Site icon Vistara News

Sambit Patra: ಭಗವಾನ್‌ ಜಗನ್ನಾಥನೇ ಮೋದಿಯ ಭಕ್ತ ಎಂದ ಬಿಜೆಪಿ ನಾಯಕ; ಭುಗಿಲೆದ್ದ ವಿವಾದ

Sambita Patra

Lord Jagannath Bhakt of PM Narendra Modi: BJP's Sambit Patra sparks major controversy

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಕೋಟ್ಯಂತರ ಭಾರತೀಯರು ಇಷ್ಟಪಡುತ್ತಾರೆ. ಸೆಲೆಬ್ರಿಟಿಗಳಿಂದ ಹಿಡಿದು ಹಿರಿಯರವರೆಗೆ ಮೋದಿ ಅವರನ್ನು ಇಷ್ಟಪಡುತ್ತಾರೆ. ವಿದೇಶಗಳಲ್ಲೂ ಮೋದಿ ಅವರಿಗೆ ಅಭಿಮಾನಿಗಳಿದ್ದಾರೆ. ಇದೇ ಕಾರಣಕ್ಕಾಗಿ ಬಿಜೆಪಿ ನಾಯಕರು ಮೋದಿ ಅವರ ಹೆಸರು ಹೇಳಿಕೊಂಡು ಮತ ಕೇಳುತ್ತಾರೆ. ಆದರೆ, ಬಿಜೆಪಿ ನಾಯಕ, ಒಡಿಶಾದ ಪುರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಸಂಬಿತ್‌ ಪಾತ್ರಾ (Sambit Patra) ಅವರು ಮೋದಿ ಅವರನ್ನು ಹೊಗಳುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಪುರಿ ಜಗನ್ನಾಥನು (Lord Jagannath) ನರೇಂದ್ರ ಮೋದಿ ಅವರ ಭಕ್ತನಾಗಿದ್ದಾನೆ” ಎಂದು ಸಂಬಿತ್‌ ಪಾತ್ರಾ ನೀಡಿದ ಹೇಳಿಕೆ ಈಗ ಭಾರಿ ವಿವಾದ ಸೃಷ್ಟಿಸಿದೆ.

ಸಂಬಿತ್‌ ಪಾತ್ರಾ ಹೇಳಿದ್ದೇನು?

“ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಲು ಲಕ್ಷಾಂತರ ಜನ ಸೇರಿದ್ದಾರೆ. ಜಗನ್ನಾಥನೇ ನರೇಂದ್ರ ಮೋದಿ ಅವರ ಭಕ್ತನಾಗಿದ್ದಾನೆ. ನಾವೆಲ್ಲರೂ ಮೋದಿ ಅವರ ಕುಟುಂಬಸ್ಥರು. ನಾನು ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಇದು ಒಡಿಶಾದ ಎಲ್ಲ ಜನರಿಗೂ ಐತಿಹಾಸಿಕ ದಿನವಾಗಿದೆ” ಎಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಸಂಬಿತ್‌ ಪಾತ್ರ ಹೇಳಿದ್ದರು. ನರೇಂದ್ರ ಮೋದಿ ಅವರು ಪುರಿ ಜಗನ್ನಾಥ ದೇವಾಲಯಕ್ಕೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಂಬಿತ್‌ ಪಾತ್ರಾ ಇಂತಹ ಹೇಳಿಕೆ ನೀಡಿದ್ದಾರೆ. ವಿವಾದದ ಬಳಿಕ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದು, ಇದು ಬಾಯ್ತಪ್ಪಿನಿಂದ ನೀಡಿದ ಹೇಳಿಕೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕುಟುಕಿದ ನವೀನ್‌ ಪಟ್ನಾಯಕ್‌

ಸಂಬಿತ್‌ ಪಾತ್ರ ಹೇಳಿಕೆಗೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ತಿರುಗೇಟು ನೀಡಿದ್ದಾರೆ. “ಭಗವಾನ್‌ ಶ್ರೀ ಜಗನ್ನಾಥನು ಇಡೀ ಸೃಷ್ಟಿಗೆ ದೇವರಾಗಿದ್ದಾನೆ. ದೇವರನ್ನೇ ಮನುಷ್ಯನ ಭಕ್ತ ಎಂದು ಕರೆದಿರುವುದು ಅಪಸವ್ಯ ಹಾಗೂ ದೇವರಿಗೆ ಮಾಡಿದ ಅವಮಾನವಾಗಿದೆ. ಇದು ಒಡಿಶಾ ಹಾಗೂ ಜಗತ್ತಿನಾದ್ಯಂತ ಇರುವ ಜಗನ್ನಾಥನ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಯಾಗಿದೆ” ಎಂದು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸಂಬಿತ್‌ ಪಾತ್ರಾ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಪ್ರತಿಪಕ್ಷಗಳ ನಾಯಕರಂತೂ ಸಂಬಿತ್‌ ಪಾತ್ರಾ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

“ಜಗನ್ನಾಥನು ಸರ್ವಶ್ರೇಷ್ಠನಾಗಿದ್ದು, ಒಡಿಶಾದ ಅಸ್ಮಿತೆಯಾಗಿದ್ದಾನೆ. ಇಂತಹ ಜಗನ್ನಾಥನ ಬಗ್ಗೆ ಹೇಳಿಕೆ ಕೊಡುವುದು, ಮನುಷ್ಯರೊಬ್ಬರ ಭಕ್ತ ಎಂದು ಹೇಳುವುದು ಖಂಡನೀಯವಾಗಿದೆ. ಬಿಜೆಪಿ ನಾಯಕರೂ ಆದ ಪುರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯು ಹೀಗೆ ಹೇಳಿರುವುದನ್ನು ನಾನು ಖಂಡಿಸುತ್ತೇನೆ. ರಾಜಕೀಯ ಲಾಭಕ್ಕಾಗಿ ದೇವರನ್ನು ಬಳಸಿಕೊಳ್ಳುವುದು, ಹೀನವಾದ ಹೇಳಿಕೆ ನೀಡುವುದನ್ನು ಬಿಜೆಪಿ ನಾಯಕರು ಬಿಡಬೇಕು. ಒಡಿಶಾದ ಜನರು ದೀರ್ಘ ಅವಧಿಗೆ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಹಾಗೂ ಎಂದಿಗೂ ಕ್ಷಮಿಸಲ್ಲ” ಎಂದು ನವೀನ್‌ ಪಟ್ನಾಯಕ್‌ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Arvind Kejriwal: “ತಾಕತ್‌ ಇದ್ರೆ ಅರೆಸ್ಟ್‌ ಮಾಡಿ…”; ಪ್ರಧಾನಿ ಮೋದಿಗೆ ಕೇಜ್ರಿವಾಲ್‌ ಓಪನ್‌ ಚಾಲೆಂಜ್‌

Exit mobile version