ನವದೆಹಲಿ: ಲಡಾಕ್‌ನ ಪ್ಯಾಂಗಾಂಗ್ ಕೆರೆಯ ಬಳಿ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪುಷ್ಪನಮನ ಸಲ್ಲಿಸಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚೀನಾದ ಬಗ್ಗೆ ನೀಡಿದ ಹೇಳಿಕೆಗೆ (Rahul Gandhi On China) ನಿವೃತ್ತ ಲೆಫ್ಟಿನೆಂಟ್ ಜನರಲ್ ಸಂಜಯ್ ಕುಲಕರ್ಣಿ ತಿರುಗೇಟು ನೀಡಿದ್ದಾರೆ. “ಚೀನಾವು ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎಂಬುದಾಗಿ ಹೇಳುವುದು ಸರಿಯಲ್ಲ” ಎಂದಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆ ಕುರಿತು ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಸಂಜಯ್ ಕುಲಕರ್ಣಿ, “1950ರಿಂದ ಚೀನಾ ಇದುವರೆಗೆ 40 ಸಾವಿರ ಚದರ ಕಿಲೋಮೀಟರ್ ಜಾಗವನ್ನು ಭಾರತ ಕಳೆದುಕೊಂಡಿದೆ. ಹಾಗಂತ, ನಾವು ಯಾವುದೇ ಭೂಮಿಯನ್ನು ಚೀನಾಗೆ ಬಿಟ್ಟುಕೊಟ್ಟಿಲ್ಲ ಅಥವಾ ಕಳೆದುಕೊಂಡಿದ್ದೇವೆ ಎಂಬುದಾಗಿ ಹೇಳುವುದು ತಪ್ಪಾಗುತ್ತದೆ. ಅದರಲ್ಲೂ, ಭಾರತ ಹಾಗೂ ಚೀನಾ ಮಾತುಕತೆ ನಡೆಸುತ್ತಿರುವ ಇಂತಹ ಹೊತ್ತಿನಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಸರಿಯಲ್ಲ” ಎಂದಿದ್ದಾರೆ.
“ನಾವು ನಮ್ಮ ಜಾಗವನ್ನು ಕಳೆದುಕೊಂಡೆವು ಎಂದು ಹೇಳಿಕೆ ನೀಡುವುದು ಸಮಂಜಸವಲ್ಲ. ಇದರಿಂದ ನಮ್ಮ ಎದುರಾಳಿಗಳು ನಮ್ಮ ಬಗ್ಗೆ ಬೇರೆ ರೀತಿಯಾಗಿ ತಿಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಮಾತುಕತೆ ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಯಾರು ಕೂಡ ನಾವು ಜಾಗವನ್ನು ಕಳೆದುಕೊಂಡೆವು ಎಂಬಂತಹ ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ” ಎಂದು ಆಗ್ರಹಿಸಿದರು.
ಇದನ್ನೂ ಓದಿ: Rahul Gandhi: ಲಡಾಕ್‌ನಲ್ಲಿ ರಾಹುಲ್ ಗಾಂಧಿ ಬೈಕ್ ರೈಡ್, ಕ್ರಿಶ್‌ನಂತೆ ಬೈಕ್ ಓಡಿಸಿದ ಕಾಂಗ್ರೆಸ್ ನಾಯಕ
ಕಾಂಗ್ರೆಸ್ ನಾಯಕ ಹೇಳಿದ್ದೇನು?
ಲಡಾಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ನಾವು ಒಂದಿಂಚೂ ಜಾಗವನ್ನು ಚೀನಾಗೆ ಬಿಟ್ಟುಕೊಟ್ಟಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದು ಸುಳ್ಳು” ಎಂದು ಹೇಳಿದ್ದರು. ಆ ಮೂಲಕ ಚೀನಾ ಭಾರತದ ಜಾಗವನ್ನು ವಶಪಡಿಸಿಕೊಂಡಿದೆ ಎಂದಿದ್ದರು. 2020ರ ಬಳಿಕ ಲಡಾಕ್ ಗಡಿಯಲ್ಲಿ ಭಾರತ ಹಾಗೂ ಚೀನಾ ಮಧ್ಯೆ ಬಿಕ್ಕಟ್ಟು ಉಂಟಾಗಿದ್ದು, ಇದೇ ವೇಳೆ ಚೀನಾ ಭಾರತದ ಜಾಗವನ್ನು ವಶಪಡಿಸಿಕೊಂಡಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ.