ನವದೆಹಲಿ: ದೇಶಕ್ಕೆ ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇವೆ. ಕೇಂದ್ರದಲ್ಲಿ ಬಿಜೆಪಿ ಹಾಗೂ ನರೇಂದ್ರ ಮೋದಿ (Narendra Modi) ಹ್ಯಾಟ್ರಿಕ್ ಕನಸು ಕಾಣುತ್ತಿದ್ದರೆ, ಬಿಜೆಪಿಯನ್ನು ಶತಾಯಗತಾಯ ಸೋಲಿಸಲು ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟವನ್ನು ರಚಿಸಿವೆ. ಹಾಗೆಯೇ, ರಣತಂತ್ರಗಳನ್ನೂ ರೂಪಿಸುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಬಿಜೆಪಿಯು ಅಭ್ಯರ್ಥಿಗಳ ಮೊದಲ ಪಟ್ಟಿ (Candidates List) ಬಿಡುಗಡೆಗೆ ಸಜ್ಜಾಗಿದೆ ಎಂದು ತಿಳಿದುಬಂದಿದೆ.
ಜನವರಿ ತಿಂಗಳ ಕೊನೆಯಲ್ಲಿ ಬಿಜೆಪಿಯು ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯ ಕೇಂದ್ರೀಯ ಚುನಾವಣೆ ಸಮಿತಿಯು ಜನವರಿ ಅಂತ್ಯದಲ್ಲಿ ಸಭೆ ನಡೆಸಲಿದ್ದು, ಸುಮಾರು 150-160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಾರಿ 70 ವರ್ಷ ದಾಟಿದವರಿಗೆ ಟಿಕೆಟ್ ನೀಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆದರೆ, ಸುಲಭವಾಗಿ ಗೆಲ್ಲುವ, ವರ್ಚಸ್ಸು ಇರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದು ಬಿಜೆಪಿ ರಣತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯು ಈ ಬಾರಿ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಲೆಕ್ಕಾಚಾರದಲ್ಲಿದೆ. ಕಳೆದ ಬಾರಿ 437 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿಯು ಈ ಬಾರಿ ಇದಕ್ಕಿಂತ ಹೆಚ್ಚು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ. ಹಾಗಾಗಿಯೇ, ಮೊದಲು ಸುಲಭವಾಗಿ ಜಯ ಸಾಧಿಸುವ ವಿಶ್ವಾಸ ಇರುವ ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಲಿದೆ. ನಂತರ ಲೆಕ್ಕಾಚಾರದ ಆಧಾರದ ಮೇಲೆ ಟಿಕೆಟ್ ಘೋಷಿಸುತ್ತದೆ ಎನ್ನಲಾಗಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಕುರಿತು ಮಿತ್ರ ಪಕ್ಷಗಳ ಜತೆಗೆ ಬಿಜೆಪಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಲೋಕಸಭೆ ಎಲೆಕ್ಷನ್‌ನಲ್ಲಿ ಹೆಚ್ಚು ಸೀಟ್ ಗೆಲ್ಲಿ, ಇಲ್ಲದಿದ್ದರೆ ಬಿಜೆಪಿಯಿಂದ ಸರ್ಕಾರಕ್ಕೆ ಕಂಟಕ; ಖರ್ಗೆ ಎಚ್ಚರಿಕೆ
ಇಂಡಿಯಾ ಒಕ್ಕೂಟದಲ್ಲಿ ಮುಗಿಯದ ಕಗ್ಗಂಟು
ಒಂದೆಡೆ ಬಿಜೆಪಿಯು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧವಾಗುತ್ತಿದ್ದರೆ, ಅತ್ತ ಪ್ರತಿಪಕ್ಷಗಳ ಒಕ್ಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟು ಮುಗಿಯುತ್ತಿಲ್ಲ. ಸುಮಾರು 28 ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟ ರಚಿಸಿರುವ ಕಾರಣ ಸೀಟು ಹಂಚಿಕೆಯು ಕಗ್ಗಂಟಾಗಿದೆ. ಅದರಲ್ಲೂ, ಟಿಎಂಸಿಯ ಮಮತಾ ಬ್ಯಾನರ್ಜಿ ಅವರು ಸೀಟು ಹಂಚಿಕೆ ಸಭೆಗೆ ಗೈರಾಗಲು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದಾಗಿ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಸಮಸ್ಯೆ ಬಗೆಹರಿಯುತ್ತಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಸೀಟು ಹಂಚಿಕೆ ಕುರಿತು ಪ್ರತಿಪಕ್ಷಗಳು ಸಭೆ ನಡೆಸಲಿವೆ ಎಂದು ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ