Site icon Vistara News

Luizinho Faleiro: ಮಮತಾಗೆ ಮತ್ತೊಂದು ಹಿನ್ನಡೆ, ರಾಜ್ಯಸಭೆಗೆ ರಾಜೀನಾಮೆ ನೀಡಿ, ಟಿಎಂಸಿ ತೊರೆದ ಗೋವಾ ನಾಯಕ

Luizinho Faleiro Resigns From TMC, Rajya Sabha

ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದ ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ವಾಪಸ್ ತೆಗೆದುಕೊಂಡ ಬೆನ್ನಲ್ಲೇ ಮತ್ತೊಂದು ಹೊಡೆತ ಬಿದ್ದಿದೆ. ಗೋವಾದ ಮಾಜಿ ಸಿಎಂ ಲುಜಿನ್ಹೊ ಫಲೈರೊ (Luizinho Faleiro) ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಜತೆಗೆ ಟಿಎಂಸಿ ಪಕ್ಷವನ್ನು ತೊರೆದಿದ್ದಾರೆ. ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಫಲೈರೊ ಅವರ ರಾಜೀನಾಮೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ. ಬಳಿಕ ಮಾತನಾಡಿದ ಫಲೈರೊ ಅವರು, ನಾನು ಯಾವುದೇ ರಾಜಕೀಯ ಪಕ್ಷವನ್ನು ಸೇರ್ಪಡೆಯಾಗುತ್ತಿಲ್ಲ. ಟಿಎಂಸಿ ಪಕ್ಷಕ್ಕೂ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಟಿಎಂಸಿ ಪಕ್ಷದ ಗೋವಾ ರಾಜಕೀಯ ವ್ಯವಹಾರಗಳಲ್ಲಿ ಬಹಳ ದಿನಗಳಿಂದಲೂ ಫಲೈರೊ ಅವರನ್ನು ಕಡೆಗಣಿಸಲಾಗಿತ್ತು. ಈ ಕಾರಣಕ್ಕಾಗಿ ಟಿಎಂಸಿ ಉನ್ನತ ನಾಯಕತ್ವದ ವಿರುದ್ಧ ಬೇಸತ್ತು ರಾಜ್ಯಸಭಾ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು ಹೇಳಲಾಗುತ್ತಿದೆ. 2022ರ ಗೋವಾ ಅಸೆಂಬ್ಲಿ ಚುನಾವಣೆಯಲ್ಲಿ ಫಟೋರ್ಡಾದಿಂದ ಗೋವಾ ಫಾರ್ವರ್ಡ್ ಪಾರ್ಟಿಯ ವಿಜಯ್ ಸರ್ದೇಸಾಯಿ ವಿರುದ್ಧ ಸ್ಪರ್ಧಿಸಲು ಫಲೈರೊ ಅವರಿಗೆ ಕೇಳಿಕೊಳ್ಳಲಾಗಿತ್ತು. ಆದರೆ, ಈ ಸ್ಪರ್ಧೆಗೆ ಫಲೈರೊ ಅವರು ನಿರಾಕರಿಸಿದ್ದರು. ಅಂದಿನಿಂದಲೂ ಮಮತಾ ಬ್ಯಾನರ್ಜಿ ಫಲೈರೊ ವಿರುದ್ಧ ಮಮತಾ ಬ್ಯಾನರ್ಜಿ ಅವರು ಮುನಿಸಿಕೊಂಡಿದ್ದರು ಎನ್ನಲಾಗಿದೆ.

ಕರಾವಳಿ ರಾಜ್ಯ ಗೋವಾದಲ್ಲಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲು ಟಿಎಂಸಿ ಭಾರೀ ಪ್ರಚಾರ ಮಾಡಿತ್ತು. ಇದೇ ಕಾರಣಕ್ಕಾಗಿಯೇ ಫಲೈರೊ ಅವರಿಗೆ ಮಹತ್ವವನ್ನು ನೀಡುವುದಕ್ಕಾಗಿ ರಾಜ್ಯಸಭೆಯ ಸದಸ್ಯರನ್ನಾಗಿ ಮಾಡಿತ್ತು. 2026ರವರೆಗೆ ಸದಸ್ಯತ್ವ ಅವಧಿಯನ್ನು ಹೊಂದಿದ್ದ ಅರ್ಪಿತಾ ಘೋಷ್ ಅವರಿಂದ ರಾಜೀನಾಮೆ ಕೊಡಿಸಿ, ಆ ಜಾಗಕ್ಕೆ ಫಲೈರೊ ಅವರನ್ನು 2021ರಲ್ಲಿ ಟಿಎಂಸಿ ಆಯ್ಕೆ ಮಾಡಿತ್ತು.

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಫಲೈರೊ ಅವರು 2021ರ ಸೆಪ್ಟೆಂಬರ್‌ನಲ್ಲಿ ಸೇರ್ಪಡೆಯಾಗಿದ್ದರು. ಅದಕ್ಕೂ ಮೊದಲು ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರು. ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಂತೆ ಮಮತಾ ಬ್ಯಾನರ್ಜಿ ಅವರು ಫಲೈರೊ ಅವರನ್ನು ಟಿಎಂಸಿಯ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಅದಾದ ಎರುಡ ತಿಂಗಳ ಬಳಿಕ ಅವರನ್ನು ಮೇಲ್ಮನೆಗೆ ಕಳುಹಿಸಿಕೊಡಲಾಗಿತ್ತು.

ಟಿಎಂಸಿ, ಎನ್‌ಸಿಪಿ ರಾಷ್ಟ್ರೀಯ ಪಕ್ಷ ಮಾನ್ಯತೆ ರದ್ದು

ಈ ನಡುವೆ, ಚುನಾವಣೆ ಆಯೋಗವು (Election Commission) ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (TMC), ಶರದ್‌ ಪವಾರ್‌ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (NCP) ಹಾಗೂ ಭಾರತೀಯ ಕಮ್ಯುನಿಸ್ಟ್‌ ಪಕ್ಷಗಳಿಗೆ (CPI) ನೀಡಲಾಗಿದ್ದ ರಾಷ್ಟ್ರೀಯ ಪಕ್ಷ ಎಂಬ ಮಾನ್ಯತೆಯನ್ನು ಹಿಂಪಡೆದಿದೆ. ಹಾಗೆಯೇ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಕ್ಷಕ್ಕೆ (AAP) ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಿದೆ. “ಪ್ರಕ್ರಿಯೆಯನ್ನು ಪಾಲಿಸಿ ಹಾಗೂ ಕಳೆದ ಎರಡು ಸಂಸತ್‌ ಚುನಾವಣೆ ಮತ್ತು 21 ವಿಧಾನಸಭೆ ಚುನಾವಣೆಗಳನ್ನು ಆಧರಿಸಿ ಮೂರು ರಾಷ್ಟ್ರೀಯ ಪಕ್ಷಗಳ ಮಾನ್ಯತೆಯನ್ನು ಹಿಂಪಡೆಯಲಾಗಿದೆ” ಎಂದು ಚುನಾವಣೆ ಆಯೋಗವು ಮಾಹಿತಿ ನೀಡಿದೆ. ಇದರಿಂದಾಗಿ ಲೋಕಸಭೆ ಚುನಾವಣೆಗೂ ಮುನ್ನವೇ ಮಮತಾ ಬ್ಯಾನರ್ಜಿ, ಶರದ್‌ ಪವಾರ್‌ ಅವರಿಗೆ ಭಾರಿ ಹಿನ್ನಡೆಯಾದಂತಾಗಿದೆ.

ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಮಾನ್ಯತೆ ದೊರೆತಿರುವುದು ಅವರಿಗೆ ಭಾರಿ ಮುನ್ನಡೆ ಸಿಕ್ಕಂತಾಗಿದೆ. ದೆಹಲಿ ಹಾಗೂ ಪಂಜಾಬ್‌ಗಳಲ್ಲಿ ಈಗಾಗಲೇ ಸರ್ಕಾರಗಳನ್ನು ಆಪ್‌ ಸ್ಥಾಪಿಸಿದೆ. ಗೋವಾ ಸೇರಿದಂತೆ, ಮೂರು ರಾಜ್ಯಗಳಲ್ಲಿ ʼರಾಜ್ಯ ಪಕ್ಷʼ ಎಂದು ಗುರುತಿಸಿಕೊಂಡಿದೆ. ರಾಜ್ಯ ಪಕ್ಷ ಎನಿಸಿಕೊಳ್ಳಬೇಕಿದ್ದರೆ ಆಯಾ ರಾಜ್ಯದಲ್ಲಿ ಎರಡು ಕ್ಷೇತ್ರಗಳನ್ನು ಹಾಗೂ 6% ಮತಗಳನ್ನು ಪಡೆದಿರಬೇಕು. ಹೀಗೆ ನಾಲ್ಕು ರಾಜ್ಯಗಳಲ್ಲಿ ಗುರುತಿಸಿಕೊಂಡಿದ್ದರೆ ಅದನ್ನು ರಾಷ್ಟ್ರೀಯ ಪಕ್ಷ ಎನ್ನಲಾಗುತ್ತದೆ. ದೆಹಲಿ, ಪಂಜಾಬ್‌, ಗೋವಾ ಮತ್ತೀಗ ಗುಜರಾತ್‌ ಸೇರಿ ಆಪ್‌ ಅನ್ನು ರಾಷ್ಟ್ರೀಯ ಪಕ್ಷವಾಗಿದೆ. ಗುಜರಾತ್‌ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕವೇ ಆಪ್‌ ರಾಷ್ಟ್ರೀಯ ಪಕ್ಷವಾಗುವುದು ಖಚಿತವಾಗಿತ್ತು. ಈಗ ಚುನಾವಣೆ ಆಯೋಗವು ಅಧಿಕೃತವಾಗಿ ಘೋಷಿಸಿದೆ.

ಇದನ್ನೂ ಓದಿ: ಗೋವಾ ಬಳಿಕ ತ್ರಿಪುರಾದಲ್ಲಿ ಟಿಎಂಸಿಗೆ ನಿರಾಸೆ, ಶೂನ್ಯ ಸಾಧನೆ

ಚುನಾವಣೆ ಆಯೋಗದ ಪ್ರಮುಖ ಘೋಷಣೆ

ನಾಗಾಲ್ಯಾಂಡ್‌ನಲ್ಲಿ ಎನ್‌ಸಿಪಿ, ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್)‌, ಮೇಘಾಲಯದಲ್ಲಿ ಟಿಎಂಸಿ, ವಾಯ್ಸ್‌ ಆಫ್‌ ದಿ ಪೀಪಲ್‌ ಪಾರ್ಟಿ, ತ್ರಿಪುರದಲ್ಲಿ ಟಿಪ್ರಾ ಮೋಥಾ ಪಕ್ಷಗಳಿಗೆ ರಾಜ್ಯ ಪಕ್ಷ ಮಾನ್ಯತೆ ನೀಡಿದ ಚುನಾವಣೆ ಆಯೋಗ. ಆಮ್‌ ಆದ್ಮಿ ಪಕ್ಷವನ್ನು ಪ್ಯಾರಾ 6 ಬಿ (iii) ಅಡಿಯಲ್ಲಿ ರಾಷ್ಟ್ರೀಯ ಪಕ್ಷ ಎಂದು ಘೋಷಣೆ. ದೆಹಲಿ, ಗೋವಾ, ಪಂಜಾಬ್‌ ಹಾಗೂ ಗುಜರಾತ್‌ನಲ್ಲಿ ರಾಜ್ಯ ಪಕ್ಷ ಎಂಬ ಮಾನ್ಯತೆ. ಮಣಿಪುರದ ಪಿಡಿಎ, ಪುದುಚೇರಿಯ ಪಿಎಂಕೆ, ಉತ್ತರ ಪ್ರದೇಶದ ಆರ್‌ಎಲ್‌ಡಿ, ಆಂಧ್ರಪ್ರದೇಶದ ಬಿಆರ್‌ಎಸ್‌, ಪಶ್ಚಿಮ ಬಂಗಾಳದ ಆರ್‌ಎಸ್‌ಪಿ ಹಾಗೂ ಮಿಜೋರಾಂನ ಎಂಪಿಸಿ ಪಕ್ಷಗಳ ರಾಜ್ಯ ಪಕ್ಷ ಮಾನ್ಯತೆ ಹಿಂಪಡೆಯಲಾಗಿದೆ. ಇವು ಇನ್ನು ರಿಜಿಸ್ಟರ್ಡ್‌ ಅನ್‌ರೆಕಗ್ನೈಸ್ಡ್‌ ಪೊಲಿಟಿಕಲ್‌ ಪಾರ್ಟೀಸ್‌ ಎನಿಸಲಿವೆ.

Exit mobile version