Site icon Vistara News

Lok sabha Election 2024: ರಾಯ್‌ಬರೇಲಿಯಲ್ಲಿ ಕಣಕ್ಕಿಳಿದಿರುವ ದಿನೇಶ್‌ ಪ್ರತಾಪ್‌ ಸಿಂಗ್‌ ಹಿನ್ನೆಲೆ ಏನು?

Lok sabha Election 2024

ಉತ್ತರಪ್ರದೇಶ: ದೇಶದಲ್ಲಿ ಲೋಕಸಭೆ ಚುನಾವಣೆ(Lok sabha Election 2024) ರಂಗೇರಿದೆ. ತನ್ನ ಭದ್ರಕೋಟೆಯಾಗಿರುವ ಉತ್ತರಪ್ರದೇಶದ ರಾಯ್‌ಬರೇಲಿ(Rae Bareli)ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಘೋಷಿಸುವ ಮುನ್ನವೇ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಸೋಲನುಭವಿಸಿದ್ದ ದಿನೇಶ್‌ ಪ್ರತಾಪ್‌ ಸಿಂಗ್‌(Dinesh Pratap Singh) ಅವರಿಗೆ ಬಿಜೆಪಿಯು ಮತ್ತೆ ಟಿಕೆಟ್‌ ನೀಡಿದೆ.

ಯಾರು ಈ ದಿನೇಶ್‌ ಪ್ರತಾಪ್‌?

2004ರಲ್ಲಿ ಸಮಾಜವಾದಿ ಪಕ್ಷದ ತಾಲೂಕು ಮಟ್ಟದ ನಾಯರಾಗಿದ್ದ ದಿನೇಶ್‌ ಪ್ರತಾಪ್‌ ನಂತರ ದಿನಗಳಲ್ಲಿ ಬಹುಜನ ಸಮಾಜ ಪಾರ್ಟಿ(BSP)ಯಿಂದ ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸಿ ಸೋಲುಂಡಿದ್ದರು. 2019ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದು ಅವರ ರಾಜಕೀಯ ಬದುಕಿನ ಬಹುದೊಡ್ಡ ತಿರುವಾಗಿತ್ತು. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರೂ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ಗಳಿಸಿದ್ದರು. ಅವರು ಆ ಚುನಾವಣೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಮತ್ತೊಮ್ಮೆ ಬಿಜೆಪಿಯಿಂದ ಟಿಕೆಟ್‌ ಸಿಕ್ಕಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ದಿನೇಶ್‌ ಪ್ರತಾಪ್‌, ನನ್ನಂತಹ ಸಣ್ಣ ಮಟ್ಟದ ಕಾರ್ಯಕರ್ತನನ್ನು ಗುರುತಿಸಿ, ಮತ್ತೊಮ್ಮೆ ನಂಬಿಕೆ ಇಟ್ಟು ನನಗೆ ಟಿಕೆಟ್‌ ನೀಡಿರುವ ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ. ಪಕ್ಷದ ನಂಬಿಕೆಯನ್ನು ಯಾವುತ್ತೂ ಕಳೆದುಕೊಳ್ಳುವುದಿಲ್ಲ. ಒಂದು ಕಾಲದಲ್ಲಿ ರಾಯ್‌ಬರೇಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಇಲ್ಲಿಯೂ ಬದಲಾವಣೆಯ ಗಾಳಿ ಬೀಸಿದೆ. ಇಲ್ಲಿಯ ಒಂದೇ ಒಂದು ಗ್ರಾಮ ಪಂಚಾಯತ್‌ಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗಿಲ್ಲ. ಈ ರಾಯ್‌ಬರೇಲಿಯಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆದಿದೆ. ನಾವು ಅತಿ ಹೆಚ್ಚು ಮತಗಳಿಂದ ಗೆದ್ದೇ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ರಾಯ್‌ಬರೇಲಿಯಿಂದ ರಾಹುಲ್‌ ಗಾಂಧಿ ಕಣಕ್ಕೆ

ಬಹಳ ಕುತೂಹಲಕ್ಕೆ ಕಾರಣವಾಗಿದ್ದ ರಾಯ್‌ ಬರೇಲಿ ಮತ್ತು ಅಮೇಠಿ ಕ್ಷೇತ್ರಗಳಿಗೆ ಕಾಂಗ್ರೆಸ್‌ ಕೊನೆಗೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ರಾಯ್‌ ಬರೇಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಣಕ್ಕಿಳಿಯಲಿದ್ದು, ಇನ್ನು ಅಮೇಠಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ(Sonia Gandhi) ಆಪ್ತ ಕಿಶೋರಿ ಲಾಲ್‌ ಶರ್ಮಾ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಮೇ 17ರಂದು ನಡೆಯುವ ಐದನೇ ಹಂತದ ಮತದಾನದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಕೊನೆಯ ಹಂತದಲ್ಲಿ ಕಾಂಗ್ರೆಸ್‌ ಬಾಕಿ ಇರಿಸಿದ್ದ ಅಮೇಠಿ ಮತ್ತು ರಾಯ್‌ ಬರೇಲಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಕಾಂಗ್ರೆಸ್‌ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡಿದೆ.

ಇದನ್ನೂ ಓದಿ: Lok Sabha Election 2024: ರಾಯ್‌ಬರೇಲಿಯಿಂದ ರಾಹುಲ್‌ ಗಾಂಧಿ ಕಣಕ್ಕೆ, ಅಮೇಠಿಯಿಂದ ಕಿಶೋರಿಲಾಲ್‌ ಸ್ಪರ್ಧೆ

ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾದ ಬಳಿಕ ಖಾಲಿಯಾಗಿರುವ ರಾಯ್‌ ಬರೇಲಿ ಕ್ಷೇತ್ರದಿಂದ ಮೊದಲಿಗೆ ಪ್ರಿಯಾಂಕಾ ಗಾಂಧಿ ವಾಧ್ರಾ ಹಾಗೂ ಅಮೇಠಿಯಿಂದ ರಾಹುಲ್‌ ಗಾಂಧಿ ಕಣಕ್ಕಿಳಿಯುತ್ತಾರೆ ಎಂಬ ವಿಚಾರ ಬಹಳ ಚರ್ಚೆಯಾಗಿತ್ತು. ರಾಹುಲ್‌ ಗಾಂಧಿ ಈಗಾಗಲೇ ಕೇರಳದ ವಯನಾಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದೀಗ ರಾಯ್‌ಬರೇಲಿಯಲ್ಲಿ ಬಿಜೆಪಿಯ ದಿನೇಶ್‌ ಪ್ರತಾಪ್‌ ವಿರುದ್ಧ ಮತಭೇಟೆಗೆ ಇಳಿದಿದ್ದಾರೆ.

Exit mobile version