ನವದೆಹಲಿ: 2024ರ ಲೋಕಸಭೆ ಚುನಾವಣೆಯು (Lok Sabha Election) ನರೇಂದ್ರ ಮೋದಿ (Narendra Modi) ವರ್ಸಸ್ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಗುವ ಸಾಧ್ಯತೆಗಳು ದಟ್ಟವಾಗಿವೆ. ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ (PM Candidate) ನರೇಂದ್ರ ಮೋದಿ ಅವರು ಕಣಕ್ಕಿಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಪ್ರತಿಪಕ್ಷಗಳ ನಾಯಕರು ಯಾರು ಎಂಬ ಪ್ರಶ್ನೆಗೆ ಮಂಗಳವಾರ ನಡೆದ ಇಂಡಿಯಾ ಕೂಟದ (India Bloc) ಸಭೆ ಬಹುತೇಕ ಉತ್ತರ ನೀಡಿದೆ. ಇಂಡಿಯಾ ಕೂಟದ ನಾಯಕತ್ವ ವಹಿಸಿಕೊಂಡು, ಪ್ರಧಾನಿ ಮಂತ್ರಿ ಅಭ್ಯರ್ಥಿಯಾಗಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಳಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ (Mamata banerjee) ಮತ್ತು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಖರ್ಗೆ ಅವರ ಹೆಸರನ್ನು ಸೂಚಿಸಿದರು ಎಂದು ತಿಳಿದು ಬಂದಿದೆ.
28 ಪಕ್ಷಗಳ ಇಂಡಿಯಾ ಕೂಟದ ನಾಲ್ಕನೇ ಸಭೆ ಮಂಗಳವಾರ ದಿಲ್ಲಿಯಲ್ಲಿ ನಡೆಯಿತು. ಈ ವೇಳೆ, ಸೀಟು ಹಂಚಿಕೆ ಮತ್ತು ಜನ ಸಂಪರ್ಕ ಸಭೆಗಳ ಕುರಿತು ಚರ್ಚೆ ನಡೆದಿದೆ. ಹಾಗೆಯೇ, ಕೂಟ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬ ಕುರಿತು ಸವಿಸ್ತಾರ ಚರ್ಚೆ ಮಾಡಲಾಗಿದೆ. ಆದರೆ, ಕೂಟದ ಸಂಚಾಲಕರ ನೇಮಕದ ಬಗ್ಗೆ ಯಾವುದೇ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಮೂಲಗಳ ಹೇಳಿಕೆಗಳ ಪ್ರಕಾರ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೂಟದ ಪ್ರಧಾನ ಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಆದರೆ ಖರ್ಗೆ ಅವರು ಈ ನಾಯಕರ ಪ್ರಸ್ತಾಪವನ್ನು ತಿರಸಕ್ರಿಸಿದ್ದಾರೆ. ಮೊದಲು ಚುನಾವಣೆ ಗೆಲ್ಲೋಣ ಆ ಮೇಲೆ ಹುದ್ದೆಯ ಬಗ್ಗೆ ಚರ್ಚಿಸೋಣ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ನಮ್ಮ ಆದ್ಯತೆ ಚುನಾವಣೆಗಳನ್ನು ಗೆಲ್ಲುವುದಾಗಿದೆ. ಪ್ರಧಾನಿ ಹೆಸರನ್ನು ನಿರ್ಧರಿಸುವ ಮೊದಲು ನಾವು ಗೆಲ್ಲುವ ಬಗ್ಗೆ ಯೋಚಿಸುತ್ತೇವೆ. ಸಂಸದರು ಇಲ್ಲದಿದ್ದರೆ ಪ್ರಧಾನಿ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ನಾವು ಮೊದಲು ಬಹುಮತ ಗಳಿಸಲು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಪ್ರಕಾರ, ವಿಪಕ್ಷ ಮೈತ್ರಿಕೂಟದ ಘಟಕಗಳು ಸಭೆಯಲ್ಲಿ “ಮೇನ್ ನಹಿನ್, ಹಮ್ (ನಾವು, ನಾನಲ್ಲ)” ಎಂಬ ವಿಷಯದೊಂದಿಗೆ ಮುಂದುವರಿಯಲು ಉದ್ದೇಶಿಸಿದೆ. ಇಲ್ಲಿನ ಅಶೋಕ ಹೊಟೇಲ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೇರಿದಂತೆ ಪ್ರತಿಪಕ್ಷಗಳ ನಾಯಕು ಪಾಲ್ಗೊಂಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪ್ರತಿಪಕ್ಷಗಳ ನಾಯಕ ಸಭೆ ಚೆನ್ನಾಗಿತ್ತು. ಚುನಾವಣಾ ಪ್ರಚಾರ, ಸೀಟು ಹಂಚಿಕೆ ಪ್ರಕ್ರಿಯೆಗಳು ಎಲ್ಲವೂ ಶೀಘ್ರವೇ ಆರಂಭವಾಗಲಿವೆ. ಕೂಟ ಸಮನ್ವಯಕರರನ್ನಾಗಿ ಯಾರನ್ನೂ ಇನ್ನೂ ಆಯ್ಕೆ ಮಾಡಿಲ್ಲ ಎಂದು ತಿಳಿಸಿದರು. ಆರ್‌ಜೆಡಿ ಸಂಸದ ಮನೋಜ್ ಝಾ ಅವರು, 20 ದಿನದೊಳಗೇ ಸೀಟ್ ಷೇರಿಂಗ್ ಮತ್ತು ಜನರ ಸಂಪರ್ಕ ಸಭೆಗಳು ಶುರುವಾಗಲಿವೆ. ಮುಂದಿನ ಮೂರು ವಾರಗಳಲ್ಲಿ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: INDIA Bloc: ಇಂಡಿಯಾ ಕೂಟದ ನಾಯಕತ್ವ ಹೊಣೆಗಾರಿಕೆ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ!?
ಈ ಸಭೆಯಲ್ಲಿ ಮುಖ್ಯ ವಿಷಯವೇ ಸೀಟು ಹಂಚಿಕೆಯಾಗಿತ್ತು. ಕೆಲವು ನಾಯಕರು ಜನವರಿ 1ಕ್ಕಿಂತ ಮುಂಚೆಯೇ ಸೀಟು ಹಂಚಿಕೆಯಾಗಬೇಕು ಎಂದು ಹೇಳಿದ್ದಾರೆ. ಕೂಟದ ಪ್ರಧಾನಿ ಮಂತ್ರಿ ಅಭ್ಯರ್ಥಿ ಕುರಿತೂ ಸಭೆಯಲ್ಲಿ ಚರ್ಚೆಯಾಯಿತು. ಆದರೆ, ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿಲ್ಲ. ಪ್ರತಿಯೊಬ್ಬರು ಚುನಾವಣೆ ಗೆದ್ದ ಬಳಿಕ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ ಎಂದು ಹೇಳಿದರು ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ ಸಂಸದ ಮಹುವಾ ಮಾಜಿ ಅವರು ತಿಳಿಸಿದ್ದಾರೆ.
ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಏನು, ಕಮೆಂಟ್ ಮೂಲಕ ತಿಳಿಸಿ.