ನವದೆಹಲಿ: ದೇಶಾದ್ಯಂತ ಇಂದು ಲೋಕಸಭೆ ಚುನಾವಣೆ(Lok Sabha Elections 2024)ಯ ಮೂರನೇ ಹಂತ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಮತದಾರರು ಬಹಳಷ್ಟು ಉತ್ಸಾಹದಿಂದಲೇ ಮತ ಚಲಾಯಿಸುತ್ತಿದ್ದರೆ, ಇತ್ತ ಈ ಪ್ರಜಾಪ್ರಭುತ್ವದ ಹಬ್ಬವನ್ನು ಗೂಗಲ್(Google) ಕೂಡ ಸಂಭ್ರಮಿಸುತ್ತಿದೆ. ಗೂಗಲ್ ಇಂದು ಹೊಸ ಡೂಡಲ್(Google Doodle) ಅನ್ನು ಪ್ರಕಟಿಸಿದ್ದು, ತನ್ನ ಲೋಗೋದಲ್ಲಿ ಮತದಾನವನ್ನು ಸಾಂಕೇತಿಕವಾಗಿ ತೋರಿಸುವ ಶಾಯಿ ಇರುವ ಬೆರಳಿನ ಚಿತ್ರವನ್ನು ಇಟ್ಟಿದೆ. ಆ ಲೋಗೋವನ್ನು ಕ್ಲಿಕ್ ಮಾಡಿದರೆ ಗೂಗಲ್ ಬಳಕೆದಾರರಿಗೆ ಚುನಾವಣೆ, ಮತದಾನಕ್ಕೆ ಸಂಬಂಧಿಸಿದ ಸುದ್ದಿಗಳು ಲಭ್ಯವಾಗಲಿವೆ.
ಏನಿದು ಗೂಗಲ್ ಡೂಡಲ್?
ಗೂಗಲ್ ಲೋಗೋವನ್ನು ತಾತ್ಕಾಲಿಕವಾಗಿ ಬದಲಾಯಿಸುವುದನ್ನು ಗೂಗಲ್ ಡೂಡಲ್ ಎಂದು ಕರೆಯಲಾಗುತ್ತದೆ. ಇದು ಜಾಗತಿಕ ಮತ್ತು ಸ್ಥಳೀಯ ರಜಾದಿನಗಳು, ಪ್ರಮುಖ ದಿನಾಚರಣೆಗಳು, ಸಮಾಜಕ್ಕೆ ಕೊಡುಗೆ ನೀಡಿರುವ ಪ್ರಸಿದ್ದ ವ್ಯಕ್ತಿಗಳುಗೆ ಗೌರವ ನೀಡುವ ಉದ್ದೇಶದಿಂದ ಗೂಗಲ್ ಈ ಡೂಡಲ್ ಅನ್ನು ಪರಿಚಯಿಸಿದೆ. ಆಯಾಯ ದಿನದಂದು ಲೋಗೋವನ್ನು ಬದಲಾಯಿಸಲಾಗುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಅದಕ್ಕೆ ಸಂಬಂಧಿಸಿದ ಮಾಹಿತಿ ಲಭ್ಯವಾಗಲಿದೆ.
ಕರ್ನಾಟಕ ಸೇರಿ ದೇಶದ ವಿವಿಧ ಕಡೆ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಆರಂಭವಾಗಿದೆ. ದೇಶದ 11 ರಾಜ್ಯ ಮತ್ತು ಕೇಂದ್ರಾಡಳಿತದ ಪ್ರದೇಶಗಳ 93 ಕ್ಷೇತ್ರಗಳಲ್ಲಿನ ಮತದಾನ ನಡೆಯುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದ ಆಡಳಿತಾರೂಢ ಬಿಜೆಪಿಗೆ ಈ ಹಂತ ಪ್ರಮುಖ ಎನಿಸಿಕೊಂಡಿದೆ. ಮೂರನೇ ಹಂತದಲ್ಲಿ ಸುಮಾರು 120 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕೇಂದ್ರ ಸಚಿವರಾದ ಅಮಿತ್ ಶಾ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮನ್ಸುಖ್ ಮಾಂಡವಿಯಾ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ (ವಿದಿಶಾ) ಮತ್ತು ದಿಗ್ವಿಜಯ್ ಸಿಂಗ್ (ರಾಜ್‌ಗಢ) ಅವರ ಭವಿಷ್ಯ ಇಂದೇ ನಿರ್ಧಾರವಾಗಲಿದೆ. ಜತೆಗೆ ಪ್ರಮುಖ ಬಿಜೆಪಿ ನಾಯಕರಾದ ಪುರುಷೋತ್ತಮ್ ರೂಪಾಲಾ (ರಾಜ್‌ಕೋಟ್), ಪ್ರಹ್ಲಾದ್ ಜೋಶಿ (ಧಾರವಾಡ) ಮತ್ತು ಎಸ್.ಪಿ. ಸಿಂಗ್ ಬಘೇಲ್ (ಆಗ್ರಾ) ಅವರಿಗೂ ಈ ಹಂತ ನಿರ್ಣಾಯಕವಾಗಲಿದೆ.
ಗುಜರಾತ್‌ನಲ್ಲಿ ಒಟ್ಟು 26 ಕ್ಷೇತ್ರಗಳಲ್ಲಿ ಈ ಪೈಕಿ ಒಂದು ಕಡೆ ಈಗಾಗಲೇ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ. ಇನ್ನು ಉಳಿದ 25, ಮಹಾರಾಷ್ಟ್ರದ 11, ಉತ್ತರ ಪ್ರದೇಶದ 10, ಕರ್ನಾಟಕದ 28 ಸ್ಥಾನಗಳ ಪೈಕಿ 14, ಛತ್ತೀಸ್‌ಗಢದ 7, ಬಿಹಾರದ 5, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ತಲಾ 4 ಮತ್ತು ಗೋವಾದ ಎಲ್ಲ 2, ಮಧ್ಯಪ್ರದೇಶದ 9 ಸ್ಥಾನಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಜತೆಗೆ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು (2 ಸ್ಥಾನಗಳು)ಗಳಲ್ಲಿಯೂ ಇಂದು ವೋಟಿಂಗ್ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ನಾಲ್ಕು ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಲಿದ್ದು, ಎಡ ಪಕ್ಷ-ಕಾಂಗ್ರೆಸ್ ಒಕ್ಕೂಟ ಮತ್ತು ಟಿಎಂಸಿ ನಡುವೆ ಅಲ್ಪಸಂಖ್ಯಾತ ಮತಗಳ ವಿಭಜನೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಚಾರ ಫಲಿತಾಂಶವನ್ನು ನಿರ್ಣಯಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:http:Lok Sabha Election 2024: ಮುಂಜಾನೆಯಿಂದಲೇ ಮತದಾನ ಬಿರುಸು, ಎಲ್ಲೆಡೆ ಶಾಂತಿಯುತ
ಉತ್ತರ ಪ್ರದೇಶದ 10 ಲೋಕಸಭಾ ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಮತದಾನ ನಡೆಯಲಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಕುಟುಂಬ ಎಲ್ಲರ ಗಮನ ಸೆಳೆದಿದೆ. ಡಿಂಪಲ್ ಯಾದವ್ ಅವರು ತಮ್ಮ ಮಾವ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಗೆದ್ದ ಮೈನ್ಪುರಿ ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳುವ ಗುರಿ ಹೊಂದಿದ್ದಾರೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರ ಪುತ್ರ ಅಕ್ಷಯ ಯಾದವ್ ಅವರು ಗೆದ್ದಿದ್ದ ಫಿರೋಜಾಬಾದ್ ಸ್ಥಾನವನ್ನು ಮರಳಿ ಪಡೆಯಲು ಪ್ರಯತ್ನಿಸಲಿದ್ದಾರೆ.