Site icon Vistara News

Veer Savarkar: ಉತ್ತರ ಪ್ರದೇಶ ಆಯ್ತು, ಈಗ ಮಧ್ಯಪ್ರದೇಶ ಪಠ್ಯಪುಸ್ತಕದಲ್ಲೂ ಸಾವರ್ಕರ್‌ ಚಾಪ್ಟರ್ ಬಂತು

Veer Savarkar Chapter In Madhya Pradesh Textbooks

Madhya Pradesh Government to include chapter on Veer Savarkar in school syllabus

ಭೋಪಾಲ್‌: ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರವು ಪಠ್ಯಪುಸ್ತಕಗಳಿಂದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ (Veer Savarkar) ಅವರ ಅಧ್ಯಾಯವನ್ನು ಕೈಬಿಟ್ಟ ಬೆನ್ನಲ್ಲೇ ಬಿಜೆಪಿ ಹಾಗೂ ಬಿಜೆಪಿ ಮೈತ್ರಿಕೂಟದ ಆಡಳಿತವಿರುವ ರಾಜ್ಯಗಳಲ್ಲಿ ವೀರ ಸಾವರ್ಕರ್‌ ಕುರಿತ ಅಧ್ಯಾಯವನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಲಾಗುತ್ತಿದೆ. ಉತ್ತರ ಪ್ರದೇಶದ ಪಠ್ಯಗಳಲ್ಲಿ ವೀರ ಸಾವರ್ಕರ್‌ ಕುರಿತ ಅಧ್ಯಾಯ ಸೇರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ ಬೆನ್ನಲ್ಲೇ ಮಧ್ಯಪ್ರದೇಶದಲ್ಲೂ ಇದೇ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹೌದು, ಮಧ್ಯಪ್ರದೇಶದ ಶಾಲೆಗಳಲ್ಲಿ ಕಡ್ಡಾಯವಾಗಿ ಅಧ್ಯಯನ ಮಾಡುವ ವಿಷಯಗಳ ಪಟ್ಟಿಗೆ ವೀರ ಸಾವರ್ಕರ್‌ ಅವರ ಜೀವನ ಚರಿತ್ರೆಯನ್ನೂ ಸೇರಿಸಲು ಮಧ್ಯಪ್ರದೇಶ ಶಿಕ್ಷಣ ಮಂಡಳಿ ತೀರ್ಮಾನಿಸಿದೆ. ತೀರ್ಮಾನದ ಬಳಿಕ ರಾಜ್ಯ ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಪಾರ್ಮರ್‌ ಮಾತನಾಡಿದ್ದಾರೆ. “ದೇಶದ ಕ್ರಾಂತಿಕಾರಿಗಳ ಕುರಿತು ಮಕ್ಕಳು ಅಧ್ಯಯನ ಮಾಡಲು ಕಾಂಗ್ರೆಸ್‌ ಅವಕಾಶ ಮಾಡಿಕೊಡಲಿಲ್ಲ. ಈಗ ಆ ಕೆಲಸವನ್ನು ಬಿಜೆಪಿ ಮಾಡುತ್ತಿದೆ” ಎಂದಿದ್ದಾರೆ.

“ರಾಜ್ಯದ ಪಠ್ಯಪುಸ್ತಕಗಳಲ್ಲಿ ನಾವು ನಿಜವಾದ ನಾಯಕರು, ಹೋರಾಟಗಾರರ ಜೀವನ ಚರಿತ್ರೆಯನ್ನು ಸೇರಿಸುತ್ತೇವೆ. ವೀರ ಸಾವರ್ಕರ್‌, ಭಗವದ್ಗೀತೆಯ ಸಂದೇಶ, ಭಗವಾನ್‌ ಪರಶುರಾಮ, ಭಗತ್‌ ಸಿಂಗ್‌, ಸುಖದೇವ್‌, ರಾಜಗುರು ಸೇರಿ ಹಲವು ಕ್ರಾಂತಿಕಾರಿಗಳ ಅಧ್ಯಾಯಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸುತ್ತೇವೆ. ಆ ಮೂಲಕ ನಿಜವಾದ ಹಾಗೂ ಎಲೆಮರೆಯ ಕಾಯಿಯಂತಿದ್ದ ವೀರ ಹೋರಾಟಗಾರರ ಜೀವನ ಹಾಗೂ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತೇವೆ” ಎಂದು ತಿಳಿಸಿದ್ದಾರೆ.

ಮುಂಬಯಿಯ ವರ್ಸೋವಾ-ಬಾಂದ್ರಾ ಸಮುದ್ರ ಸಂಪರ್ಕ ಸೇತುವೆಗೆ, ವೀರ ಸಾವರ್ಕರ್​ ಸೇತು ಎಂದು ಮಹಾರಾಷ್ಟ್ರ ಸರ್ಕಾರ ಮರುನಾಮಕರಣ ಮಾಡಿದೆ. ವರ್ಸೋವಾ-ಬಾಂದ್ರಾ ಸೀ ಲಿಂಕ್​​ಗೆ ವೀರ ಸಾವರ್ಕರ್ (Veer Savarka)​ ಹೆಸರು ಇಡುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಮೇ 28ರಂದು, ವೀರ ಸಾವರ್ಕರ್ ಜಯಂತಿಯಂದು ಘೋಷಣೆ ಮಾಡಿದ್ದರು. ಅದರಂತೆ ಈಗ ಹೆಸರನ್ನು ಅಧಿಕೃತಗೊಳಿಸಲಾಗಿದೆ.

ಇದನ್ನೂ ಓದಿ: Veer Savarkar Row: ಕರ್ನಾಟಕ ಪಠ್ಯದಿಂದ ಕೈಬಿಟ್ಟ ವೀರ ಸಾವರ್ಕರ್‌ ಉ.ಪ್ರ ಪಠ್ಯದಲ್ಲಿ!

ಉತ್ತರ ಪ್ರದೇಶದ ಪಠ್ಯಗಳಲ್ಲೂ ವೀರ ಸಾವರ್ಕರ್‌ ಅಧ್ಯಾಯವನ್ನು ಸೇರಿಸಲಾಗಿದೆ. ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಾ ಪರಿಷತ್‌ (UPMSP) ಪಠ್ಯದಲ್ಲಿ ಹಲವು ಬದಲಾವಣೆ ಮಾಡಿದೆ. ಉತ್ತರ ಪ್ರದೇಶದ 9ರಿಂದ 12ನೇ ತರಗತಿ ಪಠ್ಯಪುಸ್ತಕಗಳಲ್ಲಿ ವೀರ ಸಾವರ್ಕರ್‌, ಛತ್ರಪತಿ ಶಿವಾಜಿ, ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರು, ಸ್ವಾಮಿ ವಿವೇಕಾನಂದ ಸೇರಿ ಹಲವು ಮಹನೀಯರ ಕುರಿತ ಅಧ್ಯಾಯಗಳನ್ನು ಸೇರ್ಪಡೆ ಮಾಡಿದೆ. ‌

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version