Site icon Vistara News

Lok Sabha Election: ನಾಳೆ ಕೊನೆಯ ಹಂತದ ಮತದಾನ; ಮೋದಿ, ಕಂಗನಾ ಸೇರಿ ಹಲವರ ಭವಿಷ್ಯ ನಿರ್ಧಾರ

Lok Sabha Election

Lok Sabha election 2024 Phase 7: Voting date, candidates and all you need to know

ನವದೆಹಲಿ: ದೇಶದ ಭವಿಷ್ಯವನ್ನು ನಿರ್ಧರಿಸುವ ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದಿದೆ. ಶನಿವಾರ (ಜೂನ್‌ 1) ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದ್ದು, ಇದರೊಂದಿಗೆ ಸಾರ್ವತ್ರಿಕ ಚುನಾವಣೆ ಕೊನೆಗೊಳ್ಳಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದ್ದು, ಎಲ್ಲರ ಗಮನವೀಗ ಫಲಿತಾಂಶದ ಕಡೆ ವಾಲಿದೆ. ಶನಿವಾರ 7 ರಾಜ್ಯಗಳು ಹಾಗೂ 1 ಕೇಂದ್ರಾಡಳಿತ ಪ್ರದೇಶ ಸೇರಿ 57 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಇದಕ್ಕಾಗಿ ಚುನಾವಣೆ ಆಯೋಗವು (Election Commission) ಸಕಲ ಸಿದ್ಧತೆ ಮಾಡಿಕೊಂಡಿದೆ.

ಉತ್ತರ ಪ್ರದೇಶದ 13 ಲೋಕಸಭೆ ಕ್ಷೇತ್ರಗಳು, ಪಂಜಾಬ್‌ 13, ಪಶ್ಚಿಮ ಬಂಗಾಳ 9, ಬಿಹಾರ 8, ಒಡಿಶಾ 6, ಹಿಮಾಚಲ ಪ್ರದೇಶ 4, ಜಾರ್ಖಂಡ್‌ 3 ಹಾಗೂ ಚಂಡೀಗಢದ 1 ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ನಡೆಯಲಿದೆ. ಸಂಜೆ 6 ಗಂಟೆವರೆಗೆ ಜನ ಹಕ್ಕು ಚಲಾಯಿಸಬಹುದಾಗಿದ್ದು, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಗಾಗಿ ಆಯೋಗವು ಬಿಗಿ ಬಂದೋಬಸ್ತ್‌ ಸೇರಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರ ಭವಿಷ್ಯವು ಶನಿವಾರ ಮತಯಂತ್ರಗಳಲ್ಲಿ ಭದ್ರವಾಗಲಿದೆ.

ಕಣದಲ್ಲಿರುವ ಪ್ರಮುಖರು

ನರೇಂದ್ರ ಮೋದಿ, ವಾರಾಣಸಿ

ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. 2014ರಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡುತ್ತಿದ್ದು, ಕ್ಕಾಂಗ್ರೆಸ್ ಪಕ್ಷವು ಅಜಯ್ ರೈ ಅವರನ್ನು ಮೂರನೇ ಬಾರಿಗೆ ಕಣಕ್ಕಿಳಿಸಿದೆ.

ಕಂಗನಾ ರಣಾವತ್‌, ಮಂಡಿ

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ನಟಿ ಕಂಗನಾ ರಣಾವತ್ ಅವರನ್ನು ಕಣಕ್ಕಿಳಿಸಿದೆ. ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಕಾಂಗ್ರೆಸ್ ಭದ್ರಕೋಟೆಯಾದ ಮಂಡಿಯಲ್ಲಿ ಕಂಗನಾ ಸ್ಪರ್ಧಿಸುತ್ತಿದ್ದಾರೆ.

ಚರಣ್‌ಜೀತ್‌ ಸಿಂಗ್‌ ಚನ್ನಿ, ಜಲಂಧರ್

ಪಂಜಾಬ್‌ನ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಮಾಜಿ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಕಣದಲ್ಲಿದ್ದಾರೆ. ಚನ್ನಿ, ಜಲಂಧರ್ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಪವನ್ ಕುಮಾರ್ ಟಿನು ವಿರುದ್ಧ ಸ್ಪರ್ಧೆ ಮಾಡುತ್ತಿದ್ದಾರೆ

ಅನುರಾಗ್ ಠಾಕೂರ್, ಹಮೀರ್‌ಪುರ‌

ಹಿಮಾಚಲ ಪ್ರದೇಶದ ಹಮೀರ್‌ಪುರ ಕ್ಷೇತ್ರದಿಂದ ಬಿಜೆಪಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪರ್ಧೆ ಮಾಡುತ್ತಿದ್ದಾರೆ. 2008ರ ಉಪಚುನಾವಣೆಯಲ್ಲಿ ಅನುರಾಗ್ ಮೊದಲ ಬಾರಿಗೆ ಗೆದಿದ್ದು, 5ನೇ ಬಾರಿ ಈ ಕ್ಷೇತ್ರದಿಂದ ಅನುರಾಗ್ ಠಾಕೂರ್ ಸ್ಪರ್ಧೆ ಮಾಡುತ್ತಿದ್ದಾರೆ.

ಅಭಿಷೇಕ್ ಬ್ಯಾನರ್ಜಿ, ಡೈಮಂಡ್‌ ಹಾರ್ಬರ್

ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಕಣಕ್ಕಿಳಿದಿದ್ದಾರೆ. ಡೈಮಂಡ್ ಹಾರ್ಬರ್ ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆ. ಈ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಅಭಿಷೇಕ್ ಬ್ಯಾನರ್ಜಿ, ಸಿಪಿಐ(ಎಂ)ನ ಪ್ರತೀಕುರ್ ರಹಮಾನ್ ಮತ್ತು ಬಿಜೆಪಿಯ ಅಭಿಜಿತ್ ದಾಸ್ ಕಣದಲ್ಲಿದ್ದಾರೆ.

ಮೀಸಾ ಭಾರ್ತಿ, ಪಾಟಲಿಪುತ್ರ

ಬಿಹಾರದ ಪಾಟಲಿಪುತ್ರ ಲೋಕಸಭಾ ಕ್ಷೇತ್ರದಿಂದ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರಿ ಮೀಸಾ ಭಾರ್ತಿ ಆರ್‌ಜೆಡಿ ಪಕ್ಷದಿಂದ ಕಣದಲ್ಲಿದ್ದಾರೆ. 2014ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ರಾಮ್ ಕೃಪಾಲ್ ಯಾದವ್ ಇವರ ವಿರುದ್ಧ ಸ್ಪರ್ಧಿಸಿದ್ದಾರೆ.

ಇದನ್ನೂ ಓದಿ: PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

Exit mobile version