ಹೈದರಾಬಾದ್: ತೆಲಂಗಾಣದ ಹೈದರಾಬಾದ್ ಲೋಕಸಭೆ ಕ್ಷೇತ್ರದ ಚುನಾವಣೆ (Lok Sabha Election) ರಣಕಣವು ಈ ಬಾರಿ ಭಾರಿ ಕುತೂಹಲದಿಂದ ಕೂಡಿದೆ. ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ (Asaduddin Owaisi) ವಿರುದ್ಧ ಬಿಜೆಪಿಯಿಂದ ಹಿಂದು ಫೈರ್ ಬ್ರ್ಯಾಂಡ್ ಮಾಧವಿ ಲತಾ (Madhavi Latha) ಕಣಕ್ಕಿಳಿದಿದ್ದಾರೆ. ಪ್ರಖರ ಹಿಂದುತ್ವವಾದಿಯೂ ಆಗಿರುವ ಮಾಧವಿ ಲತಾ ಅವರು ಈಗ ಮುಸ್ಲಿಮರ ಮತಗಳನ್ನೂ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ಹೈದರಾಬಾದ್‌ನಲ್ಲಿರುವ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ಮುಸ್ಲಿಂ ಗಲ್ಲಿಗಲ್ಲಿಗಳಲ್ಲಿ ಪ್ರಚಾರ ಕೈಗೊಂಡಿದ್ದಾರೆ.
ಹೌದು, ಹೈದರಾಬಾದ್ ಲೋಕಸಭೆ ಕ್ಷೇತ್ರದಲ್ಲಿ ಶೇ.52ರಷ್ಟು ಮುಸ್ಲಿಮರ ಮತಗಳಿದ್ದರೆ, ಶೇ.48ರಷ್ಟು ಹಿಂದು ಮತದಾರರಿದ್ದಾರೆ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಅಸಾದುದ್ದೀನ್ ಓವೈಸಿಗೆ ಮತ ನೀಡಲಿದ್ದಾರೆ. ಮುಸ್ಲಿಮರ ಮತಗಳಿಲ್ಲದೆ ಗೆಲುವು ಸಾಧಿಸುವುದು ಕಷ್ಟಸಾಧ್ಯ ಎಂಬುದನ್ನು ಅರಿತ ಮಾಧವಿ ಲತಾ ಅವರು ಹೈದರಾಬಾದ್‌ನ ಮುಸ್ಲಿಂ ಗಲ್ಲಿಗಳಲ್ಲಿ ಪ್ರಚಾರ ನಡೆಸುವ ಮೂಲಕ ಅವರ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ. ಮೇ 13ರಂದು ಹೈದರಾಬಾದ್‌ನಲ್ಲಿ ಮತದಾನ ನಡೆಯಲಿದ್ದು, ಇದಕ್ಕಾಗಿ ಅವರು ಅಬ್ಬರದ ಪ್ರಚಾರ ಕೈಗೊಳ್ಳುತ್ತಿದ್ದಾರೆ.
221 ಕೋಟಿ ರೂ. ಆಸ್ತಿಯ ಒಡತಿ
ಕೊಂಪೆಲ್ಲಾ ಮಾಧವಿ ಲತಾ ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ 221.37 ಕೋಟಿ ರೂ. ಎಂಬುದಾಗಿ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಮಾಧವಿ ಲತಾ ಮತ್ತು ಅವರ ಪತಿ ಕೊಂಪೆಲ್ಲಾ ವಿಶ್ವನಾಥ್ ಇಬ್ಬರೂ ವ್ಯಾಪಾರಿಗಳು. ಅವರ ಮೂವರು ಅವಲಂಬಿತ ಮಕ್ಕಳು, 165.46 ಕೋಟಿ ರೂಪಾಯಿಗಳ ಚರ ಆಸ್ತಿಯನ್ನು ಹೊಂದಿದ್ದಾರೆ ಮತ್ತು ಮಾಧವಿ ಲತಾ ದಂಪತಿ 55.91 ಕೋಟಿ ರೂಪಾಯಿಗಳ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ. ತೆಲಂಗಾಣದ ಅವಳಿ ನಗರವಾದ ಸಿಕಂದರಾಬಾದ್‌ನಲ್ಲಿ ನೆಲೆಸಿರುವ 49 ವರ್ಷದ ಮಾಧವಿ ಲತಾ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡರು. ಮೊದಲ ಬಾರಿಗೆ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ.
Kompella Madhavi Latha BJP candidate from Hyderabad after directing arrows at a Masjid on the occasion of Ram Navami, now Begging in Muslim localities for vote 🤡#MadhaviLatha #Hyderabad pic.twitter.com/9B25RibH39
— IND Story's (@INDStoryS) April 20, 2024
ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಾಧವಿ ಲತಾ ಅವರು ಬಹುಮುಖ ಪ್ರತಿಭೆ ಎನಿಸಿದ್ದಾರೆ. ವಿರಿಂಚಿ ಆಸ್ಪತ್ರೆಯ ಅಧ್ಯಕ್ಷೆಯಾಗಿರುವ ಇವರು ಉದ್ಯಮದ ಜತೆಗೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೋಧನೆ, ಆರೋಗ್ಯ ಸೇವೆ ಹಾಗೂ ಆಹಾರ ವಿತರಣೆಯ ಮೂಲಕ ಇವರು ಜನಮಾನಸದಲ್ಲಿ ಜಾಗ ಪಡೆದಿದ್ದಾರೆ. ಭರತನಾಟ್ಯ ಪ್ರವೀಣೆಯೂ ಆಗಿರುವ ಇವರು ಹಿಂದು ಧರ್ಮದ ಕುರಿತು ಮಾಡುವ ಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ಹೆಚ್ಚು ಅಭಿಮಾನಿಗಳನ್ನು ನೀಡಿದೆ.
ತ್ರಿವಳಿ ತಲಾಕ್ ವಿರುದ್ಧ ಹೋರಾಟ
ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿದ್ದ ತ್ರಿವಳಿ ತಲಾಕ್ ವಿರುದ್ಧ ಮಾಧವಿ ಲತಾ ಅವರು ಹೋರಾಟ ನಡೆಸಿದ್ದರು. ಅದರಲ್ಲೂ, ಕೇಂದ್ರ ಸರ್ಕಾರವು ತ್ರಿವಳಿ ತಲಾಕ್‌ಅನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದ ಬಳಿಕ ಅಸಾದುದ್ದೀನ್ ಓವೈಸಿ ಅವರು ಇದನ್ನು ಅಸಾಂವಿಧಾನಿಕ ಎಂದು ಕರೆದಿದ್ದರು. ಆಗ, ತ್ರಿವಳಿ ತಲಾಕ್ ಕುರಿತು ಜನರಿಗೆ ತಿಳಿವಳಿಕೆ, ಜಾಗೃತಿ ಮೂಡಿಸುವ ಕುರಿತು ಮಾಧವಿ ಲತಾ ಅವರು ಅಭಿಯಾನ ಆರಂಭಿಸಿದ್ದರು. ಆಗಲೇ ಅಸಾದುದ್ದೀನ್ ಓವೈಸಿ ಅವರಿಗೆ ಮಾಧವಿ ಲತಾ ಸೆಡ್ಡು ಹೊಡೆದಿದ್ದರು.