ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಕೂಡ ಮೊದಲ ಪಟ್ಟಿ (Congress Candidates List) ತಯಾರಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈಶಾನ್ಯ ಭಾಗದ 7 ರಾಜ್ಯಗಳು, ಕರ್ನಾಟಕ, ಕೇರಳ, ತೆಲಂಗಾಣ, ಛತ್ತೀಸ್‌ಗಢ ಹಾಗೂ ದೆಹಲಿ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ನಾಯಕರು ಗುರುವಾರ (ಮಾರ್ಚ್ 7) ಕೇಂದ್ರೀಯ ಚುನಾವಣೆ ಸಭೆ (Congress CEC Meeting) ನಡೆಸಿದ್ದು, ಇದರ ದಿಸೆಯಲ್ಲಿಯೇ ಮಾರ್ಚ್ 11ರಂದು ಮತ್ತೊಂದು ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಸಿಇಸಿಯು ಗುರುವಾರ ನಡೆಸಿದ ಸಭೆಯಲ್ಲಿ ಕರ್ನಾಟಕದ 11 ಹಾಗೂ ತೆಲಂಗಾಣದ 7 ಲೋಕಸಭೆ ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಾರ್ಚ್ 11ರಂದು ಮತ್ತೊಮ್ಮೆ ಸಭೆ ನಡೆಸುವ ಮೂಲಕ ಮೊದಲ ಪಟ್ಟಿಗೆ ಹೆಸರುಗಳನ್ನು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದಿಷ್ಟು ಮೂಲಗಳ ಪ್ರಕಾರ, ಕಾಂಗ್ರೆಸ್ ಶುಕ್ರವಾರವೇ (ಮಾರ್ಚ್ 8) ಮೊದಲ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
#WATCH | Delhi: Congress CEC (Central Election Committee) meeting concludes.
— ANI (@ANI) March 7, 2024
Telangana Minister Uttam Kumar Reddy says, "I am not authorised to speak. There was discussion on some states, the rest will happen after 2-3 days… pic.twitter.com/PdtwXF0i4t
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕಿ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಅಧೀರ್ ರಂಜನ್ ಚೌಧರಿ ಸೇರಿ ಹಲವು ನಾಯಕರು ಸಭೆ ನಡೆಸಿದ್ದಾರೆ. ಗುಜರಾತ್‌ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಕೈಗೊಳ್ಳುತ್ತಿರುವ ರಾಹುಲ್ ಗಾಂಧಿ ಅವರು ವರ್ಚ್ಯುವಲ್ ವೇದಿಕೆ ಮೂಲಕ ಸಭೆಯಲ್ಲಿ ಪಾಲ್ಗೊಂಡರು. ಇದೇ ವೇಳೆ, ಅವರು ವಯನಾಡು ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Rahul Gandhi: ವಯನಾಡಿನಿಂದಲೇ ರಾಹುಲ್ ಗಾಂಧಿ ಸ್ಪರ್ಧೆ; ಕಾಂಗ್ರೆಸ್ ಸಿಇಸಿ ತೀರ್ಮಾನ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿಯಿಂದಲೂ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಮೇಥಿ ಲೋಕಸಭೆ ಕ್ಷೇತ್ರದಿಂದ ರಾಹುಲ್ ಗಾಂಧಿ ಹಾಗೂ ರಾಯ್‌ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಅಮೇಥಿ ಹಾಗೂ ವಯನಾಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಆದರೆ, ಅಮೇಥಿಯಲ್ಲಿ ಅವರು ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲನುಭವಿಸಿದ್ದರು. ಆದರೂ, ಈ ಬಾರಿ ಮತ್ತೆ ರಾಹುಲ್ ಗಾಂಧಿ ಅವರು ಅಮೇಥಿಯಿಂದಲೇ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ