Site icon Vistara News

450 ರೂ.ಗೆ ಸಿಲಿಂಡರ್‌, ರೈತರಿಗೆ 12 ಸಾವಿರ ರೂ.; ಬಿಜೆಪಿ ಪ್ರಣಾಳಿಕೆಯಲ್ಲಿ ಭರಪೂರ ‘ಉಚಿತ’ ಕೊಡುಗೆ!

Shivaraj Singh Chouhan

Madhya Pradesh Polls: BJP promises ₹2 lakh to girl child, LPG at ₹450, free education

ಭೋಪಾಲ್:‌ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಕಾವು ದಿನೇದಿನೆ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಇದರ ಬೆನ್ನಲ್ಲೇ ಬಿಜೆಪಿಯು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹತ್ತಾರು ಭರವಸೆಗಳನ್ನು ನೀಡಿದೆ. ಅದರಲ್ಲೂ ಜನರಿಗೆ ಸಬ್ಸಿಡಿ ದರದಲ್ಲಿ 450 ರೂಪಾಯಿಗೆ ಒಂದು ಅಡುಗೆ ಅನಿಲ ಸಿಲಿಂಡರ್‌, ವರ್ಷಕ್ಕೆ ರೈತರಿಗೆ 12 ಸಾವಿರ ರೂ. ಜಮೆ ಸೇರಿ ಹಲವು ಭರವಸೆಗಳನ್ನು ನೀಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸೇರಿ ಹಲವು ನಾಯಕರು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಮಧ್ಯಪ್ರದೇಶ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಹಾಗೂ ಮಧ್ಯಪ್ರದೇಶ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಸ್ಥಾಪನೆ ಸೇರಿ ಹಲವು ಉಚಿತ ಕೊಡುಗೆಗಳ ಭರವಸೆಯನ್ನೂ ನೀಡಿದೆ.

ಬಿಜೆಪಿ ನೀಡಿದ ಪ್ರಮುಖ ಭರವಸೆಗಳು ಹೀಗಿವೆ…

  1. ಮುಂದಿನ ಐದು ವರ್ಷಗಳವರೆಗೆ ಜನರಿಗೆ ಉಚಿತವಾಗಿ ಪಡಿತರ ವಿತರಣೆ
  2. ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ 12 ಸಾವಿರ ರೂ. ಹಣಕಾಸು ನೆರವು
  3. ಬಡವರಿಗೆ 450 ರೂಪಾಯಿಗೆ ಒಂದು ಅಡುಗೆ ಅನಿಲ ಸಿಲಿಂಡರ್‌
  4. ರೈತರಿಂದ ಕ್ವಿಂಟಾಲ್‌ಗೆ 2,700 ರೂ.ಗೆ ಗೋಧಿ, 3,100 ರೂ.ಗೆ ಭತ್ತ ಸಂಗ್ರಹ
  5. ಎಲ್‌ಕೆಜಿಯಿಂದ ಪಿಜಿವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ
  6. ಪ್ರತಿ ಬಾಲಕಿಗೆ ಎರಡು ಲಕ್ಷ ರೂ. (ಬಾಲಕಿಗೆ 21 ವರ್ಷವಾದ ಬಳಿಕ ಪಾವತಿ) ಹಣಕಾಸು ನೆರವು
  7. ಬಡವರಿಗೆ ಉಚಿತವಾಗಿ ಸುಸಜ್ಜಿತ ಮನೆಗಳ ನಿರ್ಮಾಣ
  8. ಪ್ರತಿಯೊಬ್ಬರಿಗೂ 12ನೇ ತರಗತಿವರೆಗೆ ಉಚಿತವಾಗಿ ಶಿಕ್ಷಣ

ಇದನ್ನೂ ಓದಿ: ಬಿಪಿಎಲ್ ಕುಟುಂಬಗಳಿಗೆ ಉಚಿತ 5 ಲಕ್ಷ ರೂ. ವಿಮೆ, ಎಲ್ಲರಿಗೂ 400 ರೂ.ಗೆ ಸಿಲಿಂಡರ್! ಬಿಆರ್‌ಎಸ್ ಪ್ರಣಾಳಿಕೆ

ಮಧ್ಯಪ್ರದೇಶದಲ್ಲಿ ಬಿಜೆಪಿಯ ಶಿವರಾಜ್‌ ಸಿಂಗ್‌ ಚೌಹಾಣ್‌ ಮುಖ್ಯಮಂತ್ರಿಯಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ರಾಜಕೀಯ ಮೇಲಾಟದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ಗೆ ಈ ಬಾರಿ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕವಿದೆ. ವಿಧಾನಸಭೆಯ ಒಟ್ಟು 230 ಕ್ಷೇತ್ರಗಳಿಗೆ ನವೆಂಬರ್‌ 17ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version