ನವದೆಹಲಿ: ಚುನಾವಣೆ(Lok Sabha Election 2024) ಬಂದಾಗ ಅಭ್ಯರ್ಥಿಗಳು ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುವುದು ಹೊಸದೇನಲ್ಲ. ಒಂದು ಕ್ಷೇತ್ರದಲ್ಲಿ ಸೋಲಿನ ಭೀತಿ ಇದ್ದಾಗ, ಅಥವಾ ತಮ್ಮ ಶಕ್ತಿ ಪ್ರದರ್ಶನವನ್ನು ಮಾಡಲು ಅಭ್ಯರ್ಥಿಗಳು ಎರಡನೇ ಕ್ಷೇತ್ರದಲ್ಲಿ ಸ್ಪರ್ಧಿಸುವುವುದು ಸಹಜ. ಈ ಬಾರಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ(Rahul Gandhi) ವಯನಾಡು(Wayanad) ಮತ್ತು ರಾಯ್ ಬರೇಲಿ(Rae Bareli) ಕ್ಷೇತ್ರಗಳಿಂದ ಸ್ಪರ್ಧಿಸಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹೀಗಿರುವಾಗ ಇದೇ ರೀತಿಯಾಗಿ ಒಂದು ವೇಳೆ ಅಭ್ಯರ್ಥಿ ಎರಡೂ ಕ್ಷೇತ್ರಗಳನ್ನು ಗೆದ್ದರೆ ಏನಾಗುತ್ತದೆ? ಅಭ್ಯರ್ಥಿಗಳು ಎರಡೂ ಕ್ಷೇತ್ರದಲ್ಲಿ ಸಂಸದರಾಗಿ ಮುಂದುವರೆಯಬಹುದೆ? ಈ ಬಗ್ಗೆ ಕಾನೂನು ಏನು ಹೇಳುತ್ತದೆ? ಈ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ.
ಕಾನೂನು ಏನು ಹೇಳುತ್ತದೆ?
ಪ್ರಜಾಪ್ರತಿನಿಧಿ ಕಾಯ್ದೆ, 1951 ರ ಪ್ರಕಾರ, ಒಬ್ಬ ವ್ಯಕ್ತಿಗೆ ಎರಡು ಲೋಕಸಭಾ ಕ್ಷೇತ್ರಗಳಿಂದ ಏಕಕಾಲದಲ್ಲಿ ಚುನಾವಣೆಗೆ ಸ್ಪರ್ಧಿಸಲು ಕಾನೂನುಬದ್ಧವಾಗಿ ಅನುಮತಿ ಇದೆ. ಅಭ್ಯರ್ಥಿಯು ಎರಡು ಸ್ಥಾನಗಳಿಂದ ಸ್ಪರ್ಧಿಸಲು ಅವಕಾಶ ನೀಡುವ ಕಾಯಿದೆಯ 33 (7) ಉಪವಿಭಾಗವನ್ನು 1996 ರಲ್ಲಿ ತಿದ್ದುಪಡಿಯ ಮೂಲಕ ಪರಿಚಯಿಸಲಾಯಿತು. ಇದಕ್ಕೂ ಮೊದಲು, ಅಭ್ಯರ್ಥಿಯು ಸ್ಪರ್ಧಿಸಬಹುದಾದ ಕ್ಷೇತ್ರಗಳ ಸಂಖ್ಯೆಗೆ ಯಾವುದೇ ನಿರ್ಬಂಧವಿರಲಿಲ್ಲ. ಆದರೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 70ರ ಪ್ರಕಾರ ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಸ್ಥಾನಗಳಿಂದ ಗೆದ್ದಿದ್ದರೂ ಒಂದು ಬಾರಿಗೆ ಒಂದು ಸ್ಥಾನವನ್ನು ಮಾತ್ರ ಹೊಂದಬಹುದು.
ಎರಡೂ ಸ್ಥಾನಗಳಲ್ಲಿ ಅಭ್ಯರ್ಥಿ ಗೆದ್ದರೆ?
ಎರಡರಿಂದಲೂ ಚುನಾಯಿತರಾದ ವ್ಯಕ್ತಿಯು ಒಂದು ಬಾರಿಗೆ ಕೇವಲ ಒಂದು ಸ್ಥಾನವನ್ನು ಮಾತ್ರ ಹೊಂದಬಹುದು. ಅಭ್ಯರ್ಥಿಯು ಎರಡು ಸ್ಥಾನಗಳಿಂದ ಗೆದ್ದರೆ, ಅವನು ಅಥವಾ ಅವಳು ತೆರವಾದ ಸ್ಥಾನದಿಂದ ಉಪಚುನಾವಣೆ ಮಾಡಬೇಕಾಗುತ್ತದೆ. ಚುನಾವಣೆ ಮುಗಿದ ನಂತರ ಅನೇಕ ಉಪಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ ಮತ್ತೆ ಅಷ್ಟೇ ಖರ್ಚಾಗುತ್ತದೆ. ಚುನಾವಣಾ ಆಯೋಗವು 2019ರ ಲೋಕಸಭೆ ಚುನಾವಣೆಯಲ್ಲಿ ಅಂದಾಜು 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿತ್ತು. ಅಂದರೆ, ಪ್ರತಿ ಸೀಟಿಗೆ ಸರಾಸರಿ 9.20 ಕೋಟಿ ರೂ. ವೆಚ್ಚ ತಗುಲಿತ್ತು. ಈ ಬಾರಿ ಚುನಾವಣಾ ವೆಚ್ಚ ಇನ್ನೂ ಹೆಚ್ಚಳ ಕಂಡಿರುವ ಸಾಧ್ಯತೆಯಿದೆ. ಸುಮಾರು 10-12 ಕೋಟಿ ರೂ.ಗಳಷ್ಟು ವೆಚ್ಚವಾಗುವ ಸಾಧ್ಯತೆಯಿದೆ.
ಹೀಗಾಗಿ ಹಲವು ವರ್ಷಗಳಿಂದ ಚುನಾವಣಾ ಆಯೋಗವು (EC) ಅಭ್ಯರ್ಥಿಗಳು ಒಂದು ಸ್ಥಾನದಿಂದ ಸ್ಪರ್ಧಿಸುವುದನ್ನು ನಿರ್ಬಂಧಿಸಬೇಕು ಎಂಬ ವಾದಗಳನ್ನು ಮಾಡುತ್ತಲೇ ಬಂದಿದೆ. ಅಭ್ಯರ್ಥಿಯು ಎರಡೂ ಸ್ಥಾನಗಳನ್ನು ಗೆಲ್ಲಬೇಕಾದರೆ ಉಪಚುನಾವಣೆ ನಡೆಸುವಲ್ಲಿ ಸಾರ್ವಜನಿಕ ಹಣ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಆಗುತ್ತದೆ ಎಂಬ ಅರೋಪವೂ ಇದೆ.
ರಾಹುಲ್ ಗಾಂಧಿ ಆಯ್ಕೆ ಯಾವುದು?
ರಾಹುಲ್ ಗಾಂಧಿ ಈ ಬಾರಿ ಕೇರಳದ ವಯನಾಡು ಕ್ಷೇತ್ರದಲ್ಲಿ ಬರೋಬ್ಬರಿ 3,64,422 ಮತಗಳಿಂದ ಗೆದ್ದರೆ, ತಮ್ಮ ಮತ್ತೊಂದು ಕ್ಷೇತ್ರವಾದ ರಾಯ್ ಬರೇಲಿಯಲ್ಲಿ 3,89,341 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಬಿಜೆಪಿಯ ದಿನೇಶ್ ಪ್ರತಾಪ್ ಅವರನ್ನು ಸೋಲಿಸಿದ್ದಾರೆ. ಹೀಗೆ ಎರಡೂ ಕ್ಷೇತ್ರಗಳಲ್ಲಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಎರಡರಲ್ಲಿ ಯಾವ ಕ್ಷೇತ್ರವನ್ನು ರಾಹುಲ್ ಗಾಂಧಿ ಉಳಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ವಯನಾಡು ಅವರಿಗೆ ರಾಜಕೀಯ ಮರುಜೀವ ನೀಡಿದರೆ, ರಾಯ್‌ಬರೇಲಿ ಗಾಂಧಿ ಕುಟುಂಬದ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವ ಕ್ಷೇತ್ರ. ಹೀಗಿರುವಾಗ ಎರಡೂ ಕ್ಷೇತ್ರಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ರಾಹುಲ್‌ಗೆ ಬಹಳ ಸವಾಲಿನ ಕಾರ್ಯವಾಗಿದೆ.