Site icon Vistara News

Narendra Modi: ಬಿಜೆಪಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಚುನಾವಣೆಗೆ ಮೋದಿ ಸಂದೇಶ; ಏನದು?

Narendra Modi

Lok Sabha Election: Narendra Modi's message after party announces 1st list

ನವದೆಹಲಿ: ಬಿಜೆಪಿಯು 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು (BJP Candidates List) ಬಿಡುಗಡೆ ಮಾಡುವ ಮೂಲಕ ಲೋಕಸಭೆ ಚುನಾವಣೆಗೆ (Lok Sabha Election 2024) ಅಧಿಕೃತವಾಗಿ ರಣಕಹಳೆ ಊದಿದೆ. ಜಾತಿ, ಪ್ರಭಾವ, ಯುವಕರು, ಮಹಿಳೆಯರು ಸೇರಿ ಹಲವು ಲೆಕ್ಕಾಚಾರಗಳ ಬಳಿಕ ಬಿಜೆಪಿಯು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನರಿಗೆ, ಪಕ್ಷದ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ. ಹಾಗೆಯೇ, ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಬಿಜೆಪಿಯು ಕೆಲ ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ. ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಎಲ್ಲರಿಗೂ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ, ಬಡವರಿಗೆ ಸಕಲ ಸೌಲಭ್ಯಗಳನ್ನು ನೀಡುವುದು ಸೇರಿ ಹಲವು ದಿಸೆಯಲ್ಲಿ ನೀವು ಈಗಿನಿಂದಲೇ ಸಜ್ಜಾಗಬೇಕು. ದೇಶದ 140 ಕೋಟಿ ಜನರ ಆಶೀರ್ವಾದವು ನಿಮ್ಮ ಮೇಲೆ ಇರುತ್ತದೆ ಎಂಬ ವಿಶ್ವಾಸವಿದೆ. ವಿಕಸಿತ ಭಾರತ ನಿರ್ಮಾಣಕ್ಕಾಗಿ ನೀವು ಈಗಿನಿಂದಲೇ ಕೆಲಸ ಆರಂಭಿಸಿ” ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಹಾಗೆಯೇ, ವಾರಾಣಸಿಯಿಂದಲೇ ಮೂರನೇ ಬಾರಿ ಸ್ಪರ್ಧಿಸುತ್ತಿರುವ ಕುರಿತು ಕೂಡ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕೇಂದ್ರೀಯ ಚುನಾವಣೆ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ಪ್ರಕಟಿಸಲಾದ 195 ಅಭ್ಯರ್ಥಿಗಳ ಪಟ್ಟಿಯಲ್ಲಿ ಒಬಿಸಿಯ 57 ಅಭ್ಯರ್ಥಿಗಳಿಗೆ, ಎಸ್‌ಸಿ 27, ಎಸ್‌ಟಿಯ 18 ಅಭ್ಯರ್ಥಿಗಳಿಗೆ ಬಿಜೆಪಿಯು ಟಿಕೆಟ್‌ ನೀಡಿದೆ. ಇನ್ನು 195 ಅಭ್ಯರ್ಥಿಗಳಲ್ಲಿ 28 ಮಹಿಳೆಯರು ಹಾಗೂ 47 ಯುವಕರಿಗೆ ಬಿಜೆಪಿಯು ಮಣೆ ಹಾಕಿದೆ. 34 ಕೇಂದ್ರ ಸಚಿವರಿಗೂ ಪಕ್ಷದ ಹೈಕಮಾಂಡ್‌ ಟಿಕೆಟ್‌ ನೀಡಿದೆ. ರಾಜ್ಯಸಭೆಯಿಂದ ಆಯ್ಕೆಯಾಗಿ, ಮಂತ್ರಿಯಾಗಿದ್ದ ರಾಜೀವ್‌ ಚಂದ್ರಶೇಖರ್‌ ಅವರಿಗೆ ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ಇದನ್ನೂ ಓದಿ: BJP Candidates List: ಸುಷ್ಮಾ ಸ್ವರಾಜ್‌ ಪುತ್ರಿಗೆ ಟಿಕೆಟ್; ಯಾರು ಇನ್?‌ ಯಾರು ಔಟ್?‌

16 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದಾರೆ. ಮೊದಲ ಪಟ್ಟಿಯಲ್ಲಿ ಉತ್ತರ ಪ್ರದೇಶದ 51 ಕ್ಷೇತ್ರಗಳಿಗೆ, ಪಶ್ಚಿಮ ಬಂಗಾಳ 20, ಮಧ್ಯಪ್ರದೇಶ 24, ಗುಜರಾತ್‌ 15, ರಾಜಸ್ಥಾನ 15, ಕೇರಳ 12, ತೆಲಂಗಾಣ 9, ಅಸ್ಸಾಂ 11, ಜಾರ್ಖಂಡ್‌ 11, ಛತ್ತೀಸ್‌ಗಢ 11, ದೆಹಲಿ 5, ಜಮ್ಮು-ಕಾಶ್ಮೀರ 2, ಉತ್ತರಾಖಂಡ 3, ಅರುಣಾಚಲ ಪ್ರದೇಶ 2, ಗೋವಾ 1, ತ್ರಿಪುರ 1, ಅಂಡಮಾನ್‌ ನಿಕೋಬಾರ್‌ 1 ಹಾಗೂ ದಿಯು ಮತ್ತು ದಮನ್‌ನ 1 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version