ನವದೆಹಲಿ: ಕಾಂಗ್ರೆಸ್ ನಾಯಕ ತ್ಸೆರಿಂಗ್ ನಾಮ್‌ಗ್ಯಾಲ್ (Tsering Namgyal) ಅವರು ಲಡಾಕ್ (Ladakh) ಲೋಕಸಭೆ ಕ್ಷೇತ್ರದಲ್ಲಿ ಗುರುವಾರ (ಮೇ 2) ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಚುನಾವಣೆ ಆಯೋಗವೂ ಅನುಮತಿ ನೀಡಿದೆ. ತ್ಸೆರಿಂಗ್ ನಾಮ್‌ಗ್ಯಾಲ್ ಅವರು ನಾಮಪತ್ರ ಸಲ್ಲಿಸುತ್ತಲೇ ತುಸು ಗೊಂದಲ ಉಂಟಾಗಿತ್ತು. ಇದಾದ ಬಳಿಕ ಚುನಾವಣೆ ಆಯೋಗವು ತ್ಸೆರಿಂಗ್ ನಾಮ್‌ಗ್ಯಾಲ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಬಹುದು ಎಂದು ತಿಳಿಸಿದೆ. ಲಡಾಕ್‌ನಲ್ಲಿ ಮೇ 20ರಂದು ಮತದಾನ ನಡೆಯಲಿದೆ.
ಲಡಾಕ್‌ನಲ್ಲಿ ಹೈಡ್ರಾಮಾ
ಲೋಕಸಭೆ ಚುನಾವಣೆಯ ಎರಡು ಹಂತದ ಮತದಾನ ಮುಗಿದರೂ, ಲಡಾಕ್‌ನಲ್ಲಿ ರಾಜಕೀಯ ಹೈಡ್ರಾಮಾ ಮಾತ್ರ ಮುಂದುವರಿದಿದೆ. ಲಡಾಕ್‌ನಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಹಾಜಿ ಹನಿಫಾ ಅವರು ಹೊರಹೊಮ್ಮಿದ್ದರು. ಆದರೆ, ಗುರುವಾರ (ಮೇ 2) ಬೆಳಗ್ಗೆ ತ್ಸೆರಿಂಗ್ ನಾಮ್‌ಗ್ಯಾಲ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದು ಹೈಡ್ರಾಮಾಗೆ ಕಾರಣವಾಗಿತ್ತು. ಗೊಂದಲದ ಬಳಿಕ ಕಾಂಗ್ರೆಸ್ ನಾಯಕ ರಿಗ್ಜಿನ್ ಜೋರಾ ಅವರು ತ್ಸೆರಿಂಗ್ ನಾಮ್‌ಗ್ಯಾಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಎಂಬುದಾಗಿ ಘೋಷಿಸಿದರು.
Congress fields Tsering Namgyal as its candidate from Ladakh.#LokSabhaElections2024 pic.twitter.com/RqsSGhagga
— ANI (@ANI) May 2, 2024
ಬಿಜೆಪಿಯಿಂದ ತಾಶಿ ಗ್ಯಾಲ್ಸನ್ ಅವರು ಬುಧವಾರ (ಮೇ 1) ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಬಿಜೆಪಿ ಸಂಸದ ತ್ಸೆರಿಂಗ್ ನಾಮ್‌ಗ್ಯಾಲ್ ಅವರು ಲಡಾಕ್‌ನಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿದ್ದು, ಇತ್ತೀಚೆಗೆ ಪಕ್ಷದಲ್ಲಿಯೇ ಅವರನ್ನು ಮರೆಗೆ ಸರಿಸಲಾಗುತ್ತಿತ್ತು. ಅಲ್ಲದೆ, ಅವರಿಗೆ ಟಿಕೆಟ್ ಕೂಡ ನಿರಾಕರಿಸಿದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಮೇ 3 ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಕಾರಣ ಬಿಜೆಪಿ ಸಂಸದ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
ಇದಕ್ಕೂ ಮೊದಲು ಬಿಜೆಪಿ ಸಂಸದ ತ್ಸೆರಿಂಗ್ ನಾಮ್‌ಗ್ಯಾಲ್ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ ಎಂದು ಹೇಳಲಾಗುತ್ತಿತ್ತು. ಕೆಲ ಮಾಧ್ಯಮಗಳಲ್ಲಿ ಕಾಂಗ್ರೆಸ್ ಮಾಸ್ಟರ್ ಸ್ಟ್ರೋಕ್ ಎಂದೇ ವರದಿಯಾಗಿತ್ತು. ಆದರೆ, ಕೆಲ ಹೊತ್ತಿನ ಬಳಿಕ ಕಣಕ್ಕಿಳಿದವರು ಕಾಂಗ್ರೆಸ್ ನಾಯಕನೇ ಹೊರತು, ಬಿಜೆಪಿ ಸಂಸದ ಅಲ್ಲ ಎಂಬ ವಿಷಯ ಗೊತ್ತಾಯಿತು. ಇಬ್ಬರ ಹೆಸರೂ ಒಂದೇ ಇರುವುದರಿಂದ ಗೊಂದಲ ಉಂಟಾಗಿತ್ತು.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್‌ಗಿಲ್ಲ ಟಿಕೆಟ್; ಮಗನಿಗೆ ಮಣೆ, ರಾಯ್‌ಬರೇಲಿಗೂ ಅಭ್ಯರ್ಥಿ ಘೋಷಿಸಿದ ಬಿಜೆಪಿ