ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದಾದ ಬಳಿಕ ಕಣಿವೆಯಲ್ಲಿ ಭಾರಿ ಬದಲಾವಣೆ ಆಗಿದೆ, ಕಲ್ಲು ತೂರಾಟ ನಿಂತಿದೆ, ಸಚಿನ್ ತೆಂಡೂಲ್ಕರ್ ಅಲ್ಲಿನ ಬೀದಿಗಳಲ್ಲಿ ಕ್ರಿಕೆಟ್ ಆಡುವಷ್ಟು, ಜಿ-20 ಸಭೆ ಆಯೋಜಿಸುವಷ್ಟು ಬದಲಾಗಿದೆ. ಅಷ್ಟೇ ಅಲ್ಲ, ಜಮ್ಮು-ಕಾಶ್ಮೀರದ (Jammu Kashmir) ಶ್ರೀನಗರದಲ್ಲಿ ಕಳೆದ 28 ವರ್ಷಗಳಲ್ಲಿಯೇ ಗರಿಷ್ಠ ಮತದಾನ (Lok Sabha Election) ದಾಖಲಾಗಿದೆ ಎಂದು ಚುನಾವಣೆ ಆಯೋಗ (Election Commission) ಮಾಹಿತಿ ನೀಡಿದೆ. ಇದಕ್ಕೆ 370ನೇ ವಿಧಿ ರದ್ದುಗೊಳಿಸಿದ್ದೇ ಕಾರಣ ಎನ್ನಲಾಗುತ್ತಿದೆ.
ಶ್ರೀನಗರದಲ್ಲಿ ಹೆಚ್ಚಿನ ಮತದಾನ ದಾಖಲಾಗಿದೆ. ಸೋಮವಾರ ಶ್ರೀನಗರದಲ್ಲಿ ಮತದಾನ ನಡೆದಿದ್ದು, ಶೇ.35.97ರಷ್ಟು ಮತದಾನ ದಾಖಲಾಗಿದೆ. ಇದು 1996ರ ಲೋಕಸಭೆ ಚುನಾವಣೆ ಬಳಿಕ ದಾಖಲಾದ ಗರಿಷ್ಠ ಮತದಾನ ಎಂದು ಆಯೋಗ ತಿಳಿಸಿದೆ. ಶ್ರೀನಗರದಲ್ಲಿ 2019ರಲ್ಲಿ ಶೇ.14.43ರಷ್ಟು ಹಾಗೂ 2014ರಲ್ಲಿ ಶೇ.25.86ರಷ್ಟು ಮತದಾನ ದಾಖಲಾಗಿತ್ತು. ಶ್ರೀನಗರದಲ್ಲಿ 17.48 ಲಕ್ಷ ಮತದಾರರು ನೋಂದಣಿ ಮಾಡಿಕೊಂಡಿದ್ದರು.
ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಉತ್ತಮ ಮತದಾನವೂ ದಾಖಲಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಉಗ್ರರ ದಾಳಿ ಭೀತಿ, ಕಲ್ಲುತೂರಾಟ ಮಾಡುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಹೆಚ್ಚಿನ ಜನ ಮತದಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಯಾವ ರಾಜ್ಯದಲ್ಲಿ ಎಷ್ಟು ಮತದಾನ?
ಸಂಜೆ 5 ಗಂಟೆ ಸುಮಾರಿಗೆ ಆಂಧ್ರಪ್ರದೇಶದಲ್ಲಿ ಶೇ.68.04, ಬಿಹಾರ ಶೇ.54.14, ಜಾರ್ಖಂಡ್ ಶೇ.63.14, ಮಧ್ಯಪ್ರದೇಶ ಶೇ.68.01, ಮಹಾರಾಷ್ಟ್ರ ಶೇ.52.49, ಒಡಿಶಾ ಶೇ.62.96, ತೆಲಂಗಾಣ ಶೇ.61.16, ಉತ್ತರ ಪ್ರದೇಶ ಶೇ.56.35, ಪಶ್ಚಿಮ ಬಂಗಾಳದಲ್ಲಿ ಶೇ.75.66ರಷ್ಟು ಮತದಾನ ದಾಖಲಾಗಿದೆ. ದೇಶದ ಹಲವೆಡೆ ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು.
ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಐದನೇ ಹಂತದ ಮತದಾನವು ಮೇ 20ರಂದು ನಡೆಯಲಿದೆ. ಜೂನ್ 1ರಂದು ಕೊನೆಯ ಅಥವಾ ಏಳನೇ ಹಂತದ ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: Lok Sabha Election: ನಾಲ್ಕನೇ ಹಂತದಲ್ಲಿ ಶೇ.62.31ರಷ್ಟು ಮತದಾನ; ಬಂಗಾಳದಲ್ಲಿ ಹೆಚ್ಚು