Site icon Vistara News

Lok Sabha Speaker: ಸ್ಪೀಕರ್‌ ಆಯ್ಕೆ ವಿಚಾರದಲ್ಲಿ ಟಿಡಿಪಿಗೆ ಬೆಂಬಲ ಎಂದ ಇಂಡಿಯಾ ಒಕ್ಕೂಟ; ಯಾರಾಗ್ತಾರೆ ಸ್ಪೀಕರ್?

Lok Sabha Speaker

Lok Sabha Speaker election: Sanjay Raut offers INDIA bloc's support to TDP

ನವದೆಹಲಿ: ದೇಶಕ್ಕೆ ದೇಶವೇ ಕುತೂಹಲದಿಂದ ಕಾಯುತ್ತಿದ್ದ ಲೋಕಸಭೆ ಚುನಾವಣೆ (Lok Sabha Speaker) ಮುಗಿದಿದ್ದು, ಎನ್‌ಡಿಎ ಮೈತ್ರಿಕೂಟದ ನರೇಂದ್ರ ಮೋದಿ (Narendra Modi) ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಗ ಲೋಕಸಭೆ ಸ್ಪೀಕರ್‌ ಆಯ್ಕೆಗೆ ಕಸರತ್ತು ನಡೆದಿದೆ. ಇದರ ಮಧ್ಯೆಯೇ, ಟಿಡಿಪಿ ಅಭ್ಯರ್ಥಿಯೇ ಲೋಕಸಭೆ ಸ್ಪೀಕರ್‌ ಆಗುವುದಾದರೆ, ಇಂಡಿಯಾ ಒಕ್ಕೂಟದ (INDIA Bloc) ಬೆಂಬಲವು ಟಿಡಿಪಿಗೆ ಇರಲಿದೆ ಎಂದು ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ವಕ್ತಾರ ಸಂಜಯ್‌ ರಾವತ್‌ (Sanjay Raut) ಹೇಳಿದ್ದಾರೆ.

“ಟಿಡಿಪಿಯ ಅಭ್ಯರ್ಥಿಯನ್ನೇ ಲೋಕಸಭೆ ಸ್ಪೀಕರ್‌ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂಬ ಮಾತುಗಳನ್ನು ನಾನು ಕೇಳಿದೆ. ಹಾಗೊಂದು ವೇಳೆ, ಟಿಡಿಪಿಯ ಅಭ್ಯರ್ಥಿಯೇ ಲೋಕಸಭೆ ಸ್ಪೀಕರ್‌ ಆಗುವುದಾದರೆ, ಇಂಡಿಯಾ ಒಕ್ಕೂಟದ ಪಕ್ಷಗಳು ಚರ್ಚಿಸುತ್ತವೆ. ಆ ಮೂಲಕ ಟಿಡಿಪಿ ಅಭ್ಯರ್ಥಿಗೇ ಬೆಂಬಲ ಸೂಚಿಸುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಹಾಗೊಂದು ವೇಳೆ, ಬಿಜೆಪಿಯವರೇ ಕಣಕ್ಕಿಳಿರೆ, ಎನ್‌ಡಿಎ ಮೈತ್ರಿಕೂಟವೇ ಛಿದ್ರವಾಗಲಿದೆ” ಎಂದು ಸಂಜಯ್‌ ರಾವತ್‌ ಎಚ್ಚರಿಸಿದರು.

Modi 3.0 Government

ಸಂಜಯ್‌ ರಾವತ್‌ ಹೇಳಿಕೆಯ ಬೆನ್ನಲ್ಲೇ ಜೆಡಿಯು ಪ್ರತಿಕ್ರಿಯಿಸಿದೆ. “ಲೋಕಸಭೆ ಸ್ಪೀಕರ್‌ ಆಯ್ಕೆ ವಿಚಾರದಲ್ಲಿ ಬಿಜೆಪಿ ತೀರ್ಮಾನವೇ ಅಂತಿಮ” ಎಂಬುದಾಗಿ ತಿಳಿಸಿದೆ. ಹಾಗಾಗಿ, ಎನ್‌ಡಿಎ ಮೈತ್ರಿಕೂಟದಿಂದ ಲೋಕಸಭೆ ಸ್ಪೀಕರ್‌ ಚುನಾವಣೆಗೆ ಯಾವ ಪಕ್ಷದವರು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲಕ್ಕೆ ಈಡುಮಾಡಿದೆ. ಮೊದಲಿನಿಂದಲೂ ಟಿಡಿಪಿಯು ತಮ್ಮ ಅಭ್ಯರ್ಥಿಯೇ ಲೋಕಸಭೆ ಸ್ಪೀಕರ್‌ ಆಗಬೇಕು ಎಂಬ ಅಭಿಲಾಷೆ ಹೊಂದಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ತೀರ್ಮಾನವು ಪ್ರಮುಖವಾಗಿದೆ.

ಜೆಡಿಯು ಪಕ್ಷವು 12 ಸಂಸದರನ್ನು ಹೊಂದಿದ್ದರೆ, ಟಿಡಿಪಿ 16 ಸಂಸದರನ್ನು ಹೊಂದಿದೆ. ಎರಡೂ ಪಕ್ಷಗಳ ನಾಯಕರಾದ ನಿತೀಶ್‌ ಕುಮಾರ್‌ ಹಾಗೂ ಚಂದ್ರಬಾಬು ನಾಯ್ಡು ಅವರು ನಾವು ಎನ್‌ಡಿಎ ಜತೆ ನಿಲ್ಲುತ್ತೇವೆ ಎಂದಿದ್ದಾರೆ. ನರೇಂದ್ರ ಮೋದಿ ಅವರು ಸಂಪುಟ ರಚನೆಯ ವೇಳೆಯೂ ಪ್ರಾಬಲ್ಯ ಸಾಧಿಸಿದ್ದರು. ಕೇಂದ್ರ ಗೃಹ, ರಕ್ಷಣೆ, ಹಣಕಾಸು ಹಾಗೂ ವಿದೇಶಾಂಗ ಖಾತೆಗಳನ್ನು ಬಿಜೆಪಿಯೇ ಉಳಿಸಿಕೊಂಡಿದೆ. ಹಾಗಾಗಿ, ಟಿಡಿಪಿ ಅಭ್ಯರ್ಥಿಯೇ ಸ್ಪೀಕರ್‌ ಚುನಾವಣೆ ಕಣಕ್ಕೆ ಇಳಿಬಹುದು ಎನ್ನಲಾಗಿದೆ. ಜೂನ್‌ 24ರಿಂದ ಜುಲೈ 3ರವರೆಗೆ ಸಂಸತ್‌ ವಿಶೇಷ ಅಧಿವೇಶನ ನಡೆಯಲಿದ್ದು, ಜೂನ್‌ 26ರಂದು ಸ್ಪೀಕರ್‌ ಆಯ್ಕೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: RSS V/S BJP: ಮೋಹನ್ ಭಾಗವತ್ ʼಅಹಂಕಾರʼದ ಹೇಳಿಕೆ ಮೋದಿ ವಿರುದ್ಧವೆ? ಆರ್‌ಎಸ್‌ಎಸ್ ಸ್ಪಷ್ಟನೆ ಇದು!

Exit mobile version