ ನೀಡಿದ್ದಾರೆ. ಮೂಲಗಳ ಪ್ರಕಾರ, ನಾಯ್ಡು ಅವರು ಗೃಹ ಸಚಿವರ ನಿವಾಸದಲ್ಲಿ ಶಾ ಅವರನ್ನು ಭೇಟಿಯಾದರು. ನಡ್ಡಾ ಕೂಡ ಆಗ ಹಾಜರಿದ್ದರು.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ನಾಯ್ಡು ಅವರು ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸಲು ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೈಎಸ್‌ಆರ್ ಕಾಂಗ್ರೆಸ್ (YSR Congress) ಆಡಳಿತವಿರುವ ಆಂಧ್ರದಲ್ಲಿ ನಾಯ್ಡು ಅವರೊಂದಿಗಿನ ಮೈತ್ರಿಯು ಎನ್‌ಡಿಎಗೆ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಬಿಜೆಪಿ ನಂಬಿದೆ.
ಸದ್ಯ ಆಂಧ್ರಪ್ರದೇಶದಲ್ಲಿ ಬಿಜೆಪಿಯಿಂದ ಯಾವುದೇ ಲೋಕಸಭಾ ಸದಸ್ಯರು ಆರಿಸಿ ಬಂದಿಲ್ಲ. ʼತಮ್ಮ ಪಕ್ಷವು ಮೈತ್ರಿಗೆ ಮುಕ್ತವಾಗಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಟಿಡಿಪಿ ತಮಗೆ ಎಷ್ಟು ಸ್ಥಾನಗಳನ್ನು ನೀಡಲು ಒಪ್ಪುತ್ತದೆ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆʼ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.
ಜನತಾ ದಳ (ಯುನೈಟೆಡ್) ಅಧ್ಯಕ್ಷ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಮಹಾಘಟಬಂಧನ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡು ಎನ್‌ಡಿಎ ಜೊತೆಗೆ ಇತ್ತೀಚೆಗೆ ಸೇರಿದ್ದಾರೆ. ಅದರ ನಂತರ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ ನಾಯ್ಡು ಅವರು ಹಿಂದಿರುಗುತ್ತಿರುವುದು, ತಿಂಗಳಲ್ಲೇ ಎರಡನೇ ಪ್ರಮುಖ ಪ್ರಾದೇಶಿಕ ನಾಯಕರೊಬ್ಬರ ಇಂಥ ನಡೆಯಾಗಿದೆ.
543 ಸದಸ್ಯ ಬಲದ ಸದನಕ್ಕೆ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಪಕ್ಷ 370 ಸ್ಥಾನಗಳನ್ನು ಪಡೆಯಲಿದೆ ಮತ್ತು ಎನ್‌ಡಿಎ 400 ಸೀಟುಗಳನ್ನು ದಾಟಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಸಂಸತ್ತಿನಲ್ಲಿ ಪ್ರತಿಪಾದಿಸಿದ್ದರು.
ತೆಲಂಗಾಣ ಇನ್ನೂ ಆಂಧ್ರಪ್ರದೇಶದಿಂದ ಔಪಚಾರಿಕವಾಗಿ ಪ್ರತ್ಯೇಕಗೊಳ್ಳದಿರುವಾಗ ಎರಡೂ ಪಕ್ಷಗಳು 2014ರ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಿದ್ದವು. ಆಗ ಬಿಜೆಪಿ ರಾಜ್ಯದ 42 ಸ್ಥಾನಗಳ ಪೈಕಿ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿ ಅವುಗಳನ್ನು ಗೆದ್ದಿತ್ತು. ತೆಲಂಗಾಣ ರಚನೆಯ ನಂತರ ಆಂಧ್ರಪ್ರದೇಶ 25 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ ಆರರಿಂದ ಎಂಟು ಸ್ಥಾನಗಳಲ್ಲಿ ಸ್ಪರ್ಧಿಸಲು ಎದುರು ನೋಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಟಿಡಿಪಿ 2018ರಲ್ಲಿ ಎನ್‌ಡಿಎಯಿಂದ ಹೊರನಡೆದಿತ್ತು. ಆದರೆ 2019ರ ಚುನಾವಣೆಯಲ್ಲಿ ಅದು ಕೇವಲ ಮೂರು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ವೈಎಸ್‌ಆರ್ ಕಾಂಗ್ರೆಸ್‌ಗೆ ಟಿಡಿಪಿ ರಾಜ್ಯದಲ್ಲಿ ಅಧಿಕಾರವನ್ನು ಬಿಟ್ಟುಕೊಟ್ಟಿತ್ತು. ನಂತರ ಟಿಡಿಪಿ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರವನ್ನು ಬೆಂಬಲಿಸುತ್ತ ಬಂದಿದೆ.
ಇತ್ತೀಚಿನ ರಾಜಕೀಯ ಸಮೀಕರಣಗಳು ಟಿಡಿಪಿಯೊಂದಿಗಿನ ತನ್ನ ಸಂಬಂಧವನ್ನು ಪುನರುಜ್ಜೀವನಗೊಳಿಸುವ ಸಾಧ್ಯತೆಯನ್ನು ಅನ್ವೇಷಿಸಲು ಬಿಜೆಪಿಯನ್ನು ಪ್ರೇರೇಪಿಸಿವೆ. ಬಿಜೆಪಿ ಮಿತ್ರಪಕ್ಷವಾಗಿದ್ದ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷವು ಈಗಾಗಲೇ ಟಿಡಿಪಿ ಜೊತೆ ಕೈಜೋಡಿಸಲು ನಿರ್ಧರಿಸಿದೆ.
ಇದನ್ನೂ ಓದಿ: Nitish Kumar: ಬಿಜೆಪಿ ಮೈತ್ರಿ ಬಿಡೋ ಪ್ರಶ್ನೆಯೇ ಇಲ್ಲ; ನಿತೀಶ್ ಕುಮಾರ್ ಶಪಥ