Site icon Vistara News

ರಾಮಮಂದಿರ ಉದ್ಘಾಟನೆಗೆ ದಿನಾಂಕ ಫಿಕ್ಸ್‌; ವಿಜಯ ದಶಮಿ ದಿನ ಮೋಹನ್‌ ಭಾಗವತ್‌ ಘೋಷಣೆ

construction of Ram Mandir beginning of Bharatvarsha Reconstruction Says RSS chief Mohan Bhagwat

ಮುಂಬೈ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ (Ram Mandir) ಉದ್ಘಾಟನೆಗೆ ದಿನಾಂಕ ನಿಗದಿಯಾಗಿರುವ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಮಹತ್ವದ ಮಾಹಿತಿ ನೀಡಿದ್ದಾರೆ. “ಜನವರಿ 22ರಂದು ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯಾಗುತ್ತದೆ” ಎಂದು ವಿಜಯದಶಮಿ ದಿನವೇ ಮೊಹನ್‌ ಭಾಗವತ್‌ ದಿನಾಂಕ ಘೋಷಿಸಿದ್ದಾರೆ.

ವಿಜಯ ದಶಮಿ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಆಯೋಜಿಸಿದ್ದ ವಿಜಯ ದಶಮಿ ಉತ್ಸವದಲ್ಲಿ ಅವರು ಮಾತನಾಡಿದರು. “ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ಜನವರಿ 22ರಂದು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅದೇ ದಿನ ದೇಶದ ಎಲ್ಲ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮ, ಧಾರ್ಮಿಕ ವಿಧಿವಿಧಾನ ಆಯೋಜಿಸಲಾಗುತ್ತದೆ” ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಉದ್ಘಾಟನೆ ನೆರವೇರಿಸಲಿದ್ದಾರೆ.

“ರಾಮಮಂದಿರವು ದೇಶದ ಶಾಂತಿ, ದೈವತ್ವ ಹಾಗೂ ಏಕತೆಯ ಸಂಕೇತವಾಗಿದೆ. ಅಮೃತ ಮಹೋತ್ಸವದ ವೇಳೆಯೇ ಮಂದಿರಕ್ಕೆ ಚಾಲನೆ ಸಿಗುತ್ತಿರುವುದು ಸಂತೋಷದ ಸಂಗತಿಯಾಗಿದೆ” ಎಂದರು. “ಜಗತ್ತಿನಲ್ಲಿ ಪ್ರತಿ ವರ್ಷ ಭಾರತದ ಘನತೆ, ಜನಪ್ರಿಯತೆ, ವರ್ಚಸ್ಸು ಹೆಚ್ಚಾಗುತ್ತಲೇ ಇದೆ. ಈ ವರ್ಷ ಜಿ-20 ಶೃಂಗಸಭೆಯನ್ನು ಭಾರತದಲ್ಲಿಯೇ ಆಯೋಜಿಸಿರುವುದು ಮಹತ್ವದ ಸಂಗತಿಯಾಗಿದೆ. ಭಾರತದ ಆತಿಥ್ಯ, ಸಂಸ್ಕೃತಿ ಪರಿಚಯ ಸೇರಿ ಹಲವು ದಿಸೆಯಲ್ಲಿ ಆಯೋಜನೆಯ ಜವಾಬ್ದಾರಿ ಸಿಕ್ಕಿದ್ದು ಒಳ್ಳೆಯ ಅವಕಾಶ” ಎಂದರು.

ಇದನ್ನೂ ಓದಿ: Ram Mandir: ರಾಮಮಂದಿರ ಅರ್ಚಕರು, ಸಿಬ್ಬಂದಿ ಸಂಬಳ 40% ಹೆಚ್ಚಳ; ಇವರ ವೇತನ ಎಷ್ಟು?

ಉದ್ಯೋಗ ಸೃಷ್ಟಿ ಹೆಚ್ಚಾಗಲಿ

ರಾಮಮಂದಿರ, ಜಿ-20 ಶೃಂಗಸಭೆ ಜತೆಗೆ ಹಲವು ವಿಷಯಗಳ ಕುರಿತು ಮೋಹನ್‌ ಭಾಗವತ್‌ ಮಾತನಾಡಿದರು. “ನಿಸರ್ಗದ ಜತೆ ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕು. ಏಕಬಳಕೆ ಪ್ಲಾಸ್ಟಿಕ್‌ಅನ್ನು ಸಂಪೂರ್ಣ ತ್ಯಜಿಸಬೇಕು. ದೇಶೀಯ ಉತ್ಪನ್ನಗಳ ಬಳಕೆ ಹೆಚ್ಚಿಸಬೇಕು. ಹಾಗೆಯೇ, ದೇಶದಲ್ಲಿ ಉದ್ಯೋಗಾವಕಾಶಗಳು ಇನ್ನಷ್ಟು ಹೆಚ್ಚಾಗಬೇಕು. ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಸಾಮರಸ್ಯ ಹಾಗೂ ಸಹಕಾರದ ಮನೋಭಾವ ಎಲ್ಲರಲ್ಲೂ ಒಡಮೂಡಬೇಕು” ಎಂದರು.

ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳಿಂದ ಹಗೆತನ

ಮೋಹನ್‌ ಭಾಗವತ್‌ ಅವರು ಭಾಷಣದ ವೇಳೆ ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳ ವಿರುದ್ಧ ಹರಿಹಾಯ್ದರು. “ಭಾರತವು ವೈವಿಧ್ಯತೆಯಲ್ಲೂ ಏಕತೆ ಹೊಂದಿದೆ. ಜಗತ್ತಿನಲ್ಲೇ ವೇಗವಾಗಿ ಭಾರತ ಅಭಿವೃದ್ಧಿ ಹೊಂದುತ್ತಿದೆ. ಆದರೆ, ತಮ್ಮನ್ನು ತಾವು ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ಎಂದು ಕರೆದುಕೊಳ್ಳುವವರು ಹಗೆತನವನ್ನು ಪಸರಿಸುತ್ತಿದ್ದಾರೆ. ಭಾರತವು ಜಗತ್ತಿನಲ್ಲಿ ಏಳಿಗೆ ಹೊಂದಲು ಅವರು ಇಷ್ಟಪಡುವುದಿಲ್ಲ” ಎಂದರು.

ಆರ್‌ಎಸ್‌ಎಸ್‌ಗೆ ಕಾರ್ಯಕ್ರಮಗಳ ಆಯೋಜನೆ ಹೊಣೆ

ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

Exit mobile version