Site icon Vistara News

Lok Sabha Election: 3ನೇ ಹಂತದಲ್ಲಿ ಶೇ.60ರಷ್ಟು ಮತದಾನ, ಕಳೆದ ಬಾರಿಗಿಂತಲೂ ಕಡಿಮೆ

Lok Sabha Election

Lok Sabha Election 2024: Phase 5 polls see 57% turnout till 5 pm

ನವದೆಹಲಿ: ಕರ್ನಾಟಕ ಸೇರಿ ದೇಶದ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೂರನೇ ಹಂತದ ಮತದಾನವು (Voting) ಬಹುತೇಕ ಶಾಂತಿಯುತವಾಗಿ ನಡೆದಿದೆ. ಕರ್ನಾಟಕದ 14 ಸೇರಿ ಒಟ್ಟು 93 ಲೋಕಸಭೆ ಕ್ಷೇತ್ರಗಳಲ್ಲಿ ಮಂಗಳವಾರ (ಮೇ 7) ಸಂಜೆ 5 ಗಂಟೆ ಸುಮಾರಿಗೆ ಶೇ.60.19ರಷ್ಟು ಮತದಾನ ದಾಖಲಾಗಿದೆ. 2019ರ ಲೋಕಸಭೆ ಚುನಾವಣೆಯ 3ನೇ ಹಂತದ ಮತದಾನದ ವೇಳೆ ಶೇ.68.40ರಷ್ಟು ಮತದಾನ ನಡೆದಿತ್ತು. ಮಂಗಳವಾರ ಇನ್ನೂ ಒಂದು ಗಂಟೆಯ ಮತದಾನದ ಅಂಕಿ-ಅಂಶ ಲಭ್ಯವಾಗಬೇಕಿದೆ. ಆದರೂ, ಕಳೆದ ಬಾರಿಗಿಂತ ಈ ಬಾರಿ ಮತದಾನ ಪ್ರಮಾಣ ಕುಸಿದಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ 14, ಗುಜರಾತ್‌ನ 26, ಮಹಾರಾಷ್ಟ್ರ 11, ಉತ್ತರ ಪ್ರದೇಶ 10, ಮಧ್ಯಪ್ರದೇಶ 8 ಸೇರಿ ಒಟ್ಟು 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಸೇರಿ ಹಲವು ಗಣ್ಯರು ಮತದಾನ ಮಾಡಿದರು. ಪಶ್ಚಿಮ ಬಂಗಾಳ ಸೇರಿ ಕೆಲವಡೆ ಮಾತ್ರ ಸಣ್ಣಪುಟ್ಟ ಹಿಂಸಾಚಾರಗಳು ನಡೆದಿವೆ.

ಪ್ರಮುಖ ರಾಜ್ಯಗಳಲ್ಲಿ ಮತದಾನ ಪ್ರಮಾಣ

ಕರ್ನಾಟಕ66.05%
ಪಶ್ಚಿಮ ಬಂಗಾಳ73.93%
ಅಸ್ಸಾಂ75.01%
ಮಹಾರಾಷ್ಟ್ರ53.4%
ಗುಜರಾತ್‌55.22
ಬಿಹಾರ56%
ಉತ್ತರ ಪ್ರದೇಶ55.13
ಮಧ್ಯಪ್ರದೇಶ 62.28

ದೇಶದ ಹಲವೆಡೆ ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಇದು ಕೂಡ 2019ರ ಲೋಕಸಭೆ ಚುನಾವಣೆಗಿಂತ ಕಡಿಮೆ ಪ್ರಮಾಣದ ಮತದಾನವಾಗಿದೆ ಎಂದು ತಿಳಿದುಬಂದಿದೆ. ಏಪ್ರಿಲ್‌ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಿದ್ದು, ಇದುವರೆಗೆ ಮೂರು ಹಂತಗಳ ಮತದಾನ ಮುಕ್ತಾಯವಾಗಿದೆ. ಜೂನ್‌ 1ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮತದಾನದ ವೇಳೆ ಗಲಾಟೆ ನಡೆಯಿತು. ಮುರ್ಷಿದಾಬಾದ್‌ನಲ್ಲಿ ಧನಂಜಯ್‌ ಘೋಷ್‌ ಅವರು ಮತದಾನ ಮಾಡಲು ಹೋದಾಗ ಅವರನ್ನು ಬೂತ್‌ ಏಜೆಂಟ್‌ ಒಬ್ಬರು ತಡೆದಿದ್ದಾರೆ. ಇದೇ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದು ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಗೆ ಕಾರಣವಾಗಿದೆ. “ನಾನೊಬ್ಬ‌ ಬಿಜೆಪಿ ಅಭ್ಯರ್ಥಿ. ನನಗೇ ಚುನಾವಣೆ ಏಜೆಂಟ್‌ ಒಬ್ಬ ಬಂದು ಬೆದರಿಕೆ ಹಾಕುತ್ತಾನೆ ಎಂದರೆ, ಸಾಮಾನ್ಯ ಜನರ ಗತಿ ಏನು? ಆತನ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗುವುದು” ಎಂದು ಧನಂಜಯ್‌ ಘೋಷ್‌ ತಿಳಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಮತದಾನಕ್ಕೆ ಬಂದು ಇವಿಎಂಗೆ ಬೆಂಕಿ ಹಾಕಿದ ಯುವಕ; ಸುರಪುರದಲ್ಲಿ ಕಲ್ಲು ತೂರಾಟ

Exit mobile version