Site icon Vistara News

Lord Ram: ಶ್ರೀರಾಮ ಮಾಂಸ ಸೇವಿಸುತ್ತಿದ್ದ; ವಿವಾದದ ಕಿಡಿ ಹೊತ್ತಿಸಿದ ಎನ್‌ಸಿಪಿ ನಾಯಕ

jitendra awhad

Lord Ram was non-vegetarian, says NCP-Sharad Pawar faction leader Jitendra Awhad

ಮುಂಬೈ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದ (Ram Mandir) ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಇದಕ್ಕೂ ಮೊದಲೇ ಕೆಲ ರಾಜಕೀಯ ನಾಯಕರು ನೀಡುತ್ತಿರುವ ಹೇಳಿಕೆಗಳು ವಿವಾದಕ್ಕೆ ಗುರಿಯಾಗಿವೆ. ರಾಮಮಂದಿರ ಲೋಕಾರ್ಪಣೆ ದಿನ ಕರ್ನಾಟಕದಲ್ಲಿ ಗೋದ್ರಾ ಮಾದರಿ ದಾಳಿಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್‌ ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, “ಶ್ರೀರಾಮನು (Lord Ram) ಮಾಂಸಾಹಾರಿಯಾಗಿದ್ದ” ಎಂದು ಎನ್‌ಸಿಪಿ (ಶರದ್‌ ಪವಾರ್‌ ಬಣ) ನಾಯಕ ಜಿತೇಂದ್ರ ಅವ್ಹಾದ್‌ (Jitendra Awhad) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ರಾಮ ನಮ್ಮವನು, ನಮ್ಮ ಬಹುಜನ ಸಮುದಾಯಕ್ಕೆ ಸೇರಿದವನು. ರಾಮ ಬೇಟೆಯಾಡಿ ಮಾಂಸ ತಿನ್ನುತ್ತಿದ್ದ. ಎಲ್ಲರನ್ನೂ ಸಸ್ಯಾಹಾರಿಗಳನ್ನಾಗಿ ಬದಲಾಯಿಸುತ್ತಿರುವ ಹೊತ್ತಿನಲ್ಲಿ ನಾವು ಮಟನ್‌ ತಿಂದು ರಾಮನ ಆದರ್ಶಗಳನ್ನು ಪಾಲಿಸೋಣ. ಅಷ್ಟಕ್ಕೂ ರಾಮ ಮಾಂಸಾಹಾರಿಯಾಗಿದ್ದ. ಸುಮಾರು 14 ವರ್ಷ ಕಾಡಿನಲ್ಲಿ ಕಳೆದ ರಾಮನಿಗೆ ಸಸ್ಯಾಹಾರ ಸಿಗುವುದಾದರೂ ಹೇಗೆ? ನಾನು ನಿಜ ಹೇಳುತ್ತಿದ್ದೇನೋ ಇಲ್ಲವೋ ನೀವೇ ಹೇಳಿ” ಎಂದು ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಿತೇಂದ್ರ ಅವ್ಹಾದ್‌ ಹೇಳಿದ್ದಾರೆ.

ದೂರು ನೀಡುತ್ತೇವೆ ಎಂದ ಬಿಜೆಪಿ

ಜಿತೇಂದ್ರ ಅವ್ಹಾದ್‌ ನೀಡಿದ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. “ರಾಮ ಮಾಂಸಾಹಾರಿ ಎಂದು ಜಿತೇಂದ್ರ ಅವ್ಹಾದ್‌ ಹೇಳಿರುವುದು ಖಂಡನೀಯ. ಜಿತೇಂದ್ರ ಅವ್ಹಾದ್‌ ಅವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇವೆ” ಎಂದು ಬಿಜೆಪಿ ನಾಯಕ ರಾಮ್‌ ಕದಮ್‌ ಹೇಳಿದ್ದಾರೆ. ಇದೇ ವಿವಾದವನ್ನು ಇಟ್ಟುಕೊಂಡು ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಅವರನ್ನು ರಾಮ್‌ ಕದಮ್‌ ಟೀಕಿಸಿದ್ದಾರೆ. “ಉದ್ಧವ್‌ ಠಾಕ್ರೆ ಅವರಿಗೆ ಹಿಂದುಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ವೋಟಿಗಾಗಿ ರಾಜಕೀಯ ಮಾಡುವುದನ್ನೇ ಉದ್ಧವ್‌ ಠಾಕ್ರೆ ರೂಢಿಸಿಕೊಂಡಿದ್ದಾರೆಯೇ ಹೊರತು ಹಿಂದುಗಳ ಭಾವನೆಗಳಿಗೆ ಅವರು ಗೌರವ ನೀಡುವುದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: Ram Mandir: ರಾಮಮಂದಿರ ಭದ್ರತೆಗೆ ಕೃತಕ ಬುದ್ಧಿಮತ್ತೆ ಬಲ; ಹೀಗಿದೆ ಹೈ ಸೆಕ್ಯುರಿಟಿ

ರಾಮಮಂದಿರ ಭದ್ರತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ನಿಗಾ ಇರಿಸಲಾಗುತ್ತದೆ. ರಾಮಮಂದಿರ ಆವರಣಕ್ಕೆ ಪದೇಪದೆ ಬರುವವರು, ಹಾಗೆ ಬರುವವರ ಚಲನವಲನ, ಯಾವುದೇ ಶಂಕಾಸ್ಪದ ವರ್ತನೆ ಕಂಡುಬಂದರೆ ಕೂಡಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸ್ವಯಂಚಾಲಿತವಾಗಿ ಅಲರ್ಟ್‌ ನೀಡುತ್ತದೆ. ಅದರಂತೆ ಭದ್ರತಾ ಸಿಬ್ಬಂದಿಯು ಮುಂದಿನ ನಡೆ ಅನುಸರಿಸುತ್ತಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version