Site icon Vistara News

ಮಾಜಿ ಪತ್ನಿಯ ಮನೆಗೆ ಹೋದಾಗ ಆಕೆ ಟೀ ಕೊಟ್ಟು ಉಪಚರಿಸಲೇಬೇಕೆ? ಕೋರ್ಟ್‌ ಹೇಳಿದ್ದೇನು?

Madras

ಚೆನ್ನೈ: ದೇಶದ ನ್ಯಾಯಾಲಯಗಳಲ್ಲಿ ಗಂಭೀರ ಪ್ರಕರಣಗಳ ಕುರಿತು ಎಷ್ಟು ಚರ್ಚೆಯಾಗುತ್ತದೆಯೋ, ಕ್ಷುಲ್ಲಕ ಹಾಗೂ ಸಣ್ಣಪುಟ್ಟ ವಿಚಾರಗಳ ಕುರಿತು ಸಹ ಅಷ್ಟೇ ಚರ್ಚೆಯಾಗುತ್ತದೆ. ಇತ್ತೀಚೆಗೆ, “ವಿಚ್ಛೇದನ ಪಡೆದಿರುವ ಪುರುಷ ಅಥವಾ ಮಹಿಳೆಯು ತನ್ನ ಮಗುವನ್ನು ಭೇಟಿಯಾಗಲು ಮಾಜಿ ಪತ್ನಿ ಅಥವಾ ಪತಿಯ ಮನೆಗೆ ಹೋದಾಗ ಆತ ಅಥವಾ ಆಕೆಯು ಟೀ-ತಿಂಡಿ ಕೊಟ್ಟು ಉಪಚರಿಸಬೇಕು” ಎಂದು ಏಕಸದಸ್ಯ ಪೀಠ ನೀಡಿದ ತೀರ್ಪನ್ನು ಮದ್ರಾಸ್‌ ಹೈಕೋರ್ಟ್‌ನ ವಿಭಾಗೀಯ ತಿರಸ್ಕರಿಸಿದೆ.

“ಮನೆಗೆ ಬರುವ ಅತಿಥಿಗಳಿಗೆ, ಅದರಲ್ಲೂ, ವಿಚ್ಛೇದನ ಪಡೆದ ಪತಿ ಅಥವಾ ಪತ್ನಿಯು ತನ್ನ ಮಗುವನ್ನು ನೋಡಲು ಮಾಜಿ ಪತಿ ಅಥವಾ ಪತ್ನಿಯ ಮನೆಗೆ ಹೋದಾಗ ಹೀಗೆಯೇ ಉಪಚರಿಸಬೇಕು ಎಂಬುದಾಗಿ ಆದೇಶ ಹೊರಡಿಸುವುದು ಅನವಶ್ಯಕ” ಎಂದು ಪರೇಶ್‌ ಉಪಾಧ್ಯಾಯ ಹಾಗೂ ಡಿ. ಭರತ ಚಕ್ರವರ್ತಿ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.

“ದೇಶದಲ್ಲಿ ‘ಅತಿಥಿ ದೇವೋಭವ’ ಎಂಬ ಸಂಸ್ಕೃತಿ ಇದೆ. ಆದರೆ, ಇತ್ತೀಚೆಗೆ ಮನೆಗೆ ಬರುವ ಮಾಜಿ ಪತಿ ಅಥವಾ ಪತ್ನಿಗೆ ಚೆನ್ನಾಗಿ ಉಪಚರಿಸದಿರುವ ಪ್ರಕರಣಗಳು ಕಂಡು ಬಂದಿವೆ. ಹಾಗಾಗಿ, ಮನೆಗೆ ಬರುವ ಮಾಜಿ ಪತಿ ಅಥವಾ ಪತ್ನಿಯನ್ನು ಚೆನ್ನಾಗಿ ಉಪಚರಿಸಬೇಕು” ಎಂದು ಕೃಷ್ಣನ್‌ ರಾಮಸ್ವಾಮಿ ಅವರು ಜುಲೈ ೧೩ರಂದು ಆದೇಶ ಹೊರಡಿಸಿದ್ದರು. ಆದರೆ, ಇದನ್ನು ವಿಭಾಗೀಯ ಪೀಠವು ತಳ್ಳಿಹಾಕಿದೆ. ವಿಚ್ಛೇದನ ಪಡೆದ ದಂಪತಿಯ ಅರ್ಜಿ ವಿಚಾರಣೆ ವೇಳೆ ಏಕಸದಸ್ಯ ಪೀಠವು ಆದೇಶ ಹೊರಡಿಸಿತ್ತು.

ಇದನ್ನೂ ಓದಿ | ಗಂಡನ ಎರಡನೇ ಮದುವೆ; ವಿಚಾರಿಸುತ್ತೇನೆ ಎಂದ ಧರ್ಮಪತ್ನಿ ವೀಣಾ ಕಾಶಪ್ಪನವರ್‌

Exit mobile version