ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯಲ್ಲಿ (Loksabha Election) ಹೊಸದಿಲ್ಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವ ಯೋಜನೆಯನ್ನು ಕಾಂಗ್ರೆಸ್ (congress) ಘೋಷಿಸಿದೆ. ಆದರೆ ಕಾಂಗ್ರೆಸ್‌ನ ಈ ತೀರ್ಮಾನ ಸದ್ಯ ʼI.N.D.I.A’ ಮೈತ್ರಿಕೂಟದಲ್ಲಿ (INDIA alliance) ಅದರ ಮಿತ್ರಪಕ್ಷವಾಗಿರುವ ಆಮ್ ಆದ್ಮಿ ಪಾರ್ಟಿಯ (Aam Admi party) ಮುನಿಸಿಗೆ ಕಾರಣವಾಗಿದೆ.
ಬುಧವಾರ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಮತ್ತು ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಪಕ್ಷದ ಉನ್ನತ ನಾಯಕರು ಭಾಗವಹಿಸಿದ ಸುದೀರ್ಘ ಸಭೆಯ ನಂತರ ಕಾಂಗ್ರೆಸ್ ಹೀಗೆ ಹೇಳಿದೆ. ಇದರಿಂದ ಕೆರಳಿರುವ ಆಮ್ ಆದ್ಮಿ ಪಾರ್ಟಿ, ಈ ಕುರಿತು ಈ ವಿಷಯದ ಬಗ್ಗೆ ಪ್ರಕಟಿಸುವ ಮುನ್ನ ನಮ್ಮೊಡನೆ ಮಾತುಕತೆ ನಡೆಸಬೇಕಿತ್ತು ಎಂದಿದೆ.
ʼʼಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ನಡೆಸುವಂತೆ ನಮಗೆ ತಿಳಿಸಲಾಗಿದೆ. ದಿಲ್ಲಿಯ ಎಲ್ಲ 7 ಸ್ಥಾನಗಳಲ್ಲೂ ಸ್ಪರ್ಧಿಸಲು ತೀರ್ಮಾನಿಸಲಾಗಿದೆ. ಏಳು ತಿಂಗಳುಗಳು ಬಾಕಿಯಿದೆ ಮತ್ತು ಎಲ್ಲಾ ಏಳು ಸ್ಥಾನಗಳಿಗೆ ತಯಾರಿ ನಡೆಸುವಂತೆ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ತಿಳಿಸಲಾಗಿದೆ” ಎಂದು ಪಕ್ಷದ ಸಭೆಯ ನಂತರ ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಹೇಳಿದರು.
ಕಾಂಗ್ರೆಸ್‌ನ ಈ ತೀರ್ಮಾನ ಆಪ್‌ಗೆ ಅಸಮಾಧಾನ ತಂದಿದೆ. “ಕಾಂಗ್ರೆಸ್ ಪಕ್ಷ ನಮ್ಮೊಡನೆ ದೆಹಲಿಯಲ್ಲಿ ಮೈತ್ರಿ ಮಾಡಿಕೊಳ್ಳಲು ಬಯಸದಿದ್ದರೆ, ನಾವು ಕೂಡ ಇಂಡಿಯಾ ಮೈತ್ರಿಕೂಟಕ್ಕೆ ಹೋಗುವುದರಲ್ಲಿ ಅರ್ಥವಿಲ್ಲ. ಅದು ಸಮಯ ವ್ಯರ್ಥ ಮಾಡಿದಂತೆ. ಹಾಗಾಗಿ ಇಂಡಿಯಾ ಮೈತ್ರಿಕೂಟದ ಮುಂದಿನ ಸಭೆಯಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷದ ಉನ್ನತ ನಾಯಕತ್ವ ನಿರ್ಧರಿಸಲಿದೆʼʼ ಎಂದು ಆಪ್ ವಕ್ತಾರ ಪ್ರಿಯಾಂಕಾ ಕಕ್ಕರ್ ತಿಳಿಸಿದ್ದಾರೆ.
“ಚುನಾವಣಾ ಮೈತ್ರಿಯ ಬಗ್ಗೆ ನಮ್ಮ ಕೇಂದ್ರ ನಾಯಕತ್ವ ನಿರ್ಧರಿಸಲಿದೆ. ನಮ್ಮ ರಾಜಕೀಯ ವ್ಯವಹಾರಗಳ ಸಮಿತಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಕುಳಿತು ಚರ್ಚಿಸಲಿವೆ” ಎಂದು ಇನ್ನೊಂದು ಕಡೆ ಆಪ್ ಸಚಿವ ಸೌರಭ್ ಭಾರದ್ವಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Loksabha Election 2024: ಲೋಕಸಭೆಗೆ ಕಾಂಗ್ರೆಸ್ ತಯಾರಿ; ಮಂಡ್ಯದಲ್ಲಿ ಸುಮಲತಾ ವಿರುದ್ಧ ರಮ್ಯ?