ಚೆನ್ನೈ: ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ದೇಶಾದ್ಯಂತ ಟೀಕೆಗೆ ಗುರಿಯಾಗಿರುವ ತಮಿಳುನಾಡು ಸಚಿವ, ನಟ ಉದಯನಿಧಿ ಸ್ಟಾಲಿನ್ ಅವರಿಗೆ ತುಸು ರಿಲೀಫ್ ಸಿಕ್ಕಿದೆ. ಸನಾತನ ಧರ್ಮದ (Sanatana Dharma Row) ಕುರಿತು ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ಶಾಸಕ ಸ್ಥಾನದ ಅರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ (Madras High Court) ತಿರಸ್ಕರಿಸಿದೆ. “ಉದಯನಿಧಿ ಸ್ಟಾಲಿನ್ ಹೇಳಿದ್ದು ತಪ್ಪು. ಆದರೆ, ಅವರನ್ನು ಅನರ್ಹಗೊಳಿಸಲು ಅಥವಾ ಯಾವುದೇ ಕ್ರಮ ತೆಗೆದುಕೊಳ್ಳಲು, ಅವರಿಗೆ ಯಾವ ನ್ಯಾಯಾಲಯವೂ ಶಿಕ್ಷೆ ನೀಡಿಲ್ಲ” ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿದೆ.
ಉದಯನಿಧಿ ಸ್ಟಾಲಿನ್ ಜತೆಗೆ ಅವರ ಹೇಳಿಕೆಯನ್ನು ಸಮರ್ಥಿಸಿದ ರಾಜ್ಯ ಸಚಿವ ಪಿ.ಕೆ.ಶೇಖರ್ ಬಾಬು ಹಾಗೂ ಡಿಎಂಕೆ ಸಂಸದ ಎ. ರಾಜಾ ಅವರನ್ನು ಕೂಡ ಅನರ್ಹಗೊಳಿಸಬೇಕು ಎಂಬುದಾಗಿ ಅರ್ಜಿ ಸಲ್ಲಿಸಲಾಗಿತ್ತು. ಉದಯನಿಧಿ ಸ್ಟಾಲಿನ್ ವಿರುದ್ಧ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಕ್ರಿಮಿನಲ್ ಪ್ರಕರಣದಲ್ಲಿ ಶಾಸಕ ಅಥವಾ ಸಂಸದನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದರೆ ಮಾತ್ರ ಆತನ ಶಾಸಕ ಅಥವಾ ಸಂಸದನ ಸ್ಥಾನ ಅನರ್ಹಗೊಳ್ಳುತ್ತದೆ.
Madras High Court Justice Anita Sumanth refrained from issuing quo warranto against Tamil Nadu Minister Udhayanidhi Stalin, Minister PK Sekar Babu and DMK MP A Raja over the remarks on Sanatana Dharma. Petition disposed. pic.twitter.com/6EFR0NGcY0
— ANI (@ANI) March 6, 2024
ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸುವ ಜತೆಗೆ, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಅವರು ನೀಡಿದ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುವ ಜತೆಗೆ ಬೆಂಗಳೂರು, ಪಟನಾ, ಉತ್ತರ ಪ್ರದೇಶ ಸೇರಿ ಹಲವೆಡೆ ಎಫ್‌ಐಆರ್‌ಗಳು ದಾಖಲಾಗಿವೆ. ಇದರಿಂದ ತಮಿಳುನಾಡು ಸಚಿವನಿಗೆ ತೊಂದರೆಯಾಗುತ್ತಿದ್ದು, ಎಲ್ಲ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ, ವಾದ-ಪ್ರತಿವಾದ ಆಲಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ‘ಅಧರ್ಮ’ ಹೇಳಿಕೆಯ ಸ್ಟಾಲಿನ್‌ಗೆ ಸುಪ್ರೀಂ ಚಾಟಿ; ಇನ್ನಾದರೂ ಬುದ್ಧಿ ಬರಲಿ
ಉದಯನಿಧಿ ಸ್ಟಾಲಿನ್ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಉದಯನಿಧಿ ಸ್ಟಾಲಿನ್ ಅವರಿಗೆ ರಿಲೀಫ್ ನೀಡುವ ಬದಲು ಚಾಟಿ ಏಟು ಬೀಸಿತ್ತು. “ನೀವು ಸಂವಿಧಾನದ 19 (1) (ಎ) ವಿಧಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದೀರಿ. 25ನೇ ವಿಧಿ ಅನ್ವಯ ನೀಡಿದ ಧಾರ್ಮಿಕ ಸ್ವಾತಂತ್ರ್ಯಕ್ಕೆ ನೀವು ಚ್ಯುತಿ ತಂದಿದ್ದೀರಿ. ನೀವೇನು ಸಾಮಾನ್ಯ ವ್ಯಕ್ತಿಯಾ? ನಟರಾಗಿದ್ದೀರಿ, ರಾಜ್ಯದ ಸಚಿವರಾಗಿದ್ದೀರಿ. ನಿಮ್ಮ ಹೇಳಿಕೆಯ ಪರಿಣಾಮ ನಿಮಗೆ ಗೊತ್ತಿಲ್ಲವೇ” ಎಂಬುದಾಗಿ ಸುಪ್ರೀಂ ಕೋರ್ಟ್ ಕುಟುಕಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ