Site icon Vistara News

ಲುಲು ಮಾಲ್‌ ನಮಾಜ್‌ ವಿವಾದ: ಧಾರ್ಮಿಕ ಚಟುವಟಿಕೆಗೆ ಅವಕಾಶ ಇಲ್ಲ ಎಂದು ಬೋರ್ಡ್‌ ಹಾಕಿದ ಆಡಳಿತ

lulu mall lucknow

ಲಖನೌ: ಕಳೆದ ಭಾನುವಾರವಷ್ಟೇ ಅದ್ಧೂರಿಯಾಗಿ ಉದ್ಘಾಟನೆಗೊಂಡಿದ್ದ ಲಖನೌದ ಲುಲು ಮಾಲ್‌ ನಮಾಜ್‌ ವಿವಾದದಿಂದ ಸುದ್ದಿಯಾಗಿತ್ತು. ಇದೀಗ ಆಡಳಿತ ಮಂಡಳಿ ಯಾವುದೇ ಧಾರ್ಮಿಕ ಚಟುವಟಿಕೆ, ಪ್ರಾರ್ಥನೆಗೆ ಅವಕಾಶ ಇಲ್ಲ ಬೋರ್ಡ್‌ ಹಾಕುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.

೨೦೦೦ ಕೋಟಿ ರೂ. ವೆಚ್ಚದೊಂದಿಗೆ ನಿರ್ಮಾಣಗೊಂಡು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಂದ ಲೋಕಾರ್ಪಣೆಗೊಂಡ ಈ ಮಾಲ್‌ನ ಶಾಪಿಂಗ್‌ ಪ್ರದೇಶದಲ್ಲಿ ಕೆಲವು ಮುಸ್ಲಿಮರು ನಮಾಜ್‌ ಮಾಡುತ್ತಿರುವ ವಿಡಿಯೊವೊಂದು ಬಯಲಾಗಿ ವಿವಾದವಾಗಿತ್ತು. ಜುಲೈ ೧೨ರಂದು ನಮಾಜ್‌ ಮಾಡಿರುವ ಬಗ್ಗೆ ಅದರಲ್ಲಿ ದಾಖಲೆ ಇತ್ತು.

ಇದನ್ನು ಅಖಿಲ ಭಾರತ ಹಿಂದೂ ಮಹಾಸಭಾ ತೀವ್ರವಾಗಿ ಆಕ್ಷೇಪಿಸಿದ್ದಲ್ಲದೆ, ಇದೇನು ಲುಲು ಮಾಲಾ? ಅಥವಾ ಲುಲು ಮಸೀದಿಯಾ ಎಂದು ಖಾರವಾಗಿ ಪ್ರಶ್ನಿಸಿತ್ತು. ಜತೆಗೆ ಹಿಂದೂಗಳು ಈ ಮಾಲ್‌ನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿತ್ತು. ಮಾತ್ರವಲ್ಲ, ಸುಂದರ ಕಾಂಡ ಪಠಿಸಲು ನಮಗೂ ಅವಕಾಶ ಕೊಡಿ ಎಂದು ಕೇಳಿತ್ತು. ಈ ನಡುವೆ ಕೆಲವರು ಸುಂದರಕಾಂಡ ಪಠಿಸುವ ಪ್ರಯತ್ನವನ್ನೂ ಮಾಡಿದ್ದರು. ಈ ನಡುವೆ, ಮಾಲ್‌ನಲ್ಲಿ ನಮಾಜ್‌ ಮಾಡಿದ ಅಪರಿಚಿತರ ಮೇಲೂ ಕೇಸು ದಾಖಲಾಗಿದೆ.

ಎಲ್ಲ ಧರ್ಮಗಳನ್ನೂ ಗೌರವಿಸುತ್ತೇವೆ

ವಿವಾದ ಬೇರೆ ಬೇರೆ ತಿರುವು ಪಡೆಯುತ್ತಿರುವುದನ್ನು ಗಮನಿಸಿದ ಲುಲು ಮಾಲ್‌ ಈಗ ಯಾವುದೇ ಕಾರಣಕ್ಕೂ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗದು ಎಂದು ಸ್ಪಷ್ಟಪಡಿಸಿದೆ.

ಲುಲು ಮಾಲ್‌ನಲ್ಲಿ ನಮಾಜ್‌ ನಡೆಸಿದ್ದ ದೃಶ್ಯ

ʻʻನಾವು ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ. ಯಾವುದೇ ಧಾರ್ಮಿಕ ಚಟುವಟಿಕೆ ಇಲ್ಲವೇ ಪ್ರಾರ್ಥನೆಗೆ ಇಲ್ಲಿ ಅನುಮತಿ ಇಲ್ಲ. ನಾವು ನಮ್ಮ ಮಳಿಗೆ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಗೆ ಇಂಥ ಚಟುವಟಿಕೆಗಳ ಮೇಲೆ ಕಣ್ಣಿಡುವಂತೆ ಸೂಚಿಸಿದ್ದೇವೆʼʼ ಎಂದು ಮಾಲ್‌ನ ಜನರಲ್‌ ಮ್ಯಾನೇಜರ್‌ ಆಗಿರುವ ಸಮೀರ್‌ ವರ್ಮಾ ತಿಳಿಸಿದ್ದಾರೆ.

ಸಿಎಂ ಯೋಗಿ ಉದ್ಘಾಟಿಸಿದ್ದರು
ಲಖನೌನ ಗಾಲ್ಫ್‌ ಸಿಟಿಯಲ್ಲಿರುವ ಅಮರ್‌ ಶಹೀದ್‌ ಪಾತ್‌ನಲ್ಲಿ ಈ ಮಾಲ್‌ ಇದೆ. ಇದರಲ್ಲಿ ದೇಶದ ಅತಿ ದೊಡ್ಡ ಬ್ರಾಂಡ್‌ಗಳ ಮಳಿಗೆಗಳಿವೆ. ಸುಮಾರು ೨೨ ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಈ ಮಾಲ್‌ ನಿರ್ಮಾಣವಾಗಿದ್ದು, ೨೦೦೦ ಕೋಟಿ ರೂ. ವೆಚ್ಚವಾಗಿದೆ. ೧೧ ಸ್ಕ್ರೀನ್‌ಗಳ ಪಿವಿಆರ್‌ ಸೂಪರ್‌ಫ್ಲೆಕ್ಸ್‌ ಈ ವರ್ಷದ ಅಂತ್ಯದಲ್ಲಿ ಉದ್ಘಾಟನೆಗೊಳ್ಳಲಿದೆ. ಇಲ್ಲಿನ ಪಾರ್ಕಿಂಗ್‌ ಏರಿಯಾದಲ್ಲಿ ೩೦೦೦ ವಾಹನಗಳನ್ನು ನಿಲ್ಲಿಸಬಹುದು. ಇದನ್ನು ಕಳೆದ ಭಾನುವಾರ ಸಿಎಂ ಯೋಗಿ ಆದಿತ್ಯನಾಥ್‌ ಉದ್ಘಾಟಿಸಿದ್ದರು. ಬಹು ವರ್ಷದ ಹಿಂದೆ ಕೊಚ್ಚಿಯಲ್ಲಿ ನಿರ್ಮಾಣಗೊಂಡ ಯೂಸುಫ್‌ ಅಲಿ ಮಾಲೀಕತ್ವದ ಈ ಮಾಲ್‌ ಇದೀಗ ಬೆಂಗಳೂರು, ತಿರುವನಂತಪುರ, ತ್ರಿಶೂರ್‌ ಮತ್ತು ಲಖನೌದಲ್ಲೂ ಬೃಹತ್‌ ಮಳಿಗೆಗಳನ್ನು ಹೊಂದಿದೆ.

ಇದನ್ನೂ ಓದಿ| ಲಖನೌನ ನೂತನ ಲುಲು ಮಾಲ್‌ನಲ್ಲಿ ನಮಾಜ್‌ಗೆ ಅವಕಾಶ, ಹಿಂದೂ ಸಂಘಟನೆಗಳ ಆಕ್ಷೇಪ

Exit mobile version