ನವದೆಹಲಿ: ಚುನಾವಣೆ ಆಯೋಗವು ಲೋಕಸಭೆ ಚುನಾವಣೆ (Lok Sabha Election 2024) ದಿನಾಂಕ ಘೋಷಿಸಿದೆ. ಏಪ್ರಿಲ್ 19ರಿಂದ ಜೂನ್ 1ರ ಅವಧಿಯಲ್ಲಿ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Rajiv Kumar) ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಚುನಾವಣೆ ಘೋಷಣೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ರಾಜೀವ್ ಕುಮಾರ್, ವಿದ್ಯುನ್ಮಾನ ಮತಯಂತ್ರಗಳ (EVM) ಹ್ಯಾಕಿಂಗ್ ಕುರಿತ ಪ್ರಶ್ನೆಗೆ ಕವಿತೆ ಮೂಲಕವೇ ಉತ್ತರಿಸಿದರು. ಹಾಗೆಯೇ, ಪ್ರತಿ ಬಾರಿ ಚುನಾವಣೆಯಲ್ಲಿ ಸೋತಾಗಲೂ ಇವಿಎಂಗಳನ್ನು ದೂಷಿಸುವ ಪ್ರತಿಪಕ್ಷಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
“ಇವಿಎಂ ಕುರಿತು ಪ್ರಶ್ನೆ ಬಂದೇ ಬರುತ್ತದೆ ಎಂಬುದು ನನಗೆ ಗೊತ್ತಿತ್ತು. ಹಾಗಾಗಿಯೇ, ನಾನೇನೋ ಬರೆದುಕೊಂಡು ಬಂದಿದ್ದೇನೆ. ಇದು ಇವಿಎಂ ಸ್ವಗತವೂ ಆಗಿದೆ. ಪ್ರತಿ ಬಾರಿ ನೀವು ಕಂಡ ಕನಸು ನನಸಾಗದಿದ್ದಾಗ ಇವಿಎಂಗಳನ್ನು ದೂಷಿಸುವುದು ಸರಿಯಲ್ಲ. ನೀವು ವಿಶ್ವಾಸ ಗಳಿಸಲು ಸಾಧ್ಯವಾಗಿಲ್ಲ ಎಂದು ಇವಿಎಂ ಮೇಲೆ ಆರೋಪ ಹೊರಿಸುವುದು ಕೂಡ ಔಚಿತ್ಯವಲ್ಲ. ಕೊನೆಗೆ, ಫಲಿತಾಂಶ ಬಂದಾಗ ನೀವು ಅದನ್ನು ಸ್ವೀಕರಿಸಲು ಕೂಡ ಸಿದ್ಧರಿರುವುದಿಲ್ಲ” ಎಂಬುದನ್ನು ಕವಿತೆ ಮೂಲಕ ಹೇಳುವ ಮೂಲಕ ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ಕುಟುಕಿದರು. ಹಾಗೆಯೇ, “ಇವಿಎಂಗಳು ನೂರಕ್ಕೆ ನೂರರಷ್ಟು ಸುರಕ್ಷಿತವಾಗಿವೆ” ಎಂದು ತಿಳಿಸಿದರು.
This video has triggered Congress IT Celliyas.
— BALA (@erbmjha) March 16, 2024
Who is EC talking about? Any guesses? 😁 pic.twitter.com/aT6WPPMh0p
ಈಗಿನಿಂದಲೇ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಯಾರು ಕೂಡ ನಿಯಮಗಳನ್ನು ಮೀರಬಾರದು. ಮಾದರಿ ನೀತಿ ಸಂಹಿತೆ ಜಾರಿ ವೇಳೆ ಹಿಂಸಾಚಾರ ಎಸಗಿದವರ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಿಸಲಾಗುತ್ತದೆ. ಹಣ, ತೋಳ್ಬಲ, ತಪ್ಪು ಮಾಹಿತಿ ರವಾನೆಯನ್ನು ತಡೆಯಲು ಆಯೋಗವು ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಇನ್ನು, ರಾಜಕೀಯ ವ್ಯಕ್ತಿಗಳು ಕೂಡ ವಿಷಯಗಳ ಆಧಾರಿತವಾಗಿ ಪ್ರಚಾರ ಮಾಡಬೇಕೇ ಹೊರತು, ಗೊಂದಲ, ಗಲಾಟೆಗೆ ಅವಕಾಶ ಮಾಡಿಕೊಡಬಾರದು ಎಂದು ಸೂಚಿಸಿದರು.
ಇದನ್ನೂ ಓದಿ: Lok Sabha Election 2024: ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟ; ಪಕ್ಷಗಳಿಗೆ ಆಯೋಗ ಸೂಚಿಸಿದ್ದೇನು?
97 ಕೋಟಿ ನೋಂದಾಯಿತ ಮತದಾರರು
97 ಕೋಟಿ ಮತದಾರರು ಈ ನೋಂದಣಿ ಮಾಡಿಕೊಂಡಿದ್ದಾರೆ. 10.5 ಲಕ್ಷ ಮತಗಟ್ಟೆಗಳನ್ನು ರಚಿಸಲಾಗುತ್ತದೆ. 55 ಲಕ್ಷ ಮತಯಂತ್ರಗಳನ್ನು ಚುನಾವಣೆಗಾಗಿ ಬಳಸಿಕೊಳ್ಳುತ್ತೇವೆ. ಇದುವರೆಗೆ 100 ಅಧಿಕ ವಿಧಾನಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ಆಯೋಜಿಸಿದ ಕೀರ್ತಿ ಚುನಾವಣಾ ಆಯೋಗದ್ದಾಗಿದೆ. ಈ ಬಾರಿ 18-19 ವರ್ಷದ 1.89 ಕೋಟಿ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 85 ವರ್ಷ ದಾಟಿದವರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ವಿಶೇಷ ಚೇತನರಿಗೂ ಕೂಡ ಮನೆಯಿಂದಲೇ ಮತದಾನ ಮಾಡಬಹುದಾಗಿದೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ