Site icon Vistara News

BJP Candidates List: ಲೋಕಸಭೆಗೆ ಬಿಜೆಪಿಯ 195 ಅಭ್ಯರ್ಥಿಗಳ ಪಟ್ಟಿ ರಿಲೀಸ್; ಇವರೇ ಕ್ಯಾಂಡಿಡೇಟ್ಸ್

Narendra Modi

Even if Modi turns 75, he will become PM: Amit Shah's reply to Arvind Kejriwal

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಕಸರತ್ತು ನಡೆಸುತ್ತಿದ್ದ ಬಿಜೆಪಿಯು ಕೊನೆಗೂ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು (BJP Candidates List) ಬಿಡುಗಡೆ ಮಾಡಿದೆ. ಬಿಜೆಪಿ ನಾಯಕ ವಿನೋದ್‌ ತಾವ್ಡೆ ಸೇರಿ ಹಲವು ನಾಯಕರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು. 195 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದರು. ಪಟ್ಟಿಯಲ್ಲಿ ಕರ್ನಾಟಕದ ಯಾವ ಕ್ಷೇತ್ರಕ್ಕೂ ಟಿಕೆಟ್‌ ಘೋಷಿಸಿಲ್ಲ ಎಂಬುದು ಗಮನಾರ್ಹವಾಗಿದೆ.

16 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದಾರೆ. ಯುವಕರು, ಸುಲಭವಾಗಿ ಗೆಲ್ಲುವ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ಉತ್ತರ ಪ್ರದೇಶದ 51 ಕ್ಷೇತ್ರಗಳಿಗೆ, ಪಶ್ಚಿಮ ಬಂಗಾಳ 20, ಮಧ್ಯಪ್ರದೇಶ 24, ಗುಜರಾತ್‌ 15, ರಾಜಸ್ಥಾನ 15, ಕೇರಳ 12, ತೆಲಂಗಾಣ 9, ಅಸ್ಸಾಂ 11, ಜಾರ್ಖಂಡ್‌ 11, ಛತ್ತೀಸ್‌ಗಢ 11, ದೆಹಲಿ 5, ಜಮ್ಮು-ಕಾಶ್ಮೀರ 2, ಉತ್ತರಾಖಂಡ 3, ಅರುಣಾಚಲ ಪ್ರದೇಶ 2, ಗೋವಾ 1, ತ್ರಿಪುರ 1, ಅಂಡಮಾನ್‌ ನಿಕೋಬಾರ್‌ 1 ಹಾಗೂ ದಿಯು ಮತ್ತು ದಮನ್‌ನ 1 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ.

ಇಲ್ಲಿದೆ 195 ಅಭ್ಯರ್ಥಿಗಳ ಪಟ್ಟಿ

ಭೂ ವಿಜ್ಞಾನಗಳ ಖಾತೆ ಸಚಿವ ಕಿರಣ್‌ ರಿಜಿಜು, ಸರ್ಬಾನಂದ ಸೋನೋವಾಲ್‌ ಸೇರಿ ಹಲವರು ಟಿಕೆಟ್‌ ಪಡೆದ ಗಣ್ಯರಾಗಿದ್ದಾರೆ. ದೆಹಲಿಯ ಚಾಂದಿನಿ ಚೌಕ್‌ನಿಂದ ಪ್ರವೀಣ್‌ ಕಂಡೇಲ್‌ವಾಲ್‌, ದೆಹಲಿ ಉತ್ತರ ಮನೋಜ್‌ ತಿವಾರಿ ಅವರು ಕಣಕ್ಕಿಳಿದಿದ್ದಾರೆ. ಉತ್ತರ ಗೋವಾದಿಂದ ಶ್ರೀಪಾದ್‌ ನಾಯಕ್‌, ಗಾಂಧಿನಗರದಿಂದ ಅಮಿತ್‌ ಶಾ, ಅಹ್ಮದಾಬಾದ್‌ ಪಶ್ಚಿಮ ಕ್ಷೇತ್ರದಿಂದ ದಿನೇಶ್‌ಭಾಯಿ ಮಕ್ವಾನ, ಪೋರ್‌ಬಂದರ್‌ನಿಂದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ ಅವರಿಗೆ ಟಿಕೆಟ್‌ ನೀಡಲಾಗಿದೆ.

ಕೇರಳದ ಕಾಸರಗೋಡು ಕ್ಷೇತ್ರದಿಂದ ಎಂ.ಎಲ್.ಅಶ್ವಿನಿ ಅವರಿಗೆ ಮಣೆ ಹಾಕಲಾಗಿದೆ. ಕೇರಳದಲ್ಲಿ ಎ.ಕೆ. ಆ್ಯಂಟನಿ ಪುತ್ರ ಅನಿಲ್‌ ಆ್ಯಂಟನಿ, ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಗೆ ತಿರುವನಂತಪುರಂನಿಂದ ಟಿಕೆಟ್‌ ನೀಡಲಾಗಿದೆ. ಮಧ್ಯಪ್ರದೇಶದ ವಿದಿಶಾದಿಂದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕಣಕ್ಕಿಳಿದಿದ್ದಾರೆ. ತೆಲಂಗಾಣದ ಕರೀಂ ನಗರದಿಂದ ಬಂಡಿ ಸಂಜೀವ್‌ ಕುಮಾರ್‌, ಸಿಕಂದರಾಬಾದ್‌ ಜಿ. ಕಿಶನ್‌ ರೆಡ್ಡಿ, ಹೈದರಾಬಾದ್‌ ಮಾಧವಿ ಲತಾ ಸ್ಪರ್ಧಿಸುತ್ತಿದ್ದಾರೆ.

ಉತ್ತರ ಪ್ರದೇಶದ ಮಥುರಾದಿಂದ ಹೇಮಾಮಾಲಿನಿ, ಸೀತಾಪುರದಿಂದ ರಾಜೇಶ್‌ ವರ್ಮಾ, ಹರ್ದೊಯಿಯಲ್ಲಿ ಜಯಪ್ರಕಾಶ್‌ ರಾವತ್‌, ಉನ್ನಾವೋದಿಂದ ಸಾಕ್ಷಿ ಮಹಾರಾಜ್‌, ಲಖನೌನಿಂದ ರಾಜನಾಥ್‌ ಸಿಂಗ್‌, ಅಮೇಥಿ ಸ್ಮೃತಿ ಇರಾನಿ, ಫತೇಪುರ ಸಾಧ್ವಿ ನಿರಂಜನ್‌ ಜ್ಯೋತಿ, ಗೋರಖ್‌ಪುರ ರವಿಕಿಶನ್‌ ಅವರು ಸ್ಪರ್ಧಿಸಲಿದ್ದಾರೆ.

ಅಭ್ಯರ್ಥಿಗಳ ಆಯ್ಕೆಗೆ ಮಧ್ಯರಾತ್ರಿವರೆಗೆ ಸಭೆ

ಬಿಜೆಪಿಯು ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಸಾಲು ಸಾಲು ಸಭೆ ನಡೆಸಿತ್ತು. ಅದರಲ್ಲೂ, ಫೆಬ್ರವರಿ 29ರ ಮಧ್ಯರಾತ್ರಿ 3 ಗಂಟೆ ತನಕ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಸಿ 100 ಮಂದಿಯ ಪಟ್ಟಿಯನ್ನು ಫೈನಲ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿ ಹಲವು ನಾಯಕರು ಬೆಳಗಿನ ಜಾವದವರೆಗೆ ಸಭೆ ನಡೆಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: PM Narendra Modi: ಪ್ರಮುಖ ಹುದ್ದೆಗಳಿಗೆ 25 ಖಾಸಗಿ ವಲಯದ ತಜ್ಞರ ನೇಮಕಕ್ಕೆ ಮುಂದಾದ ಮೋದಿ ಸರ್ಕಾರ

ಬಿಜೆಪಿಯಲ್ಲಿ ಹಿರಿಯ ನಾಯಕರು, ಹಲವು ಬಾರಿ ಸಂಸದರಾದವರು, ಜನರ ನಿರೀಕ್ಷೆಗಳಿಗೆ ತಕ್ಕ ಹಾಗೆ ಕೆಲಸ ಮಾಡದ ಸಂಸದರಿಗೆ ಈ ಬಾರಿ ಟಿಕೆಟ್‌ ನೀಡದಿರಲು ಬಿಜೆಪಿಯು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಹೊಸಬರಿಗೆ, ಅದರಲ್ಲೂ ದಕ್ಷವಾಗಿ ಕೆಲಸ ಮಾಡುವ ಯುವಕರಿಗೆ ಟಿಕೆಟ್‌ ನೀಡಲು ಪಕ್ಷದ ಹೈಕಮಾಂಡ್‌ ನಿರ್ಧರಿಸಿದೆ. ಇದರ ಭಾಗವಾಗಿಯೇ ಬಿಜೆಪಿಯ ಕೆಲ ನಾಯಕರು ತಾವೇ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 370 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಹಾಗೂ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ನರೇಂದ್ರ ಮೋದಿ ಅವರ ಗುರಿಯಾಗಿದೆ. ಇದರ ದಿಸೆಯಲ್ಲಿ ಬಿಜೆಪಿಯು ಈಗಾಗಲೇ ಹಲವು ರಣತಂತ್ರ ರೂಪಿಸಿದೆ. ಈಗ ಇದೇ ಗುರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version