Site icon Vistara News

Modi Road Show: ಮೋದಿ ರೋಡ್‌ ಶೋಗೆ ಕೋರ್ಟ್‌ ಅಸ್ತು; ತಮಿಳುನಾಡು ಸರ್ಕಾರಕ್ಕೆ ಮುಖಭಂಗ

Narendra Modi Road Show

BJP releases star campaigners names for Rajasthan, Uttar Pradesh, Maharashtra, Assam; Check The List

ಚೆನ್ನೈ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಕ್ಷಿಣ ಭಾರತದಿಂದಲೇ ರಣಕಹಳೆ ಮೊಳಗಿಸಿದ್ದಾರೆ. ತೆಲಂಗಾಣದಲ್ಲಿ ಈಗಾಗಲೇ ಚುನಾವಣೆ ಪ್ರಚಾರ ಆರಂಭಿಸಿರುವ ಅವರು, ಕರ್ನಾಟಕ, ತಮಿಳುನಾಡು, ಕೇರಳದಲ್ಲೂ ಸಮಾವೇಶ, ರೋಡ್ ಶೋ ನಡೆಸಲಿದ್ದಾರೆ. ಇದರ ಬೆನ್ನಲ್ಲೇ, ನರೇಂದ್ರ ಮೋದಿ ಅವರು ಕೊಯಮತ್ತೂರಿನಲ್ಲಿ ನಡೆಸಬೇಕಿದ್ದ ರೋಡ್‌ ಶೋಗೆ ರಾಜ್ಯ ಸರ್ಕಾರವು ಅನುಮತಿ ನಿರಾಕರಿಸಿದೆ. ಆದರೆ, ಮದ್ರಾಸ್‌ ಹೈಕೋರ್ಟ್‌ (Madras High Court) ಈಗ ರೋಡ್‌ ಶೋಗೆ (Modi Road Show) ಅನುಮತಿ ನೀಡಿದ್ದು, ರಾಜ್ಯ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ.

ನರೇಂದ್ರ ಮೋದಿ ಅವರು ಕೊಯಮತ್ತೂರಿನಲ್ಲಿ ಮಾರ್ಚ್‌ 18ರಂದು ಬೃಹತ್‌ ರೋಡ್‌ ಶೋ ನಡೆಸಲಿದ್ದಾರೆ. ಆದರೆ, ರೋಡ್‌ ಶೋಗೂ ಮುನ್ನವೇ ಭದ್ರತಾ ಕಾರಣಗಳಿಂದಾಗಿ ಕೊಯಮತ್ತೂರು ಜಿಲ್ಲಾಡಳಿತವು ರೋಡ್‌ ಶೋಗೆ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಬಿಜೆಪಿ ಕೊಯಮತ್ತೂರು ಜಿಲ್ಲಾಧ್ಯಕ್ಷ ಜೆ. ರಮೇಶ್‌ ಕುಮಾರ್‌ ಅವರು ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಈಗ ಮದ್ರಾಸ್‌ ಹೈಕೋರ್ಟ್‌, ರೋಡ್‌ ಶೋಗೆ ಅನುಮತಿ ನೀಡಬೇಕು ಹಾಗೂ ಪೊಲೀಸರು ಭದ್ರತೆ ಒದಗಿಸಬೇಕು ಎಂದು ಆದೇಶ ನೀಡಿದೆ.

ಕೊಯಮತ್ತೂರಿನಲ್ಲಿ ನರೇಂದ್ರ ಮೋದಿ ಅವರು ರೋಡ್‌ ಶೋ ನಡೆಸಲು ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸಿದೆ. ರೋಡ್‌ ಶೋಗೂ ಮೊದಲೇ, ರೋಡ್‌ ಶೋ ನಡೆಯುವ ಮಾರ್ಗ, ಮಾರ್ಗದ ದೂರ, ಸಮಯ, ಫ್ಲೆಕ್ಸ್‌ಗಳ ಅಳವಡಿಕೆ ಸೇರಿ ಹಲವು ಷರತ್ತುಗಳನ್ನು ವಿಧಿಸಿದೆ. ನರೇಂದ್ರ ಮೋದಿ ಅವರು ಕೊಯಮತ್ತೂರಿನಲ್ಲಿ ಸುಮಾರು 3.6 ಕಿಲೋಮೀಟರ್‌ ರೋಡ್‌ ಶೋ ನಡೆಸಲಿದ್ದಾರೆ. ಇದಕ್ಕಾಗಿ ಅನುಮತಿ ನೀಡಬೇಕು ಎಂದು ಬಿಜೆಪಿಯು ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಆದರೆ, ಇದಕ್ಕೆ ಜಿಲ್ಲಾಡಳಿತವು ನಿರಾಕರಿಸಿತ್ತು.

ಇದನ್ನೂ ಓದಿ: MP Pratap Simha: ನಾನು ಜೀವ ಇರುವವರೆಗೂ ಮೋದಿ ಭಕ್ತ, ಬಂಡಾಯ ಸ್ಪರ್ಧೆ ಮಾಡಲ್ಲ ಎಂದ ಪ್ರತಾಪ್‌ ಸಿಂಹ

ನರೇಂದ್ರ ಮೋದಿ ಅವರು ಮಾ. 16ರಂದು ಮಧ್ಯಾಹ್ನ 2 ಗಂಟೆಗೆ ಕಲಬುರಗಿಗೆ ಭೇಟಿ ಕೊಡಲಿದ್ದಾರೆ. ಅಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. 18ರಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕರ್ನಾಟಕ ಬಿಜೆಪಿ ತಿಳಿಸಿದೆ. ಇದರ ಮಧ್ಯೆಯೇ ಅವರು ಕೊಯಮತ್ತೂರಿನಲ್ಲಿ ರೋಡ್‌ ಶೋ ಕೂಡ ಕೈಗೊಳ್ಳಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಹಾಗೂ ಎನ್‌ಡಿಎ ಒಕ್ಕೂಟವು 400 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಶ್ರಮಿಸಬೇಕು ಎಂದು ಮೋದಿ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version