Site icon Vistara News

Lok Sabha Election: ನಾಳೆ ಮೊದಲ ಹಂತದ ಮತದಾನ; ಪ್ರಜಾಪ್ರಭುತ್ವದ ಹಬ್ಬಕ್ಕೆ ಹೇಗಿದೆ ಸಿದ್ಧತೆ?

Lok Sabha Election

Lok Sabha Election 2024: First Phase Of Voting Tomorrow; Preparations On Full Swing

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಶುಕ್ರವಾರ (ಏಪ್ರಿಲ್‌ 19) ಚಾಲನೆ ಸಿಗಲಿದೆ. ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಳೆ ಮೊದಲ ಹಂತದ ಮತದಾನ (First Phase Voting) ನಡೆಯಲಿದ್ದು, ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಆರಂಭವಾಗಲಿದ್ದು, ಸಂಜೆ 5 ಗಂಟೆವರೆಗೆ ಜನರು ಹಕ್ಕು ಚಲಾಯಿಸಬಹುದಾಗಿದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನ ಇದ್ದರೆ ಇನ್ನೂ ಒಂದು ಗಂಟೆ ವಿಸ್ತರಣೆ ಮಾಡಬಹುದಾಗಿದೆ. ಮೊದಲ ಹಂತದಲ್ಲಿ 102 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಸಿದ್ಧತೆ ಹೇಗಿದೆ? ಯಾವ ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬುದು ಸೇರಿ ವಿವಿಧ ಮಾಹಿತಿ ಇಲ್ಲಿದೆ.

ಚುನಾವಣೆ ಆಯೋಗ ಸನ್ನದ್ಧ

ಪ್ರಜಾಪ್ರಭುತ್ವದ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಪಾರದರ್ಶಕವಾಗಿ ಆಚರಿಸಲು ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಮತಗಟ್ಟೆಗಳಿಗೆ ಮತಯಂತ್ರಗಳು ಸೇರಿ ಅಗತ್ಯ ಉಪಕರಣಗಳ ರವಾನೆ, ಸಿಬ್ಬಂದಿಯ ರವಾನೆ, ಮತದಾರರಿಗೆ ಸಕಲ ರೀತಿಯ ಸೌಲಭ್ಯ ಒದಗಿಸುವುದು ಸೇರಿ ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಇನ್ನು ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಶಾಂತಿಯುತ ಮತದಾನ ಪ್ರಕ್ರಿಯೆಗೆ ಅನುವು ಮಾಡಿಕೊಡುತ್ತಿದೆ.

ನಾಳೆ ಎಲ್ಲೆಲ್ಲಿ ಮತದಾನ?

ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶುಕ್ರವಾರ ಮತದಾನ ನಡೆಯಲಿದೆ. ತಮಿಳುನಾಡಿನ 39, ಉತ್ತರಾಖಂಡ 5, ಅರುಣಾಚಲ ಪ್ರದೇಶ 2, ಮಣಿಪುರ 2, ಮಿಜೋರಾಂ 2, ನಾಗಾಲಾಂಡ್ಯ್‌ 1, ಸಿಕ್ಕಿಂ 1, ಬಿಹಾರ 4, ಛತ್ತೀಸ್‌ಗಢ 1, ಮಧ್ಯಪ್ರದೇಶ 6, ಮಹಾರಾಷ್ಟ್ರ 5, ರಾಜಸ್ಥಾನ 12, ತ್ರಿಪುರ 1, ಉತ್ತರ ಪ್ರದೇಶ 8, ಪಶ್ಚಿಮ ಬಂಗಾಳ 3, ಅಂಡಮಾನ್‌ ನಿಕೋಬಾರ್‌ ದ್ವೀಪಗಳು 1, ಜಮ್ಮು ಕಾಶ್ಮೀರ 1, ಲಕ್ಷದ್ವೀಪ 1 ಹಾಗೂ ಪುದುಚೇರಿಯ ಒಂದು ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಕಣದಲ್ಲಿರುವ ಪ್ರಮುಖರು ಯಾರು?

ಮೊದಲ ಹಂತದ ಚುನಾವಣೆಯಲ್ಲಿಯೇ ದೇಶದ ಘಟಾನುಘಟಿಗಳ ಭವಿಷ್ಯವು ಮತಯಂತ್ರದಲ್ಲಿ ಭದ್ರವಾಗಲಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (ಕೊಯಮತ್ತೂರು), ಮಾಜಿ ರಾಜ್ಯಪಾಲೆ ತಮಿಳ್‌ಸಾಯಿ ಸುಂದರರಾಜನ್‌ (ಚೆನ್ನೈ ದಕ್ಷಿಣ), ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ (ಜಮುಯಿ), ಮಾಜಿ ಸಿಎಂ ಕಮಲ್‌ನಾಥ್‌ ಪುತ್ರ ನಕುಲ್‌ ನಾಥ್‌ (ಛಿಂದ್ವಾರ), ಕನಿಮೋಳಿ ಕರುಣಾನಿಧಿ (ತೂತುಕುಡಿ) ಸೇರಿ ಹಲವು ಪ್ರಮುಖ ಅಭ್ಯರ್ಥಿಗಳ ಭವಿಷ್ಯವು ನಾಳೆ ತೀರ್ಮಾನವಾಗಲಿದೆ.

ಲೋಕಸಭೆ ಚುನಾವಣೆಯು ಶುಕ್ರವಾರ ಆರಂಭವಾಗಲಿದ್ದು, ಜೂನ್‌ 1ರವರೆಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮೊದಲ ಹಂತದಲ್ಲಿ 1,626 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದ ಮತದಾನದ ಹಿನ್ನೆಲೆಯಲ್ಲಿ ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ. ಛತ್ತೀಸ್‌ಗಢದಲ್ಲಿ ನಕ್ಸಲ್‌ ದಾಳಿಯ ಭೀತಿ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದಲ್ಲಿ ಏಪ್ರಿಲ್‌ 26ರಂದು ಮೊದಲ ಹಂತದ ಮತದಾನ ನಡೆಯಲಿದೆ.

ಇದನ್ನೂ ಓದಿ: Priyanka Vadra: ಇವಿಎಂ ತಿರುಚದಿದ್ದರೆ ಬಿಜೆಪಿಗೆ 180 ಸೀಟೂ ಬರಲ್ಲ ಎಂದ ಪ್ರಿಯಾಂಕಾ ವಾದ್ರಾ!

Exit mobile version