Site icon Vistara News

Lok Sabha Election: 5ನೇ ಹಂತದಲ್ಲಿ ಕೇವಲ ಶೇ.57.5ರಷ್ಟು ಮತದಾನ; ಯಾವ ರಾಜ್ಯದಲ್ಲಿ ಹೆಚ್ಚು?

Lok Sabha Election

Lok Sabha Election 2024: Phase 5 polls see 57% turnout till 5 pm

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ಐದನೇ ಹಂತದ ಮತದಾನವು ಸೋಮವಾರ (ಮೇ 20) ಶಾಂತಿಯುತವಾಗಿ ನಡೆದಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಶೇ.57.5ರಷ್ಟು ಮತದಾನ ದಾಖಲಾಗಿದೆ. ಕಳೆದ ನಾಲ್ಕು ಹಂತದ ಮತದಾನದ ವೇಳೆ ಹೆಚ್ಚಿನ ಮತದಾನ ದಾಖಲಾಗಿತ್ತು. ಆದರೆ, ಐದನೇ ಹಂತದಲ್ಲಿ ಮತದಾನ ಪ್ರಮಾಣ ಭಾರಿ ಇಳಿಕೆಯಾಗಿದೆ. ಈ ಕುರಿತು ಚುನಾವಣೆ ಆಯೋಗ ಅಂಕಿ-ಅಂಶ ಬಿಡುಗಡೆ ಮಾಡಿದಾಗಲೇ ನಿಖರ ಮಾಹಿತಿ ಲಭ್ಯವಾಗಲಿದೆ.

ಪಶ್ಚಿಮ ಬಂಗಾಳದಲ್ಲಿ ಹೆಚ್ಚು

ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದಲ್ಲಿ ಹೆಚ್ಚಿನ ಮತದಾನ ದಾಖಲಾಗಿದೆ. ರಾಜ್ಯದಲ್ಲಿ ಕೆಲವೆಡೆ ಹಿಂಸಾಚಾರ ಪ್ರಕರಣಗಳು ಸುದ್ದಿಯಾಗಿದ್ದರೂ ಶೇ.73ರಷ್ಟು ಮತದಾನ ದಾಖಲಾಗಿದೆ. ಇನ್ನು ಲಡಾಕ್‌ನಲ್ಲಿ ಶೇ.67.15, ಜಾರ್ಖಂಡ್‌ನಲ್ಲಿ ಶೇ.61.90ರಷ್ಟು ಮತದಾನ ನಡೆದಿದೆ. ಇನ್ನು ಮಹಾರಾಷ್ಟ್ರದಲ್ಲಿ ಕೇವಲ ಶೇ.48.66ರಷ್ಟು ಮತದಾನ ದಾಖಲಾಗಿದ್ದು, ಐದನೇ ಹಂತದಲ್ಲಿ ಕನಿಷ್ಠ ಮತದಾನ ನಡೆದ ರಾಜ್ಯ ಎನಿಸಿದೆ. ನಾಲ್ಕನೇ ಹಂತದಲ್ಲೂ ಮಹಾರಾಷ್ಟ್ರದಲ್ಲಿ ಕನಿಷ್ಠ ಮತದಾನ ದಾಖಲಾಗಿತ್ತು.

ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳ 7, ಬಿಹಾರ ಹಾಗೂ ಒಡಿಶಾದಲ್ಲಿ ತಲಾ 5, ಜಾರ್ಖಂಡ್‌ನಲ್ಲಿ 3, ಜಮ್ಮು ಕಾಶ್ಮೀರ ಮತ್ತು ಲಡಾಕ್‌ನ ತಲಾ 1 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ (ಲಖನೌ), ಸ್ಮೃತಿ ಇರಾನಿ (ಅಮೇಥಿ), ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (ರಾಯ್‌ಬರೇಲಿ), ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ (ಬಾರಾಮುಲ್ಲಾ) ಸೇರಿ ಹಲವು ಗಣ್ಯರ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದೆ.

ನಾಲ್ಕನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿತ್ತು. ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು. ಮೂರೂ ಹಂತಗಳಲ್ಲಿ 2019ಕ್ಕಿಂತ ಕಡಿಮೆ ಮತದಾನ ದಾಖಲಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಆದರೀಗ, 4ನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಬಾರಿಗಿಂತ ಕೇವಲ 0.40ರಷ್ಟು ಕಡಿಮೆಯಾಗಿದೆ. ಹಾಗಾಗಿ, ನಾಲ್ಕನೇ ಹಂತದ ಮತದಾನವು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

ಐದನೇ ಹಂತದ ಮತದಾನದೊಂದಿಗೆ ದೇಶಾದ್ಯಂತ ಇದುವರೆಗೆ ಒಟ್ಟು 428 ಕ್ಷೇತ್ರಗಳಲ್ಲಿ ಚುನಾವಣೆ ನಡೆದಂತಾಗಿದೆ. ಉಳಿದ ಕ್ಷೇತ್ರಗಳಲ್ಲಿ ಐದು ಹಾಗೂ ಆರನೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್‌ 1ರಂದು ಚುನಾವಣೆ ಮುಗಿಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯೂ ನಡೆದಿದ್ದು, ಜೂನ್‌ 4ರಂದೇ ಫಲಿತಾಂಶ ತಿಳಿಯಲಿದೆ.

ಇದನ್ನೂ ಓದಿ: Narendra Modi: ಮುಸ್ಲಿಮರ ವೋಟಿಗಾಗಿ ಮಮತಾ ಬ್ಯಾನರ್ಜಿ ಹಿಂದು ಸಂಘಟನೆಗಳ ವಿರುದ್ಧ ಆರೋಪ; ಮೋದಿ ಟೀಕೆ

Exit mobile version