ನವದೆಹಲಿ: ಕಳೆದ ಕೆಲ ತಿಂಗಳಿಂದ ದೇಶಾದ್ಯಂತ ತೀವ್ರ ಚರ್ಚೆ, ಕುತೂಹಲ, ರಾಜಕಾರಣಿಗಳ ಅಬ್ಬರದ ಪ್ರಚಾರ, ವಾದ, ವಾಗ್ವಾದ, ವಿವಾದಗಳಿಗೆ ಕಾರಣವಾಗಿದ್ದ ಲೋಕಸಭೆ ಚುನಾವಣೆಯು (Lok Sabha Election 2024) ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಮಂಗಳವಾರ ಲೋಕಸಭೆ ಚುನಾವಣೆ ಫಲಿತಾಂಶ (Lok Sabha Election Result 2024) ಪ್ರಕಟವಾಗಲಿದ್ದು, ದೇಶದ ಭವಿಷ್ಯಕ್ಕೆ ಇದು ದಿಕ್ಸೂಚಿ ಎನಿಸಲಿದೆ. ಸಹಜವಾಗಿಯೇ ರಾಜಕಾರಣಿಗಳು, ಅಭ್ಯರ್ಥಿಗಳ ಜತೆಗೆ ದೇಶದ ನಾಗರಿಕರ ಕುತೂಹಲವೂ ಜಾಸ್ತಿಯಾಗಿದೆ.
ಮಂಗಳವಾರ ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಆರಂಭವಾಗಿದೆ. ಮತಎಣಿಕೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಒಟ್ಟು 543 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 272 ಮ್ಯಾಜಿಕ್ ನಂಬರ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವೇ ಗೆಲುವು ಸಾಧಿಸಲಿದೆ ಎಂಬುದಾಗಿ ಬಹುತೇಕ ಮತಗಟ್ಟೆ ಸಮೀಕ್ಷೆಗಳು ತಿಳಿಸಿವೆ.
ಬಿಜೆಪಿಗೆ ಒಲಿಯುವುದೇ ಗೆಲುವು?
ನರೇಂದ್ರ ಮೋದಿ ಅವರ ಅಲೆ, ಕಳೆದ 10 ವರ್ಷಗಳ ಅಭಿವೃದ್ಧಿ ಕೆಲಸಗಳು, ರಾಮಮಂದಿರ, 370ನೇ ವಿಧಿ ರದ್ದು ಸೇರಿ ಹಲವು ಪ್ರಮುಖ ತೀರ್ಮಾನಗಳನ್ನು ಮುಂದಿಟ್ಟುಕೊಂಡು ಬಿಜೆಪಿಯು ಚುನಾವಣೆ ಎದುರಿಸಿದೆ. ಅದರಲ್ಲೂ, ಮೋದಿ ಅವರು 200ಕ್ಕೂ ಅಧಿಕ ಸಮಾವೇಶಗಳ ಮೂಲಕ ದೇಶದ ಮೂಲೆ ಮೂಲೆಯಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ನಾಯಕರು, ಕಾರ್ಯಕರ್ತರು ಕೂಡ ಇದಕ್ಕೆ ಶ್ರಮಿಸಿದ್ದಾರೆ. ಹಾಗಾಗಿ, ಬಿಜೆಪಿಯು ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯು ಕನಸು ಕಾಣುತ್ತಿದೆ.
ಕುತೂಹಲ ಘಟ್ಟದಲ್ಲಿ ಇಂಡಿಯಾ ಒಕ್ಕೂಟ
ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್ ಮುಂದಾಳತ್ವದಲ್ಲಿ ಇಂಡಿಯಾ ಒಕ್ಕೂಟವನ್ನು ರಚಿಸಿ, ಪ್ರತಿಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸಿವೆ. ಮತಗಟ್ಟೆ ಸಮೀಕ್ಷೆಗಳ ವರದಿಗಳ ಆಚೆಯೂ ಅಚ್ಚರಿಯ ಫಲಿತಾಂಶವನ್ನು ಇಂಡಿಯಾ ಒಕ್ಕೂಟದ ಪಕ್ಷಗಳು ನಿರೀಕ್ಷಿಸುತ್ತಿವೆ. ಹಾಗೊಂದು ವೇಳೆ, ಮತಗಟ್ಟೆ ಸಮೀಕ್ಷೆಗಳು ಉಲ್ಟಾ ಹೊಡೆದರೆ, ಇಂಡಿಯಾ ಮೈತ್ರಿಕೂಟವು ಮುನ್ನಡೆ ಸಾಧಿಸಲಿದೆ.
ಸಮೀಕ್ಷೆಗಳು ಹೇಳಿರುವುದೇನು?
ಎಲ್ಲ ಸಮೀಕ್ಷಾ ವರದಿಗಳನ್ನು ವಿಶ್ಲೇಷಿಸಿದಾಗ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಒಟ್ಟು 543 ಕ್ಷೇತ್ರಗಳ ಪೈಕಿ 355-380 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 2019ರ ಲೋಕಸಭೆ ಚುನಾವಣೆ ಫಲಿತಾಂಶವೇ ಮರುಕಳಿಸಲಿದೆ ಎಂದು ಹೇಳಲಾಗುತ್ತಿದೆ. 2019ರಲ್ಲಿ ಎನ್‌ಡಿಎ ಮೈತ್ರಿಕೂಟವು 353 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿಯೊಂದೇ 303 ಕ್ಷೇತ್ರಗಳಲ್ಲಿ ಜಯ ಕಂಡಿತ್ತು.
200 ಸಮೀಪವೂ ಬಾರದ ಇಂಡಿಯಾ ಒಕ್ಕೂಟ
ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟವು ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ 125-165 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದು ಮತಗಟ್ಟೆ ಸಮೀಕ್ಷೆಗಳ ಒಟ್ಟು ಸಾರವಾಗಿದೆ. ಇದರೊಂದಿಗೆ ಇಂಡಿಯಾ ಒಕ್ಕೂಟವು ಮ್ಯಾಜಿಕ್ ನಂಬರ್ (272) ಬಿಡಿ, 200 ಕ್ಷೇತ್ರಗಳನ್ನೂ ತಲುಪುವುದಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. ಇದರೊಂದಿಗೆ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳಿಗೆ ಸತತ ಮೂರನೇ ಬಾರಿಯೂ ಹಿನ್ನಡೆಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಲಾಭ
ದಕ್ಷಿಣ ಭಾರತದಲ್ಲಿ, ಅದರಲ್ಲೂ ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಬಹುತೇಕ ಸಮೀಕ್ಷೆಗಳು ತಮಿಳುನಾಡಿನಲ್ಲಿ ಬಿಜೆಪಿ 1-3 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅಂದಾಜಿಸಿವೆ. ಕಾಂಗ್ರೆಸ್ 8-11, ಬಿಜೆಪಿ 36-39 ಮತ್ತು ಇತರರು 0-2 ಸ್ಥಾನಗಳನ್ನು ಪಡೆಯಲಿವೆ. ಬಹು ಕಟ್ಟರ್ ಪ್ರಾಂತೀಯವಾದಿ ಮತದಾರರು ಇರುವ ತಮಿಳುನಾಡಿನಲ್ಲಿ ಖಾತೆ ತೆರೆಯುವುದು ಬಿಜೆಪಿಗೆ ಸುಲಭ ಮಾತಲ್ಲ. ಹೀಗಾಗಿ ಈ ಸಲ ಗೆದ್ದರೆ ಅದೊಂದು ಐತಿಹಾಸಿಕ ಸಾಧನೆಯಾಗಲಿದೆ.
ಎನ್‌ಡಿಎ ಕೇರಳದಲ್ಲಿ ಒಂದರಿಂದ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಖಾತೆಯನ್ನು ತೆರೆಯಲು ಸಜ್ಜಾಗಿದೆ ಎಂಬುದಾಗಿ ಸಮೀಕ್ಷೆಗಳು ಅಂದಾಜಿಸಿವೆ. ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆದಿದ್ದು, 2019ರಲ್ಲಿ ಶೇ.77.84ರಷ್ಟಿದ್ದ ಮತದಾನ ಪ್ರಮಾಣ ಈ ಬಾರಿ ಶೇ.70.35ಕ್ಕೆ ಕುಸಿದಿತ್ತು.
ಇದನ್ನೂ ಓದಿ: PM Narendra Modi: ವಿಕಸಿತ ಭಾರತಕ್ಕೆ ಭದ್ರ ಅಡಿಪಾಯ; ದೇಶದ ಜನತೆಗೆ ಮೋದಿ ಭಾವುಕ ಪತ್ರ