ಮದುರೈ: ದುರ್ಬಲ ಆರ್ಥಿಕ ವರ್ಗ(EWS)ದ ಮೀಸಲಿಗೆ ನಿಗದಿಯಾದ ಆದಾಯ ಮಿತಿಯನ್ನು ರೆಫರೆನ್ಸ್ ಆಗಿಟ್ಟುಕೊಂಡು, ಆದಾಯ ತೆರಿಗೆ ಸಂಗ್ರಹವು ಸಂವಿಧಾನಬಾಹಿರ ಎಂಬ ವಿಚಿತ್ರ ಮನವಿಯ ಅರ್ಜಿಯೊಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠದಲ್ಲಿ (Madras High Court) ದಾಖಲಾಗಿದೆ. ಈ ಸಂಬಂಧ ಉತ್ತರಿಸುವಂತೆ ಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ವರ್ಷಕ್ಕೆ ಯಾರು 2.5 ಲಕ್ಷ ರೂ. ಗಳಿಸುತ್ತಿದ್ದಾರೋ ಅವರು ಆದಾಯ ತೆರಿಗೆ ಸಲ್ಲಿಸಬೇಕೆಂಬ 2022ರ ಹಣಕಾಸು ಕಾಯ್ದೆಯ ಭಾಗವು ಕಾನೂನು ಬಾಹಿರ ಎಂದು ಘೋಷಿಸುವಂತೆ ಆಗ್ರಹಿಸಿ ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಡಿಎಂಕೆಯ ಆಸ್ತಿ ಸಂರಕ್ಷಣಾ ಸಮಿತಿಯ ಸದಸ್ಯ ಕನ್ನೂರು ಶ್ರೀನಿವಾಸನ್(82) ಅವರು ತಮ್ಮ ಅರ್ಜಿ ಜತೆಗೆ, 2022ರ ಹಣಕಾಸು ಕಾಯ್ದೆಯ ಮೊದಲ ಭಾಗದ ಪ್ಯಾರಾಗ್ರಾಫ್ ಲಗತ್ತಿಸಿ, ಟ್ಯಾಕ್ಸ್ ಸ್ಲ್ಯಾಬ್ ಅನ್ನು ಸರ್ಕಾರ ನಿರ್ಧರಿಸುತ್ತದೆ. ಆದರೆ, ಇದು ಸಂವಿಧಾನದ 14, 15, 16, 21 ಮತ್ತು 265 ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದಾರೆ.
ಅರ್ಜಿದಾರರು ತಮ್ಮ ವಾದಕ್ಕೆ ಪುಷ್ಟಿಯನ್ನು ನೀಡಿದ್ದಾರೆ. ಏನೆಂದರೆ- ಕೇಂದ್ರ ಸರ್ಕಾರವೇ ವಾರ್ಷಿಕ 7,99,999 ರೂ. ಆದಾಯ ಹೊಂದಿರುವ ಕುಟುಂಬವನ್ನು ಆರ್ಥಿಕ ದುರ್ಬಲ ಎಂದು ವ್ಯಾಖ್ಯಾನಿಸಿದೆ. ಈ ಕುಟುಂಬವು ಇಡಬ್ಲ್ಯೂಎಸ್ ಮೀಸಲು ಸೌಲಭ್ಯ ಪಡೆಯಲು ಅರ್ಹವಾಗಿದೆ. ಹಾಗಾಗಿ, ಯಾವುದೇ ವ್ಯಕ್ತಿಯ ಆದಾಯವು 7,99,999 ರೂ.ಒಳಗಿದ್ದರೆ ಅಂಥ ವ್ಯಕ್ತಿಯಿಂದ ಆದಾಯ ತೆರಿಗೆಯನ್ನು ಸಂಗ್ರಹಿಸಬಾರದು. ಯಾಕೆಂದರೆ, ಇದರಲ್ಲಿ ಯಾವುದೇ ಸಮಾನತೆಯಾಗಲೀ, ವೈಚಾರಿಕತೆಯಾಗಲೀ ಇಲ್ಲ ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವೇ ನಿರ್ದಿಷ್ಟ ವರ್ಗ ಅಥವಾ ಸಮೂಹವು ಮೀಸಲು ಪಡೆಯಲು ನಿವ್ವಳ ಆದಾಯದ ಮಿತಿಯನ್ನು ಗುರುತಿಸಿದೆ. ಅದೇ ಮಾನದಂಡವನ್ನು ಉಳಿದ ಎಲ್ಲ ವರ್ಗದ ಜನರಿಗೂ ಅನ್ವಯಿಸಬೇಕು ಎಂದು ಅವರು ತಿಳಿಸಿದ್ದಾರೆ. ಈ ಅರ್ಜಿ ವಿಚಾರಣೆಗೆ ಒಪ್ಪಿಕೊಂಡಿರುವ ಹೈಕೋರ್ಟ್ ಪೀಠವು, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಎರಡು ವಾರ ಮುಂದೂಡಿದೆ.
ಇದನ್ನೂ ಓದಿ | EWS Quota | ಶೇ.10 ಇಡಬ್ಲ್ಯೂಎಸ್ ಮೀಸಲು ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಐವರ ಪೈಕಿ ಇಬ್ಬರು ಜಡ್ಜ್ ಭಿನ್ನ ತೀರ್ಪು!