ನವದೆಹಲಿ: ದೇಶದ ನೂತನ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS)ರಾಗಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (Anil Chauhan) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಜನರಲ್ ಬಿಪಿನ್ ರಾವತ್ ಅವರ ಅಗಲಿಕೆಯಿಂದಾಗಿ ತೆರವಾದ ಸ್ಥಾನಕ್ಕೆ ಅನಿಲ್ ಚೌಹಾಣ್ ಅವರನ್ನು ನೇಮಿಸಿ ರಕ್ಷಣಾ ಸಚಿವಾಲಯ ಆದೇಶ ಹೊರಡಿಸಿದೆ.
ದೇಶದ ಸೇನೆಯಲ್ಲಿ ೪೦ ವರ್ಷ ಸೇವೆಗೈದಿರುವ ಅನಿಲ್ ಚೌಹಾಣ್ ಅವರು ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರ ಕಾರ್ಯಕ್ಷಮತೆ, ಸೇವಾ ಅನುಭವವನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಸಿಡಿಎಸ್ ಆಗಿ ನೇಮಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಜನರಲ್ ಬಿಪಿನ್ ರಾವತ್ ಅವರು ಸೇನಾ ಹೆಲಿಕಾಪ್ಟರ್ ಪತನವುಂಟಾಗಿ ನಿಧನರಾಗಿದ್ದರು.
ಅನಿಲ್ ಚೌಹಾಣ್ ಪರಿಚಯ
ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ, ಅಂಗೋಲಾದಲ್ಲಿ ವಿಶ್ವಸಂಸ್ಥೆ ಮಿಷನ್ ಕಾರ್ಯಾಚರಣೆ ಸೇರಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ. 1961ರ ಮೇ ೧೮ರಂದು ಜನಿಸಿದ ಅನಿಲ್ ಚೌಹಾಣ್ ಅವರು ೧೯೮೧ರಲ್ಲಿ ಗೋರ್ಖಾ ರೈಫಲ್ಸ್ ಮೂಲಕ ಸೇನೆ ಸೇರಿದರು. ಹಂತ ಹಂತವಾಗಿ ಏಳಿಗೆ ಹೊಂದುತ್ತ ಈಸ್ಟರ್ನ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿದ್ದ ಅವರು ೨೦೨೧ರ ಮೇನಲ್ಲಿ ನಿವೃತ್ತರಾಗಿದ್ದರು. ಈಗ ರಕ್ಷಣಾ ಸಿಬ್ಬಂದಿ ನೂತನ ಮುಖ್ಯಸ್ಥರಾಗಿ ಏಳಿಗೆ ಹೊಂದಿದ್ದಾರೆ.
ಇದನ್ನೂ ಓದಿ | ʼಪರಾಕ್ರಮಿʼ ಮನೋಜ್ ಪಾಂಡೆ ನೂತನ ಸೇನಾ ಮುಖ್ಯಸ್ಥ