ಭೋಪಾಲ್: ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ 300 ಅಡಿ ಬೋರ್‌ವೆಲ್‌ಗೆ ಬಿದ್ದ ಬಾಲಕಿಯ ರಕ್ಷಣೆಗೆ ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಇಆರ್‌ಎಫ್ ಸೇರಿ ನೂರಾರು ಸಿಬ್ಬಂದಿ 50 ಗಂಟೆ ಕಾರ್ಯಾಚರಣೆ ನಡೆಸಿದರೂ, ಆಳದ ಬೋರ್‌ವೆಲ್‌ನಲ್ಲಿ ಸಾವಿನ ವಿರುದ್ಧ ಎರಡೂವರೆ ವರ್ಷದ ಬಾಲಕಿ ಹೋರಾಡಿದರೂ ಕಂದಮ್ಮ ಬದುಕುಳಿಯಲಿಲ್ಲ. ಗುರುವಾರ ಸಂಜೆ ಬೋರ್‌ವೆಲ್‌ನಿಂದ ಬಾಲಕಿಯನ್ನು ರಕ್ಷಿಸಿ, ಆಸ್ಪತ್ರೆ ಸಾಗಿಸಿದರೂ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.
ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಮುಂಗವಲಿ ಗ್ರಾಮದಲ್ಲಿ ಮಂಗಳವಾರ (June 6) ಮಧ್ಯಾಹ್ನ ಎರಡು ಗಂಟೆಗೆ ಎರಡೂವರೆ ವರ್ಷದ ಸೃಷ್ಟಿ ಬೋರ್‌ವೆಲ್‌ಗೆ ಬಿದ್ದಿದ್ದಳು. ಆಕೆಯ ರಕ್ಷಣೆಗೆ 50 ಗಂಟೆ ಕಾರ್ಯಾಚರಣೆ ನಡೆದಿತ್ತು. ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅರ್ತ್ ಮೂವರ್ಸ್ ಸೇರಿ ನೂರಾರು ಸಿಬ್ಬಂದಿಯು ಕಾರ್ಯಾಚರಣೆ ನಡೆಸಿತ್ತು. ಗುರುವಾರ ಸಂಜೆ 5.30ರ ಸುಮಾರಿಗೆ ಬಾಲಕಿಯನ್ನು ಹೊರತೆಗೆದು, ಆಸ್ಪತ್ರೆಗೆ ದಾಖಲಿಸಲಾಯಿತು.
ಸುಮಾರು 50 ಗಂಟೆಗಳ ಬಳಿಕ ಬಾಲಕಿಯನ್ನು ಬೋರ್‌ವೆಲ್‌ನಿಂದ ಹೊರತೆಗೆದ ಬಳಿಕ, ಆಕೆ ಸಾವನ್ನು ಗೆದ್ದಿರಬಹುದು ಎಂದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಕಂದಮ್ಮ ಬದುಕುಳಿದಿಲ್ಲ ಎಂದು ಘೋಷಿಸಿದ್ದರು. ಇದೇ ವೇಳೆ ಪೋಷಕರು, ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮೂರು ದಿನ ಶ್ರಮಪಟ್ಟರೂ ಮಗು ಉಳಿಯಲಿಲ್ಲವೆಂಬ ಬೇಸರ ರಕ್ಷಣಾ ಸಿಬ್ಬಂದಿಯಲ್ಲೂ ಕಾಣಿಸಿತು.
ಇದನ್ನೂ ಓದಿ: Medical Negligence: ವೈದ್ಯರ ನಿರ್ಲಕ್ಷ್ಯಕ್ಕೆ ಮೂರು ತಿಂಗಳ ಮಗು ಸಾವು? ಲಸಿಕೆ ಹಾಕಿ ಗಂಟೆಯೊಳಗೇ ಮರಣ!
ಆಟವಾಡುತ್ತ ಹೋಗಿ 300 ಅಡಿ ಆಳದ ಬೋರ್‌ವೆಲ್‌ಗೆ ಬಾಲಕಿ ಬಿದ್ದ ಕಾರಣ ಬೋರ್‌ವೆಲ್‌ನಲ್ಲಿ ಕೃತಕ ಆಮ್ಲಜನಕ ಪೂರೈಸುವ ಪೈಪ್ ಬಿಡಲಾಗಿತ್ತು. ಮಗುವಿನ ರಕ್ಷಣೆಗಾಗಿ ಗುಜರಾತ್‌ನಿಂದ ರೋಬೊಟಿಕ್ ಟೀಮ್‌ಗಳನ್ನು ಕರೆಸಲಾಗಿತ್ತು. ಆದರೆ, ಎಷ್ಟು ಪ್ರಯತ್ನ ಮಾಡಿದರೂ ಬಾಲಕಿ ಬದುಕುಳಿಯಲಿಲ್ಲ. ಬಾಲಕಿ ಮಂಗಳವಾರ ಬೋರ್‌ವೆಲ್‌ಗೆ ಬಿದ್ದಾಗ 40 ಅಡಿ ಆಳಕ್ಕೆ ಮಾತ್ರ ಹೋಗಿದ್ದಳು. ಆದರೆ, ನಂತರ ಕೆಳಗೆ ಕೆಳಗೆ ಇಳಿಯುತ್ತ, ಜಾರುತ್ತ ಆಕೆ 100 ಅಡಿ ಆಳ ತಲುಪಿದ್ದಳು. ಇದರಿದಾಗಿ ರಕ್ಷಣಾ ಕಾರ್ಯಾಚರಣೆಯು ವಿಳಂಬವಾಯಿತು. ಹಾಗಾಗಿ, ಮಗು ಉಸಿರುಗಟ್ಟಿದೆ ಎಂದು ತಿಳಿದುಬಂದಿದೆ.