ಚೆನ್ನೈ, ತಮಿಳುನಾಡು: ಎಲ್ಲರಿಗೂ ಗೊತ್ತಿರುವ ಹಾಗೆ, 2009ರಲ್ಲಿ ಎಲ್‌ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ (LTTE chief Prabhakaran) ಅವರನ್ನು ಶ್ರೀಲಂಕಾ ಸೇನೆ ಕೊಂದು ಹಾಕಿದೆ. ಆದರೆ, ಕೆಲವರ ಪ್ರಕಾರ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ! ಹೌದು, ಇದು ನಿಜ. ತಮಿಳುನಾಡು ಕಾಂಗ್ರೆಸ್‌ನ ಮಾಜಿ ನಾಯಕ ಪಳಾ ನೆಡುಮಾರನ್ ಅವರು ಹೇಳುವ ಪ್ರಕಾರ, ವಿ ಪ್ರಭಾಕರನ್ ಜೀವಂತವಾಗಿದ್ದು, ತಮ್ಮ ಕುಟುಂಬದೊಂದಿಗೆ ಜೀವಿಸುತ್ತಿದ್ದಾರೆ!
ತಂಜಾವೂರು ಮುಳ್ಳಿವೈಕ್ಕಲ್ ಮೆಮೋರಿಯಲ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ನೆಡುಮಾರನ್ ಅವರು, ತಮಿಳು ಈಳಂ ಜನರ ಅತ್ಯುತ್ತಮ ಬದುಕಿಗಾಗಿ ಪ್ರಭಾಕರನ್ ಅವರು ದೊಡ್ಡ ಪ್ಲ್ಯಾನ್ ಶೀಘ್ರವೇ ಘೋಷಣೆ ಮಾಡಲಿದ್ದಾರೆ. ಎಲ್‌ಟಿಟಿಇ ನಾಯಕ ಪ್ರಭಾಕರನ್, ಸಾರ್ವಜನಿಕರಿಂದ ಕಣ್ಮರೆಯಾಗಿ ತಮ್ಮ ಹೆಂಡತಿ ಮತ್ತು ಮಗಳೊಂದಿಗೆ ಬದುಕುತ್ತಿದ್ದಾರೆ ಎಂದು ತಿಳಿಸಿದರು.
ನಮ್ಮ ತಮಿಳು ರಾಷ್ಟ್ರೀಯ ನಾಯಕನ ಬಗ್ಗೆ ಘೋಷಣೆ ಮಾಡುವುದಕ್ಕೆ ನನಗೆ ಖುಷಿಯಾಗುತ್ತದೆ. ಅವರು(ಪ್ರಭಾಕರನ್) ಚೆನ್ನಾಗಿದ್ದಾರೆ. ಈ ಕುರಿತು ಜಗತ್ತಿನಾದ್ಯಂತ ಇರುವ ಎಲ್ಲ ತಮಿಳು ಜನರಿಗೆ ಈ ವಿಷಯ ತಿಳಿಸಲು ನನಗೆ ಖುಷಿಯಾಗುತ್ತಿದೆ. ಪ್ರಭಾಕರನ್ ಕುರಿತು ಈವರೆಗೆ ವ್ಯವಸ್ಧಿತವಾಗಿ ಹಬ್ಬಿಸಲಾದ ಸುದ್ದಿಗೆ ಈಗ ಘೋಷಣೆ ಮಾಡಿದ ವಿಷಯವು ಕೊನೆ ಹಾಡಲಿದೆ ಎಂದು ನಾನು ಭಾವಿಸುತ್ತೇನೆ ಎಂದು ನೆಡುಮಾರನ್ ಹೇಳಿದ್ದಾರೆ.
ಇದನ್ನೂ ಓದಿ: ಹೊಸ ಪುಸ್ತಕ | LTTE ಮೂರ್ತಿ Calling | ನೈಜ ಘಟನೆಯ ರೋಚಕ ಕಥೆ
2009ರಲ್ಲಿ ಪ್ರಭಾಕರನನ್ನು ಹತ್ಯೆ ಮಾಡಿರುವುದಾಗಿ ಶ್ರಿಲಂಕಾ ಸರ್ಕಾರ ಹೇಳಿಕೊಂಡಿತ್ತು. ಹತ್ಯೆ ನಡೆದ ಎರಡು ದಿನಗಳ ಬಳಿಕ ಶ್ರಿಲಂಕಾ ಸೇನಾ ವಕ್ತಾರರು ಮಾಹಿತಿ ನೀಡಿ, ಎಲ್‌ಟಿಟಿಇ ನಾಯಕ ಎನ್ನಲಾದ ಪ್ರಭಾಕರನ್ ಹಾಗೂ ಆತನ ಮಗನ ಡಿಎನ್ಎ ಮ್ಯಾಚ್ ಆಗಿದೆ ಎಂದು ಘೋಷಿಸಿದ್ದರು.