ಭೋಪಾಲ್: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ (Madhya Pradesh Election) ಹಿನ್ನೆಲೆಯಲ್ಲಿ ಅಳೆದು-ತೂಗಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿರುವ ಬಿಜೆಪಿಯು ಐದನೇ ಪಟ್ಟಿ ಬಿಡುಗಡೆ ಮಾಡಿದೆ. 92 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಿಲೀಸ್ ಮಾಡಿದ್ದು, ನಿರೀಕ್ಷೆಯಂತೆಯೇ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ (Kailash Vijayvargiya) ಅವರ ಪುತ್ರ ಆಕಾಶ್ ವಿಜಯವರ್ಗೀಯ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಆ ಮೂಲಕ ಪಕ್ಷದಲ್ಲಿ ಕುಟುಂಬ ರಾಜಕಾರಣ, ಸ್ವಜನಪಕ್ಷಪಾತಕ್ಕೆ ಆದ್ಯತೆ ಇಲ್ಲ ಎಂಬ ಸಂದೇಶ ರವಾನಿಸಿದೆ.
ಈಗಾಗಲೇ ಕೈಲಾಶ್ ವಿಜಯವರ್ಗೀಯ ಅವರಿಗೆ ಇಂದೋರ್-1 ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ. ಇಂದೋರ್-3 ಕ್ಷೇತ್ರದಿಂದ ಆಕಾಶ್ ವಿಜಯವರ್ಗೀಯ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ತಮಗೆ ಟಿಕೆಟ್ ಘೋಷಣೆಯಾಗುತ್ತಲೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕೈಲಾಶ್ ವಿಜಯವರ್ಗೀಯ, “ಪ್ರಧಾನಿ ನರೇಂದ್ರ ಮೋದಿ ಅವರು ಸ್ವಜನ ಪಕ್ಷಪಾತವನ್ನು ಒಪ್ಪುವುದಿಲ್ಲ. ತನಗೆ ಟಿಕೆಟ್ ಬೇಡ ಎಂಬುದಾಗಿ ಆಕಾಶ್ ವಿಜಯವರ್ಗೀಯ ಮನವಿ ಮಾಡಿದ್ದಾನೆ” ಎಂದಿದ್ದರು.
BJP releases a list of 92 candidates for the Madhya Pradesh elections pic.twitter.com/7Zp2raGBPU
— ANI (@ANI) October 21, 2023
ಈಗ ಇಂದೋರ್-3 ವಿಧಾನಸಭೆ ಕ್ಷೇತ್ರದಲ್ಲಿ ರಾಕೇಶ್ ಗೋಲು ಶುಕ್ಲಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಮಾಜಿ ಸಚಿವೆ ಮಾಯಾ ಸಿಂಗ್ ಅವರು ಗ್ವಾಲಿಯರ್ ಪೂರ್ವ, ಹಾಲಿ ಸಚಿವೆ ಉಷಾ ಠಾಕೂರ್ ಅವರು ಡಾ.ಅಂಬೇಡ್ಕರ್ ನಗರ-ಮ್ಹೋ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಟಿಕೆಟ್ ಪಡೆದ 92 ಅಭ್ಯರ್ಥಿಗಳಲ್ಲಿ 12 ಮಹಿಳೆಯರಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಟ್ಟ ಕಾಂಗ್ರೆಸ್; ಯಾರಿಗೆಲ್ಲ ಟಿಕೆಟ್?
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಇದುವರೆಗೆ 229 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಅವರು ಛಿಂದ್ವಾರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹಾಗೆಯೇ, ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಅವರ ಸಹೋದರ ಲಕ್ಷ್ಮಣ್ ಸಿಂಗ್ ಅವರಿಗೆ ಚಚೌರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಅಷ್ಟೇ ಅಲ್ಲ, ದಿಗ್ವಿಜಯ್ ಸಿಂಗ್ ಪುತ್ರ ಜೈವರ್ಧನ್ ಸಿಂಗ್ ಅವರಿಗೂ ರಾಘಿಗಢ್‌ನಿಂದ ಟಿಕೆಟ್ ನೀಡಲಾಗಿದೆ. ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ರಾಜಕೀಯ ಮೇಲಾಟದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ಗೆ ಈ ಬಾರಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕವಿದೆ. ವಿಧಾನಸಭೆಯ ಒಟ್ಟು 230 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.