ಚಂಢಿಗಢ: ಈ ಬಾರಿ ಮಧ್ಯಪ್ರದೇಶದಲ್ಲಿ ಬಿಜೆಪಿ ಹೊಸಬರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿದೆ. ಮೋಹನ್ ಯಾದವ್ (Mohan Yadav) ಅವರನ್ನು ನಿಯೋಜಿತ ಸಿಎಂ ಆಗಿ ಆಯ್ಕೆ ಮಾಡಿದೆ. ಆದರೆ, ಬಿಜೆಪಿಯ ಈ ರಣತಂತ್ರದಲ್ಲಿ ಒಂದೇ ಕಲ್ಲಿಗೆ ಎರಡ್ಮೂರು ಹಕ್ಕಿಗಳನ್ನು ಹೊಡೆಯುವ ಯೋಜನೆ ಇದೆ ಎಂಬುದನ್ನು ರಾಜಕೀಯ ಪಂಡಿತರು ಅರ್ಥ ಮಾಡಿಕೊಂಡಿದ್ದಾರೆ. ಮೋಹನ್ ಯಾದವ್ ಅವರ ಆಯ್ಕೆ ಮಧ್ಯಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಲಾಭವನ್ನು ಬಿಹಾರ ಹಾಗೂ ಉತ್ತರ ಪ್ರದೇಶದಲ್ಲೂ ಬಾಚಲಿದೆ ಎಂದು ಹೇಳಲಾಗಿದೆ.
ಬಿಜೆಪಿಯ ಈ ಕ್ರಮದ ರಾಜಕೀಯ ಲಾಭ ನೆರೆಯ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಹೇಗೆ ವಿಸ್ತರಣೆಗೊಳ್ಳಲಿದೆ ಎಂಬುದಕ್ಕೆ ಸರಳ ಉತ್ತರ ಇಷ್ಟೆ. ಎರಡೂ ರಾಜ್ಯಗಳಲ್ಲಿ ಯಾದವ ಸಮುದಾಯದ ದೊಡ್ಡ ಪ್ರಾಬಲ್ಯವಿದೆ. ಅದೇ ರೀತಿ ಎರಡು ರಾಜ್ಯಗಳಲ್ಲಿ 120 ಲೋಕಸಭಾ ಸ್ಥಾನಗಳಿವೆ. ಮುಂಬರುವ ಲೋಕಸಭಾ ಚುನಾವಣೆ ಮೇಲೆ ಇದು ಖಂಡಿತವಾಗಿಯೂ ಪರಿಣಾಮ ಬೀರಲಿದೆ.
ಮೋಹನ್ ಯಾದವ್ ಅವರ ಪತ್ನಿ ಸೀಮಾ ಕೂಡ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಹಿನ್ನೆಲೆಯನ್ನು ಹೊಂದಿದ್ದಾರೆ. ಮೋಹನ್ ಯಾದವ್ ಅವರು 2022 ರ ಆಗಸ್ಟ್ನಲ್ಲಿ ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿರುವ ತಮ್ಮ ಮಾವ ಬ್ರಹ್ಮದೀನ್ ಯಾದವ್ (96) ಅವರನ್ನು ಭೇಟಿ ಮಾಡಲು ಪತ್ನಿಯೊಂದಿಗೆ ಬಂದಿದ್ದರು. ಈ ಮೂಲಕ ಅವರು ಯುಪಿಯಲ್ಲೂ ಸಂಬಂಧ ಹೊಂದಿರುವುದು ಗೊತ್ತಾಗಿದೆ. “ಯುಪಿ ಮತ್ತು ಮಧ್ಯಪ್ರದೇಶ ಎರಡೂ ಅಭಿವೃದ್ಧಿ ಹೊಂದಬೇಕೆಂದು ನಾನು ಬಯಸುತ್ತೇನೆ” ಎಂದು ತಮ್ಮ ಅಳಿಯ ಸಿಎಂ ಆಗಿ ಆಯ್ಕೆಯಾದ ಬಳಿಕ ಮಾವ ಬ್ರಹ್ಮದೀನ್ ಅಭಿಪ್ರಾಯಪಟ್ಟಿದ್ದಾರೆ.
ಯಾದವರು ಈಗ ಎಸ್ಪಿ ಬೆಂಬಲಕ್ಕಿಲ್ಲ
ಯಾದವ ಸಮುದಾಯದವರು ಹಿಂದೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಾರ್ಟಿಯ ಮತ ಬ್ಯಾಂಕ್ ಆಗಿತ್ತು . ಆದರೆ, 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಅದನ್ನು ಸುಳ್ಳಾಗಿಸಿದೆ. ಎಸ್ಪಿಯ ಚೇತರಿಕೆಯ ಹಾದಿಯನ್ನು ಆ ಬಾರಿ ಯಾದವ ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಮುಚ್ಚಿ ಹಾಕಿತ್ತು. ಇದೀಗ ಮಧ್ಯಪ್ರದೇಶದಲ್ಲಿ ಯಾದವ ಸಮುದಾಯಕ್ಕೆ ಸಿಎಂ ಪಟ್ಟ ಕಟ್ಟುವ ಮೂಲಕ ಮತ್ತಷ್ಟು ಮತಗಳನ್ನು ಸೆಳೆಯುವ ತಂತ್ರ ಹೂಡಿದೆ ಬಿಜೆಪಿ. ರಾಜ್ಯ ವಿಧಾನಸಭೆಯ ಅತಿದೊಡ್ಡ ವಿರೋಧ ಪಕ್ಷವಾಗಿರುವ ಎಸ್ಪಿಯ ಮೂಲ ಮತಗಳನ್ನು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ತನ್ನತ್ತ ಸೆಳೆದಿದೆ ಬಿಜೆಪಿ.
ಇದನ್ನೂ ಓದಿ : Article 370 : ಮೋದಿಯ ನಿರ್ಧಾರವನ್ನು ಹೊಗಳಿದ ಕಾಶ್ಮೀರದ ಮೊದಲ ಮುಸ್ಲಿಮ್ ನಾಯಕ ಇವರು
ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬ ಮತ್ತು ಬಿಹಾರದಲ್ಲಿ ಲಾಲು ಯಾದವ್ ಅವರ ಕುಟುಂಬವು ಇಲ್ಲಿಯವರೆಗೆ ಯಾದವ್ ಸಮುದಾಯಕ್ಕೆ ಹೆಚ್ಚಾಗಿ ನಿಷ್ಠಾವಂತರಾಗಿರುವ ಎರಡು ದೊಡ್ಡ ರಾಜಕೀಯ ಕುಟುಂಬಗಳಾಗಿವೆ ಎಂಬುದು ನಿಜ. ಮಧ್ಯಪ್ರದೇಶದಲ್ಲಿ ಯಾದವ್ ಮುಖವನ್ನು ಬೆಂಬಲಿಸುವ ಮೂಲಕ, ಬಿಜೆಪಿ ಈಗ ಹಳೆಯ ಕಲ್ಪನೆಗಳನ್ನು ತೊಡೆದುಹಾಕಲು ಪ್ರಯತ್ನಿಸಿದೆ ಎಂಬುದು ಸ್ಪಷ್ಟವಾಗಿದೆ ಎಂದು ಉತ್ತರ ಪ್ರದೇಶದ ಹಿರಿಯ ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದರು.
ಇದು ಉತ್ತಮ ನಿರ್ಧಾರ. ಬಿಜೆಪಿಗೆ ಜಾತಿ ರಾಜಕೀಯದಲ್ಲಿ ನಂಬಿಕೆ ಇಲ್ಲದಿದ್ದರೂ, ಈ ಕ್ರಮವು ಈಗ ಯಾದವ್ ನಿಷ್ಠೆಯ ಮೂಲಕ ಪಕ್ಷಕ್ಕೆ ನೆಲೆ ಕಲ್ಪಿಸಲಿದೆ ಎಂದು ಯೋಗಿ 2.0 ಸರ್ಕಾರದಲ್ಲಿ ಏಕೈಕ ಯಾದವ್ ಸಚಿವರಾಗಿರುವ ಉತ್ತರ ಪ್ರದೇಶದ ಸಚಿವ ಗಿರೀಶ್ ಯಾದವ್ ಹೇಳಿಕೊಂಡಿದ್ದಾರೆ.
ಬಿಜೆಪಿಯಲ್ಲಿ ಆರು ಯಾದವ ಜನಪ್ರತಿನಿಧಿಗಳಿದ್ದಾರೆ. ಇಬ್ಬರು ಶಾಸಕರು, ಇಬ್ಬರು ಎಂಎಲ್ಸಿಗಳು ಮತ್ತು ಇಬ್ಬರು ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಕೇಂದ್ರದಲ್ಲಿ ಹ್ಯಾಟ್ರಿಕ್ ಗೆಲುವಿಗಾಗಿ,ಬಿಜೆಪಿ ಮತ್ತೆ ಉತ್ತರ ಪ್ರದೇಶವನ್ನು ಹೆಚ್ಚು ಅವಲಂಬಿಸಿದೆ. ಅಲ್ಲಿ ಯಾದವರು ಹೆಚ್ಚು ಪ್ರಬಲ ಒಬಿಸಿ ಬಣವಾಗಿದೆ. ಹೀಗಾಗಿ ಮೋಹನ್ ಯಾದವ್ ಇಲ್ಲಿ ಟ್ರಂಪ್ ಕಾರ್ಡ್ ಎನಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಸುಮಾರು 9% ಯಾದವರು ಇಟಾವಾ, ಬದೌನ್, ಮೈನ್ಪುರಿ, ಫಿರೋಜಾಬಾದ್, ಇಟಾವಾ, ಮೈನ್ಪುರಿ, ಫೈಜಾಬಾದ್, ಸಂತ ಕಬೀರ್ ನಗರ, ಬಲ್ಲಿಯಾ, ಜೌನ್ಪುರ್ ಮತ್ತು ಅಜಂಗಢ ಸೇರಿದಂತೆ ಅನೇಕ ಲೋಕಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಜೂನ್ 2022 ರಲ್ಲಿ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕ್ಷೇತ್ರವನ್ನು ತೊರೆದ ನಂತರ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ದಿನೇಶ್ ಲಾಲ್ ಯಾದವ್ ಅಜಂಗಢದಲ್ಲಿ ಗೆದ್ದಿದ್ದರು.
ಮೋಹನ್ ಜಿ ಅವರು ರಾಜ್ಯದ ಕುಸ್ತಿ ಸಂಘಗಳಲ್ಲಿಯೂ ಸಾಕಷ್ಟು ಸಕ್ರಿಯರಾಗಿದ್ದಾರೆ. ಹಿಂದೆ ಅದನ್ನು ಅಖಿಲೇಶ್ ಅವರ ತಂದೆ ಮತ್ತು ರಾಜಕೀಯ ಧುರೀಣ ಮುಲಾಯಂ ಸಿಂಗ್ ಯಾದವ್ ಮಾಡುತ್ತಿದ್ದರು” ಎಂದು ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಸಂಸದ ಮತ್ತು ಮುಲಾಯಂ ಸಿಂಗ್ ಯಾದವ್ ಅವರ ನಿಕಟವರ್ತಿ ಚೌಧರಿ ಹರ್ಮೋಹನ್ ಸಿಂಗ್ ಯಾದವ್ ಅವರ 10 ನೇ ಪುಣ್ಯತಿಥಿಯ ವರ್ಚುವಲ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವಾಗ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾದವ ಸಮುದಾಯದ ಗಮನ ಸೆಳೆಯಬೇಕು ಎಂದಿದ್ದರು. ಹರ್ಮೋಹನ್ ಯಾದವ್ ಮಹಾಸಭಾದ ಸ್ಥಾಪಕರಾಗಿದ್ದು, ಅವರ ಮೊಮ್ಮಗ ಮೋಹಿತ್ ಯಾದವ್ ಈಗ ಬಿಜೆಪಿಯೊಂದಿಗೆ ಇದ್ದಾರೆ.