Site icon Vistara News

ಸೋತರೂ ರಾಹುಲ್‌ ಅಮೇಥಿಯಿಂದಲೇ ಸ್ಪರ್ಧೆ, ತಾಯಿ ಕ್ಷೇತ್ರದಲ್ಲಿ ಪ್ರಿಯಾಂಕಾ ಕಣಕ್ಕೆ?‌

Rahul Gandhi And Priyanka Vadra

Lok Sabha election 2024: Rahul Gandhi to contest from Amethi, Priyanka to debut from Raebareli

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಕಾವು ದಿನೇದಿನೆ ಜಾಸ್ತಿಯಾಗುತ್ತಿದೆ. ಬಿಜೆಪಿಯು ಈಗಾಗಲೇ 195 ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಿಸುವ ಮೂಲಕ ರಣಕಹಳೆ ಊದಿದೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಕೂಡ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿದೆ. ಇನ್ನು. ಉತ್ತರ ಪ್ರದೇಶದ ಅಮೇಥಿ ಲೋಕಸಭೆ ಕ್ಷೇತ್ರದಿಂದ ರಾಹುಲ್‌ ಗಾಂಧಿ (Rahul Gandhi) ಹಾಗೂ ರಾಯ್‌ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ (Priyanka Vadra) ಸ್ಪರ್ಧಿಸುವುದು ಖಚಿತ ಎಂದು ತಿಳಿದುಬಂದಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರು ಅಮೇಥಿ ಹಾಗೂ ವಯನಾಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಆದರೆ, ಅಮೇಥಿಯಲ್ಲಿ ಅವರು ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲನುಭವಿಸಿದ್ದರು. ಆದರೂ, ಈ ಬಾರಿ ಮತ್ತೆ ರಾಹುಲ್‌ ಗಾಂಧಿ ಅವರು ಅಮೇಥಿಯಿಂದಲೇ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ವಯನಾಡು ಕ್ಷೇತ್ರದಲ್ಲೂ ರಾಹುಲ್‌ ಗಾಂಧಿ ಸ್ಪರ್ಧೆ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

ರಾಯ್‌ಬರೇಲಿ ಸಂಸದೆಯಾಗಿದ್ದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಸ್ಪರ್ಧಿಸಿ, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ, ಸೋನಿಯಾ ಗಾಂಧಿ ಅವರು 2004ರಿಂದಲೂ ಸ್ಪರ್ಧಿಸುತ್ತಿದ್ದ ರಾಯ್‌ಬರೇಲಿ ಲೋಕಸಭೆ ಕ್ಷೇತ್ರವು ತೆರವಾಗಿದೆ. ಇದೇ ಕ್ಷೇತ್ರದಲ್ಲಿ ಈಗ ಪ್ರಿಯಾಂಕಾ ವಾದ್ರಾ ಅವರು ಮೊದಲ ಬಾರಿಗೆ ಲೋಕಸಭೆ ಚುನಾವಣೆ ಕಣಕ್ಕೆ ಇಳಿಯಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಮಗಳಿಗೆ ರಾಯ್‌ಬರೇಲಿ ಕ್ಷೇತ್ರವನ್ನು ಬಿಟ್ಟುಕೊಡಲೆಂದೇ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಪ್ರವೇಶಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: LoK Sabha Election 2024: ಕರ್ನಾಟಕ ಬಿಜೆಪಿ ಟಿಕೆಟ್‌ ಇಂದೇ ಫೈನಲ್; ಈ 17 ಮಂದಿಗೆ ಪಕ್ಕಾ!

ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಿಂದ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುಜರಾತ್‌ನ ಗಾಂಧಿನಗರ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಲಖನೌ, ಸ್ಮೃತಿ ಇರಾನಿ ಅವರು ಅಮೇಥಿಯಿಂದ, ಕಿರಣ್‌ ರಿಜಿಜು ಅರುಣಾಚಲ ಪಶ್ಚಿಮ, ಪೋರ್‌ಬಂದರ್‌ನಿಂದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ, ಕೇರಳದ ಪಥಣಂತಿಟ್ಟದಿಂದ ಎ.ಕೆ. ಆ್ಯಂಟನಿ ಪುತ್ರ ಅನಿಲ್‌ ಆ್ಯಂಟನಿ, ಸಚಿವ ರಾಜೀವ್‌ ಚಂದ್ರಶೇಖರ್‌ ಅವರಿಗೆ ತಿರುವನಂತಪುರಂನಿಂದ ಟಿಕೆಟ್‌ ನೀಡಲಾಗಿದೆ. ಮಧ್ಯಪ್ರದೇಶದ ವಿದಿಶಾದಿಂದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕಣಕ್ಕಿಳಿದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version